ಚಿಕ್ಕಬಳ್ಳಾಪುರ ಅಪಘಾತ ಪ್ರಕರಣ- ಮೃತರ ಸಂಖ್ಯೆ 8ಕ್ಕೆ ಏರಿಕೆ

Public TV
2 Min Read

– 9 ಮಂದಿಗೆ ಗಾಯ, 8 ಜನರ ಸ್ಥಿತಿ ಗಂಭೀರ
– ಅದೃಷ್ಟವಶಾತ್ 8 ವರ್ಷದ ಬಾಲಕ ಪಾರು

ಚಿಕ್ಕಬಳ್ಳಾಪುರ: ಬರೋಬ್ಬರಿ 17 ಮಂದಿ ಪ್ರಯಾಣಿಸುತ್ತಿದ್ದ ಜೀಪ್ ಗೆ ಯಮಸ್ವರೂಪಿ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ 8 ಮಂದಿ ಬಲಿಯಾಗಿದ್ದಾರೆ. 8 ಮಂದಿ ಆಸ್ಪತ್ರೆ ಪಾಲಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಓರ್ವ ಬಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಜಿಲ್ಲೆಯ ಚಿಂತಾಮಣಿ ತಾಲೂಕಿನ ಮರಿನಾಯನಕನಹಳ್ಳಿ ಗೇಟ್ ಬಳಿ ಅಪಘಾತ ನಡೆದಿದ್ದು, ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮರಿನಾಯಕನಹಳ್ಳಿ ಗೇಟ್ ಬಳಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ವಿನಿಂದ ಚಿಂತಾಮಣಿ ನಗರಕ್ಕೆ ಕೆಎ-07 ಎಂ-2017 ನಂಬರಿನ ಜೀಪ್ ನಲ್ಲಿ ಚಾಲಕ ರಮೇಶ್ ಸೇರಿ 17 ಮಂದಿ ಪ್ರಯಾಣಿಸುತ್ತಿದ್ದರು. ಮರಿನಾಯಕನಹಳ್ಳಿ ಗೇಟ್ ಬಳಿ ಮತ್ತೊಂದು ವಾಹನ ಹಿಂದಿಕ್ಕುವ ಭರದಲ್ಲಿ ಬೆಂಗಳೂರು ರಸ್ತೆಯಿಂದ ಮದನಪಲ್ಲಿ ಕಡೆಗೆ ವೇಗವಾಗಿ ಮುನ್ನುಗುತ್ತಿದ್ದ ಎನ್ ಎಲ್-01 ಎಡಿ-2376 ನಂಬರಿನ ಸಿಮೆಂಟ್ ಲಾರಿ ಜೀಪ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದು, ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮತ್ತಿಬ್ಬರು ಮೃತರಾಗಿದ್ದಾರೆ. ಘಟನೆಯಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ. 9 ರಲ್ಲಿ 8 ಜನರನ್ನು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಾಶತ್ ಓರ್ವ 8 ವರ್ಷದ ಬಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ- 6 ಮಂದಿ ಸಾವು, 11 ಜನರಿಗೆ ಗಂಭೀರ ಗಾಯ

ಮೃತರ ವಿವರ
ಮೃತರನ್ನು ಚಿಂತಾಮಣಿ ನಗರದ ಸೊಣ್ಣಶೆಟ್ಟಿಗಳ್ಳಿಯ ನಾರಾಯಣಸ್ವಾಮಿ(55), ಚಿಂತಾಮಣಿ ತಾಲೂಕಿನ ಗೋಪಲ್ಲಿಯ ಮುನಿರತ್ನಮ್ಮ(49), ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡುವಿನ ಜೀಪ್ ಚಾಲಕ ರಮೇಶ್(45), ಆಂಧ್ರ ಮೂಲದ ನಾರನ್ನಗಾರಪಲ್ಲಿಯ ವೆಂಕಟಲಕ್ಷ್ಮಮ್ಮ(59), ಕಿತ್ತಗನೂರು ಗ್ರಾಮದ ಮುನಿಕೃಷ್ಣಪ್ಪ(49), ರಾಜಪ್ಪ(66), ಶ್ರೀನಿವಾಸಪುರ ಮೂಲದ ನಿಖಿಲ್(20) ಹಾಗೂ ಮೋನಿಕಾ(28) ಎಂದು ಗುರುತಿಸಲಾಗಿದೆ.

ಅಪಘಾತವಾದ ರಸ್ತೆಯಲ್ಲೇ ಹಾದು ಹೋದ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಹಾಗೂ ಮಾಲೂರು ಶಾಸಕ ನಂಜೇಗೌಡ ಸೇರಿದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಘಟನೆಗೆ ಆರ್‍ಟಿಒ ಹಾಗೂ ಪೊಲೀಸರ ನಿರ್ಲಕ್ಷವೇ ಕಾರಣ. ಅವರೇ ಹೊಣೆ ಹೊರಬೇಕಾಗುತ್ತೆ ಎಂದು ಆರೋಪಿಸಿದರು. ಇದನ್ನೂ ಓದಿ:ನಿಧಿ ಆಸೆಗೆ ಕಿಡಿಗೇಡಿಗಳಿಂದ ಪ್ರಾಚೀನ ಶಿವನ ದೇವಾಲಯ ಧ್ವಂಸ

ಆಪಘಾತದ ನಡುವೆ ಹಲವು ಪ್ರಶ್ನೆಗಳು
ವೈಟ್ ಬೋರ್ಡ್ ನಂಬರಿನ ವಾಹನದಲ್ಲಿ ಪ್ಯಾಸೆಂಜರ್ ಸಾಗಿಸಲು ಅನುಮತಿ ಕೊಟ್ಟವರ್ಯಾರು? 7-8 ಮಂದಿ ಪ್ರಯಾಣಿಸಬೇಕಾದ ಜೀಪಿನಲ್ಲಿ 17 ಮಂದಿ ಹೇಗೆ ಪ್ರಯಾಣಿಸುತ್ತಿದ್ದರು? ಇದಕ್ಕೆಲ್ಲ ಕಡಿವಾಣ ಹಾಕಬೇಕಾದ ಸಾರಿಗೆ ಇಲಾಖೆ ಹಾಗೂ ಪೊಲೀಸರು ಏನ್ ಮಾಡುತ್ತಿದ್ದರು ಎಂಬುದು ಎಲ್ಲರ ಪಶ್ನೆಯಾಗಿದೆ. ಮತ್ತೊಂದೆಡೆ ಸಮರ್ಪಕ ಸರ್ಕಾರಿ ಬಸ್ ಸೌಲಭ್ಯ ಇಲ್ಲದೆ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ. ಇದು ಕೂಡ ಅಪಘಾತಗಳಿಗೆ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಎಚ್ಚೆತ್ತುಕೊಂಡು ಅಪಘಾತಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ. ಅಪಘಾತ ನಂತರ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಎಸ್‍ಪಿ ಮಿಥುನ್ ಕುಮಾರ್ ಹಾಗೂ ಐಜಿಎಂ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *