ಕೇಂದ್ರ ಸರ್ಕಾರ ಎರಡು ವರ್ಷಕ್ಕೂ ಹೆಚ್ಚು ದಿನಗಳ ಕಾಲ ಉಳಿಯಲ್ಲ: ಮಮತಾ ಬ್ಯಾನರ್ಜಿ

Public TV
1 Min Read

-ಟಿಎಂಸಿ ಶಾಸಕರಿಗೆ 2 ಕೋಟಿ, ಪೆಟ್ರೋಲ್ ಪಂಪ್ ಆಫರ್

ಕೋಲ್ಕತ್ತಾ: ಕೇಂದ್ರದ ಬಿಜೆಪಿ ಸರ್ಕಾರ ಕಾರ್ಯ ನಿರ್ವಹಿಸುತ್ತಿರುವ ವಿಧಾನವನ್ನು ನೊಡಿದರೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸೇರದಿದ್ದಲ್ಲಿ ಚಿಟ್ ಫಂಡ್ ಹಗರಣ ಪ್ರಕರಣಗಳಲ್ಲಿ ಕೇಂದ್ರದ ಏಜೆನ್ಸಿಗಳ ಮೂಲಕ ದಾಳಿ ನಡೆಸಿ ಜೈಲಿಗೆ ಕಳುಹಿಸುವುದಾಗಿ ಟಿಎಂಸಿ ನಾಯಕರಿಗೆ ಬೆದರಿಕೆ ಹಾಕುತ್ತಿದೆ. ಈ ಮೂಲಕ ನಮ್ಮ ನಾಯಕರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಬಿಜೆಪಿಗೆ ಸೇರುತ್ತೀರೋ ಇಲ್ಲವೋ ಜೈಲು ಸೇರುತ್ತೀರೋ ಎಂದು ಅವರಿಗೆ ಕೇಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಶಾಸಕರನ್ನು ಖರೀದಿಸುವುದರಲ್ಲೇ ಕಾಲ ಕಳೆಯುತ್ತಿದ್ದು, ಸರ್ಕಾರ ನಡೆಯುತ್ತಿರುವ ವಿಧಾನವನ್ನು ನೋಡಿದರೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದು, ತೃಣಮೂಲ ಕಾಂಗ್ರೆಸ್ ಶಾಸಕರಿಗೆ 2 ಕೋಟಿ ರೂ. ಹಾಗೂ ಪೆಟ್ರೋಲ್ ಪಂಪ್ ಆಫರ್ ಮಾಡುತ್ತಿದೆ. ಕರ್ನಾಟಕದಲ್ಲಿ ಮಾಡಿದಂತೆ ಪಶ್ಚಿಮ ಬಂಗಾಳದಲ್ಲಿಯೂ ಸಹ ಬಿಜೆಪಿ ಕುದುರೆ ವ್ಯಾಪಾರಕ್ಕೆ ತೊಡಗಿಕೊಂಡಿದೆ ಎಂದು ದೂರಿದರು.

ಬಿಜೆಪಿ ಈವರೆಗೆ ವಶಪಡಿಸಿಕೊಂಡಿರುವ ಕಪ್ಪುಹಣದ ಮಾಹಿತಿ ನೀಡುವಂತೆ ಜು.26ರಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಸಂಸತ್ ಸುಗಮವಾಗಿ ನಡೆಸುವ ಮನ್ನಣೆ ವಿರೋಧ ಪಕ್ಷಗಳಿಗೆ ಸಲ್ಲುತ್ತದೆ. ಅಧಿಕಾರದಲ್ಲಿರುವವರಿಗೆ ಅಲ್ಲ ಎಂದು ಎಂದು ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದರು.

Share This Article
Leave a Comment

Leave a Reply

Your email address will not be published. Required fields are marked *