ಪೊಲೀಸರಿಂದ 41 ಲಕ್ಷ ಮೌಲ್ಯದ ಚಿನ್ನಾಭರಣ, ವಾಹನ ವಶ – ಮಾಲೀಕರಿಗೆ ಹಸ್ತಾಂತರ

Public TV
2 Min Read

ಚಿಕ್ಕಬಳ್ಳಾಪುರ : ಜಿಲ್ಲೆಯ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ಉಪವಿಭಾಗದ ವಿವಿಧ ಠಾಣೆಗಳಲ್ಲಿ ವಿವಿಧ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಒಟ್ಟು 41,21,744 ರೂ. ಮೌಲ್ಯದ ಚಿನ್ನಾಭರಣ, ಲ್ಯಾಪ್ ಟಾಪ್ ಗಳು, ಮೊಬೈಲ್ ಗಳು, ದ್ವಿಚಕ್ರ ವಾಹನಗಳು ಮತ್ತು ಸರಕು ಸಾಗಾಣಿಕೆ ವಾಹನಗಳನ್ನು ಚಿಕ್ಕಬಳ್ಳಾಪುರ ಪೋಲೀಸರು ವಶಪಡಿಸಿಕೊಂಡು ಇಂದು ಮಾಲೀಕರಿಗೆ ವಿತರಿಸಲಾಯಿತು.

ಕೇಂದ್ರ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಎಂ.ಚಂದ್ರಶೇಖರ್ ನೇತೃತ್ವದಲ್ಲಿ ಮಾಲೀಕರಿಗೆ ವಸ್ತುಗಳನ್ನು ವಿತರಿಸಲಾಯಿತು. ನಗರದ ಹೊರವಲಯದ ಅಣಕನೂರು ಬಳಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂತಾಮಣಿ ಉಪವಿಭಾಗದ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ 4.90 ಲಕ್ಷ ರೂ. ಮೌಲ್ಯದ 98 ಗ್ರಾಂ ತೂಕದ ಬಂಗಾರದ ಒಡವೆಗಳು, 45,000 ರೂ. ಮೌಲ್ಯದ 2 ಲ್ಯಾಪ್ ಟಾಪ್, 34,000 ರೂ. ಮೌಲ್ಯದ 1 ಕಂಪ್ಯೂಟರ್, 14 ಲಕ್ಷ ರೂ. ಮೌಲ್ಯದ 56 ಬೋರ್ ವೆಲ್ ಬಿಟ್ ಗಳು ಹಾಗೂ 5.60 ಲಕ್ಷ ರುಪಾಯಿ ಮೌಲ್ಯದ ಬೊಲೆರೋ ಟೆಂಪೋ ಸೇರಿ ಒಟ್ಟು 25.29 ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿದೆ ಎಂದರು.

ಶಿಡ್ಲಘಟ್ಟ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಸುಮಾರು 2,59,744 ರೂ. ಮೌಲ್ಯದ 18 ಮೊಬೈಲ್ ಗಳು ಮತ್ತು 1 ಡಿವಿಆರ್ ನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ 10 ಲಕ್ಷ ರೂ. ಮೌಲ್ಯದ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ, ಅಪೇ ಆಟೋ, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ 85,000 ರೂ. ಬೆಲೆ ಬಾಳುವ 1 ದ್ವಿಚಕ್ರ ವಾಹನ, ನಗರ ಠಾಣೆಯಲ್ಲಿ 83000 ರು. ಮೌಲ್ಯದ ಎರಡು ದ್ವಿಚಕ್ರ ವಾಹನ, ಬಟ್ಲಹಳ್ಳಿ ಠಾಣೆಯಲ್ಲಿ 2.50 ಲಕ್ಷ ರೂ. ಮೌಲ್ಯದ 54 ಗ್ರಾಂ ಬಂಗಾರದ ನಕ್ಲೇಸ್ ಮತ್ತು ಲಾಂಗ್ ಚೈನುಗಳನ್ನು ಪತ್ತೆ ಮಾಡಿ ಮಾಲೀಕರಿಗೆ ವಿತರಿಸಲಾಗಿದೆ ಎಂದರು. ಇದೇ ವೇಳೆ ಕಳವು ಪ್ರಕರಣಗಳ ಪತ್ತೆಯಲ್ಲಿ ಉತ್ತಮ ಕೆಲಸ ಮಾಡಿದ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ತಾಲಿಬಾನಿಗಳನ್ನ RSS, ಬಜರಂಗದಳಕ್ಕೆ ಹೋಲಿಸಿದ ಕವಿ ಮುನ್ವರ್ ರಾಣಾ

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಚಿಕ್ಕಬಳ್ಳಾಪುರ ಡಿವೈಎಸ್ ಪಿ ವಾಸುದೇವ್, ಚಿಂತಾಮಣಿ ಡಿವೈಎಸ್ಪಿ ಲಕ್ಷ್ಮಯ್ಯ ಹಾಗೂ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು. ಇದನ್ನೂ ಓದಿ: “ಜೋರಾದ ಸದ್ದು ಕೇಳಿಸ್ತು.. ನೋಡಿದ್ರೆ ಮನೆ ಮೇಲೆ ಇಬ್ರು ಬಿದ್ದಿದ್ರು”

Share This Article
Leave a Comment

Leave a Reply

Your email address will not be published. Required fields are marked *