ಚಿಕ್ಕಮಗಳೂರು: ಬೆಂಕಿಗಾಹುತಿಯಾದ ಮೆರುತಿ ಗುಡ್ಡದ ವಿಶೇಷತೆ ಏನ್ ಗೊತ್ತಾ..?

Public TV
1 Min Read

ಚಿಕ್ಕಮಗಳೂರು: ಈ ಬಾರಿಯ ಭೀಕರ ಬರಗಾಲದಿಂದ ರಾಜ್ಯಾದ್ಯಂತ ಸಾವಿರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಅರಣ್ಯಕ್ಕೆ ಬೆಂಕಿ ಬಿದ್ದಾಗೆಲ್ಲಾ ಸ್ಥಳಿಯರು ಮಾಹಿತಿ ನೀಡಿದ್ರು ಅರಣ್ಯ ಅಧಿಕಾರಿಗಳು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬರೋದಿಲ್ಲ ಅನ್ನೋದು ರಾಜ್ಯದ ಜನರ ಆರೋಪ. ಅದೇ ರೀತಿ, ರಾಜ್ಯದ ಅತಿ ಎತ್ತರದ ಶಿಖರಗಳಲ್ಲಿ ಒಂದಾದ ಚಿಕ್ಕಮಗಳೂರಿನ ಮೆರುತಿ ಗುಡ್ಡಕ್ಕೂ ಬೆಂಕಿ ಬಿದ್ದು ಮುನ್ನೂರು ಎಕರೆಗೂ ಅಧಿಕ ಅರಣ್ಯ ನಾಶವಾದ್ರು ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಸಮುದ್ರಮಟ್ಟದಿಂದ 5700 ಅಡಿ ಎತ್ತರದಲ್ಲಿರೋ ಈ ಗುಡ್ಡಕ್ಕೆ ರಾಜ್ಯದಲ್ಲಿ ಏಳನೇ ಸ್ಥಾನವಿದೆ. ಪಿರಮಿಡ್ ಆಕಾರದಲ್ಲಿರೋ ಈ ಗುಡ್ಡ ಲಕ್ಷಾಂತರ ಪ್ರವಾಸಿ ಪ್ರಿಯರಗೂ ಇಷ್ಟವಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಕೊಪ್ಪ ತಾಲೂಕಿನ ವ್ಯಾಪ್ತಿಗೆ ಬರೋ ಈ ಗುಡ್ಡ ಎರಡೂ ತಾಲೂಕಿನ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಆದ್ರೆ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಬಿದ್ದಿದ್ದು, ಮುನ್ನೂರು ಎಕರೆಗೂ ಅಧಿಕ ಅರಣ್ಯ ನಾಶವಾಗಿದೆ. ಆದರೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಾರದಿರೋದು ಮಾತ್ರ ದುರಂತ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಗುಡ್ಡ ಉಡುಪಿಯ ಕೊಬ್ರಿ ಹಾಗೂ ಹೊರನಾಡಿಗೂ ಕಾಣುವಷ್ಟು ಎತ್ತರದಲ್ಲಿದೆ. ಈ ಗುಡ್ಡಕ್ಕೆ ಪ್ರತಿ ವರ್ಷ ಬೆಂಕಿ ಬೀಳುತ್ತೆ. ಆದರೆ ಯಾವಾಗ ಮಾಹಿತಿ ನೀಡಿದ್ರು ಅರಣ್ಯ ಇಲಾಖೆಯ ಸಿಬ್ಬಂದಿ ಸರಿಯಾದ ಸಮಯಕ್ಕೆ ಬರೋದಿಲ್ಲ ಅನ್ನೋದು ಸ್ಥಳಿಯರ ಆರೋಪ. ಗುಡ್ಡಕ್ಕೆ ಬೆಂಕಿ ಬಿದ್ದಿದ್ರಿಂದ ನೂರಾರು ಪ್ರಾಣಿ ಪಕ್ಷಿಗಳು ಬೆಂಕಿಗಾಹುತಿಯಾಗಿವೆ. ಚಿಕ್ಕಮಗಳೂರಿನ ಸೌಂದರ್ಯವನ್ನ ಹೆಚ್ಚಿಸೋದ್ರಲ್ಲಿ ಈ ಗುಡ್ಡ ಪ್ರಮುಖ ಪಾತ್ರ ವಹಿಸಿತ್ತು. ಕೊಪ್ಪ, ಶೃಂಗೇರಿ, ಹೊರನಾಡು, ಕಳಸಕ್ಕೆ ಭೇಟಿ ನೀಡೋ ಪ್ರವಾಸಿಗ್ರು ಪಿರಮಿಡ್ ಆಕಾರದ ಈ ಬೆಟ್ಟವನ್ನ ನೋಡಿ ಆನಂದಿಸುತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *