ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ನೆಪದಲ್ಲಿ ನ್ಯಾಯಾಧಿಕರಣ ರಚಿಸಲು ಕೇಂದ್ರ ಹುನ್ನಾರ: ಕುಮಾರಸ್ವಾಮಿ

Public TV
3 Min Read

ಬೆಂಗಳೂರು: ದಕ್ಷಿಣ ಪಿನಾಕಿನಿ (Pennar) ನದಿ ನೀರಿನ ವಿಷಯದಲ್ಲಿ ಕೇಂದ್ರದ ಬಿಜೆಪಿ (BJP) ಸರ್ಕಾರ ಕನ್ನಡಿಗರ (Kannadigas) ಹಕ್ಕು ಕಸಿದು ಕಿರುಕುಳ ನೀಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯಕ್ಕೆ ಹೊಸ ನ್ಯಾಯಾಧಿಕರಣ ರಚನೆ ಮಾಡುವ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರ ಅಕ್ಷಶಃ ರಾಜ್ಯದ ಪಾಲಿಗೆ ಮರಣಶಾಸನ. ಇದನ್ನು ರಾಜ್ಯ ಬಿಜೆಪಿ ಸರ್ಕಾರ ಮುಲಾಜಿಲ್ಲದೆ ವಿರೋಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಪಾಲಿಗೆ ಮಾರಕ ಎನ್ನುವುದು ಪದೇಪದೇ ರುಜುವಾತಾಗುತ್ತಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ಅವು ಕನ್ನಡಿಗರನ್ನು ಕಾಡುತ್ತಲೇ ಇವೆ ಎಂದು ಟೀಕಿಸಿದ್ದಾರೆ.

ಕಾವೇರಿ ವಿವಾದದಲ್ಲಿ ಕರ್ನಾಟಕವು ಒಂದು ಶತಮಾನ ಕಾಲ ಸಂಘರ್ಷ ನಡೆಸಿದ್ದಾಯಿತು. ಮೇಕೆದಾಟು ವಿವಾದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇನ್ನೂ ತುಪ್ಪ ಸುರಿಯುತ್ತಾ, ಆ ಯೋಜನೆಗೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದೆ. ಆಗಲೇ ಪಿನಾಕಿನಿ ನದಿ ವಿಷಯದಲ್ಲಿ ರಾಜ್ಯಕ್ಕೆ ಕಾನೂನು ಕುಣಿಕೆ ಬಿಗಿಯಲು ಬಿಜೆಪಿ ಸರ್ಕಾರ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಕಾರಣಕ್ಕಾಗಿ ದಕ್ಷಿಣ ಪಿನಾಕಿನಿ ನದಿ ನೀರಿನ ಹಕ್ಕನ್ನು ಕರ್ನಾಟಕದಿಂದ ಕಸಿಯಲು ಕೇಂದ್ರ ಹವಣಿಸುತ್ತಿದೆ. ಕಾವೇರಿ, ಕೃಷ್ಣಾ, ಮಹದಾಯಿ ಸೇರಿ ವಿವಿಧ ಜಲ ವಿವಾದಗಳಲ್ಲಿ ಕರ್ನಾಟಕವನ್ನು ಕಾಡಿದಂತೆ, ವಿವಾದವೇ ಅಲ್ಲದ ದಕ್ಷಿಣ ಪಿನಾಕಿನಿಯನ್ನೂ ವಿವಾದದ ಕೂಪಕ್ಕೆ ತಳ್ಳಿ ಕನ್ನಡಿಗರನ್ನು ಕಾಡುವ ಹವಣಿಕೆ ಇದಷ್ಟೇ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಜನರ ಮುಂದೆ ಏಕೆ ರಾಜಕೀಯವಾಗಿ ಬೆತ್ತಲಾಗ್ತೀರಿ – ಕಾಂಗ್ರೆಸ್‌ಗೆ ಸುಧಾಕರ್ ತಿರುಗೇಟು

ರಾಜಕೀಯ ಲಾಭದ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ನೆಲ, ಜಲ, ಭಾಷೆಯಂತಹ ವಿಷಯಗಳನ್ನು ಇಟ್ಟುಕೊಂಡು ದಕ್ಷಿಣ ರಾಜ್ಯಗಳ ನಡುವೆ ಜಗಳ ಹಚ್ಚಲು ಷಡ್ಯಂತ್ರ ನಡೆಸಿದೆ. ರಾಜ್ಯದ ವಿರೋಧವಿದ್ದರೂ ಕೇಂದ್ರವು ನ್ಯಾಯಾಧಿಕರಣ ರಚನೆ ಮಾಡಲು ಹೊರಟಿದೆ. ಇದು ಸರಿಯಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರನ್ನು ಮತ್ತೊಮ್ಮೆ ಜಲದಾಸ್ಯಕ್ಕೆ ದೂಡುವುದನ್ನು ನಾವು ಸಹಿಸುವುದಿಲ್ಲ ಎಂದು ಕಿಡಿಕಾರಿರುವ ಅವರು, ಗೋದಾವರಿ-ಕೃಷ್ಣಾ-ಪಿನಾಕಿನಿ-ಕಾವೇರಿ ನದಿ ಜೋಡಣೆ ಯೋಜನೆಯಲ್ಲೂ ಕೇಂದ್ರವು ರಾಜ್ಯಕ್ಕೆ ಸೊನ್ನೆ ಸುತ್ತಿದೆ. ಕಳೆದ ಫೆಬ್ರವರಿ 18 ರಂದು ಸಭೆ ನಡೆಸಿದ ಕೇಂದ್ರ, ಗೋದಾವರಿಯಿಂದ 247 ಟಿಎಂಸಿ ನೀರನ್ನು ಕೃಷ್ಣಾ, ಪೆನ್ನಾರ್ ಮೂಲಕ ಕಾವೇರಿಗೆ ಹರಿಸುವ ಯೋಜನೆಯ ಮಾಹಿತಿ ನೀಡಿತು. ಇಷ್ಟು ನೀರನ್ನು ತೆಲಂಗಾಣ, ಆಂಧ್ರ, ತಮಿಳುನಾಡಿಗೆ ಮಾತ್ರ ಹಂಚಿತು. ಈ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕ ಪ್ರಮುಖ ಪಾಲುದಾರ ಮತ್ತು ಹಕ್ಕುದಾರ ರಾಜ್ಯ. ಆದರೆ, 247 ಟಿಎಂಸಿಯಲ್ಲಿ ರಾಜ್ಯಕ್ಕೆ ಸಿಕ್ಕಿರುವುದು ಶೂನ್ಯ. ಆ ಸಭೆಯಲ್ಲಿ ರಾಜ್ಯಕ್ಕೆ ಅಪಮಾನ ಮಾಡಲಾಯಿತು ಎಂಬ ಮಾಹಿತಿಯೂ ಬಂದಿತ್ತು ಎಂದು ಹೇಳಿದ್ದಾರೆ.

ಗೋದಾವರಿ-ಕೃಷ್ಣಾ-ಪಿನಾಕಿನಿ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ಹನಿ ನೀರನ್ನೂ ಹಂಚಿಕೆ ಮಾಡಿಲ್ಲ ಎಂದರೆ, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕರ್ನಾಟಕದ ಮೇಲೆ ಅದೆಷ್ಟು ನಿರ್ಲಕ್ಷ್ಯ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಕನ್ನಡಿಗರು ತಬ್ಬಲಿಗಳಾಗುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸಂಸತ್ತಿನಲ್ಲಿ ಅಲವತ್ತುಕೊಂಡರೂ ಕೇಂದ್ರವು ಕನ್ನಡಿಗರ ಮೇಲೆ ಕಠಿಣ ನೀತಿ ಮುಂದುವರಿಸಿದೆ. ದಕ್ಷಿಣ ಪಿನಾಕಿನಿ ವಿಷಯದಲ್ಲಿ ನ್ಯಾಯಾಧೀಕರಣ ರಚನೆ ಒಪ್ಪುವುದಿಲ್ಲ. ನೆಲ, ಜಲ, ಭಾಷೆ ವಿಚಾರದಲ್ಲಿ ದಕ್ಷಿಣ ರಾಜ್ಯಗಳನ್ನು ಒಡೆದಾಳುವ ಬಿಜೆಪಿಯ ಕುತ್ಸಿತ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯದ ನೀರಾವರಿ ಹಿತಾಸಕ್ತಿಗಳ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ, ಕಮಿಷನರ್ ಅನುಮತಿ ಇಲ್ಲದೆ ಮಾಡಲು ಆಗುತ್ತಾ?- ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *