ಬೆಂಗಳೂರು: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು 7 ಮಂದಿ ಸಾವನ್ನಪ್ಪಿದ ಪ್ರಕರಣದ ತನಿಖೆಗೆ ಲೋಕಾಯುಕ್ತದಿಂದ ವಿಶೇಷ ತಂಡ ರಚನೆ ಮಾಡಲಾಗಿದೆ.
ಘಟನೆ ನಂತರ ಸ್ಥಳಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಭೇಟಿಕೊಟ್ಟು ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಬಳಿಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಇದನ್ನೂ ಓದಿ: Bowring Hospital Wall Collapse| ಶಾಲಿನಿ ರಜನೀಶ್, ಮಹೇಶ್ವರ ರಾವ್ ವಿರುದ್ಧ ಕೇಸ್: ಗುಡುಗಿದ ಲೋಕಾಯುಕ್ತ ನ್ಯಾ. ಪಾಟೀಲ್

ತನಿಖಾ ತಂಡದಲ್ಲಿ ಪೊಲೀಸ್ ಅಧೀಕ್ಷಕ ದರ್ಜೆಯ ಅಧಿಕಾರಿಯನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇನ್ನುಳಿದಂತೆ ತಂಡದಲ್ಲಿ ಓರ್ವ ಜಿಲ್ಲಾ ನ್ಯಾಯಾಧೀಶರು, ಲೋಕಾಯುಕ್ತ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯ ಇಂಜಿನಿಯರ್ ಇರಲಿದ್ದಾರೆ. ತನಿಖೆ ನಡೆಸಿ ಇದೇ ತಿಂಗಳ 16ರ ಒಳಗೆ ವರದಿ ನೀಡಲು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಆದೇಶಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತನಿಖಾ ತಂಡ ಇಂದು (ಮೇ 5) ಸಭೆ ನಡೆಸುತ್ತಿದೆ. ಸಭೆಯಲ್ಲಿ ಯಾರಿಗೆಲ್ಲ ನೋಟಿಸ್ ಕೊಟ್ಟು ವಿಚಾರಣೆ ಮಾಡಲು ಚರ್ಚಿಸಲಾಗಿದೆ. ಸಭೆಯಲ್ಲಿ ಬೌರಿಂಗ್ ಆಸ್ಪತ್ರೆಯ ಡೀನ್ ಭಾಗಿಯಾಗಲಿದ್ದು, ಅವರಿಂದ ಅಧಿಕಾರಿಗಳು ಮಾಹಿತಿ ಕಲೆ ಹಾಕಲಿದ್ದಾರೆ.
ಈಗಾಗಲೇ ಘಟನಾ ಸ್ಥಳದಿಂದ ಸಿಮೆಂಟ್, ಮಣ್ಣು, ಕಲ್ಲು ಮತ್ತು ಇತರೆ ಸ್ಯಾಂಪಲ್‍ಗಳನ್ನು ಇಂಜಿನಿಯರ್‍ಗಳ ತಂಡ ಸಂಗ್ರಹಿಸಿದೆ. ಸ್ಯಾಂಪಲ್ ಆಧಾರದ ಮೇಲೆ ಆಸ್ಪತ್ರೆ ಆಡಳಿತ ಮಂಡಳಿಯವರನ್ನು ಕೂಡ ಕರೆದು ತನಿಖಾ ತಂಡ ವಿಚಾರಣೆ ನಡೆಸಲಿದೆ.
ಒಂದು ಕಡೆ ಡಿಸಿ ನೇತೃತ್ವದಲ್ಲಿ ತನಿಖೆ, ಮತ್ತೊಂದು ಕಡೆ ಇಂಜನಿಯರ್‍ಗಳ ತಂಡ ಹಾಗೂ ಲೋಕಾಯುಕ್ತದಿಂದ ತನಿಖೆ ನಡೆಯಲಿದೆ. ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ದುರಂತ – ಸಿಎಂ ಸೂಚನೆ ಬೆನ್ನಲ್ಲೇ ಇಬ್ಬರು ಇಂಜಿನಿಯರ್ ಅಮಾನತು

