ಮಕ್ಕಳನ್ನು ಹೆರುವ ವಿಷಯದ ಆಯ್ಕೆ ಮಹಿಳೆಗೆ ಬಿಟ್ಟಿದ್ದು – ಹೈಕೋರ್ಟ್

Public TV
2 Min Read

ತಿರುವನಂತಪುರಂ: ಗರ್ಭ ಧರಿಸುವ ಅಥವಾ ಧರಿಸದೇ ಇರುವ ಮಹಿಳೆಯ ಸಂತಾನೋತ್ಪತ್ತಿ (Reproductive) ಆಯ್ಕೆ ವಿಚಾರದಲ್ಲಿ ಮಹಿಳಾ ಹಕ್ಕಿಗೆ (Woman’s Right) ಯಾವುದೇ ನಿರ್ಬಂಧವಿಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಹೇಳಿದೆ.

ಸುಚಿತ್ರಾ ಶ್ರೀವಾಸ್ತವ ವರ್ಸಸ್ ಚಂಡೀಗಢ ಆಡಳಿತ ಪ್ರಕರಣದಲ್ಲಿ ಸುಪ್ರೀಂಕೋರ್ಟ್ (Supreme Court) ನೀಡಿದ ತೀರ್ಪನ್ನು ಉಲ್ಲೇಖಿಸಿ ನ್ಯಾಯಮೂರ್ತಿ ವಿ.ಜಿ ಅರುಣ್ ನೇತೃತ್ವದ ಏಕಸದಸ್ಯ ಪೀಠವು, ಸಂವಿಧಾನದ-21 (Constitution of India) ವಿಧಿಯ ಅಡಿ ಸಂತಾನೋತ್ಪತ್ತಿ ಆಯ್ಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಹಕ್ಕು ಮಹಿಳೆಗೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: 

ಗರ್ಭಧರಿಸುವ ಅಥವಾ ಗರ್ಭಧರಿಸದೇ ಇರುವ ತನ್ನ ಆಯ್ಕೆಯ ಹಕ್ಕನ್ನು ಚಲಾಯಿಸಲು ಮಹಿಳೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಇದು ಆಕೆಯ ವೈಯಕ್ತಿಕ ಸ್ವಾತಂತ್ರ‍್ಯದ ಭಾಗವಾಗಿದೆ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

20 ವಾರ ಮೀರಿದ ಗರ್ಭಾವಸ್ಥೆಯನ್ನು ಗರ್ಭಪಾತ ಮಾಡಿಸುವ ಆಯ್ಕೆ ವಿಧಾನದಿಂದ ಅವಿವಾಹಿತ ಮಹಿಳೆಯನ್ನು ಹೊರಗಿಡುವುದು ಸಂವಿಧಾನ 14ನೇ ವಿಧಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಇತ್ತೀಚೆಗೆ ಹೇಳಿದ್ದನ್ನು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿತು.

ಸಹಪಾಠಿಯೊಂದಿಗೆ ನಡೆಸಿದ ಒಪ್ಪಿತ ಲೈಂಗಿಕ ಸಂಪರ್ಕದಿಂದಾಗಿ ಗರ್ಭ ಧರಿಸಿದ್ದನ್ನು ತೆಗೆಸಲು ಕೋರಿ 23 ವರ್ಷದ ಎಂಬಿಎ ವಿದ್ಯಾರ್ಥಿನಿ (MBA Student) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಪೀಠವು ಈ ಆದೇಶ ಮಾಡಿತು.

ಏನಿದು ಪ್ರಕರಣ?
ಗರ್ಭ ನಿರೋಧಕ ವಿಫಲವಾಗಿದ್ದರಿಂದ ಎಂಬಿಎ ವಿದ್ಯಾರ್ಥಿನಿ ಗರ್ಭ ಧರಿಸಿದ್ದಳು. ಅಲ್ಲದೇ ಆಕೆ ಪಾಲಿಸಿಸ್ಟಿಕ್ ಓವೇರಿಯನ್ ಕಾಯಿಲೆಯಿಂದ ಬಳಲುತ್ತಿದ್ದಳು. ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿಸಿದ ಬಳಿಕ ಗರ್ಭಧರಿಸುವ ವಿಚಾರ ತಿಳಿದಿದೆ.

ವಿದ್ಯಾರ್ಥಿನಿ ನಿಯಂತ್ರಿತವಾಗಿ ಮುಟ್ಟಾಗದೇ ಇರುವುದರಿಂದ ತಪಾಸಣೆಗೆ ವೈದ್ಯರ ಬಳಿ ತೆರಳಿದ್ದಳು. ಈ ವೇಳೆ ವೈದ್ಯರು ಅಲ್ಟ್ರಾ ಸ್ಕ್ಯಾನ್ ಮಾಡಿಸಲು ಸೂಚಿಸಿದ್ದಾರೆ. ಬಳಿಕವೇ ಈ ವಿಚಾರ ತಿಳಿದಿದೆ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಯಾತನೆ ಅನುಭವಿಸುತ್ತಿದ್ದು, ಲೈಂಗಿಕ ಸಂಬಂಧ ಹೊಂದಿದ್ದ ಸಹಪಾಠಿಯು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳಿದ್ದಾನೆ ಎಂದು ಆಕೆ ಮನವಿಯಲ್ಲಿ ವಿವರಿಸಿದ್ದಾಳೆ.

ಗರ್ಭಧಾರಣೆಯನ್ನು ಮುಂದವರಿಸಿದರೆ ಮಾನಸಿಕ ವೇದನೆ ಹೆಚ್ಚಾಗಲಿದೆ. ಜೊತೆಗೆ ಮಗು ಪಡೆಯುವುದು ಶಿಕ್ಷಣ ಮತ್ತು ಜೀವನ ನಿರ್ವಹಣೆಗೆ ಅಡ್ಡಿಯಾಗಲಿದೆ. ಗರ್ಭಾವಸ್ಥೆಯು 24 ವಾರ ದಾಟಿರುವುದರಿಂದ ಯಾವುದೇ ಆಸ್ಪತ್ರೆ ಗರ್ಭಪಾತ ಮಾಡಿಸಲು ಸಿದ್ಧವಿಲ್ಲ. ಹೀಗಾಗಿ, ನ್ಯಾಯಾಲಯ ಮೆಟ್ಟಿಲೇರಿದ್ದಾಗಿ ಆಕೆ ಮನವಿಯಲ್ಲಿ ಉಲ್ಲೇಖಿಸಿದ್ದಳು. ಇದನ್ನೂ ಓದಿ: ಕೋಟೆ ನಾಡಿನಲ್ಲಿ ದಾರುಣ ಘಟನೆ – ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಇದನ್ನು ಪರಿಗಣಿಸಿರುವ ಪೀಠವು ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿಸಿದೆ. ಪ್ರಕ್ರಿಯೆ ನಡೆಸಲು ವೈದ್ಯಕೀಯ ತಂಡ ರಚಿಸುವಂತೆ ಸಂಬಂಧಿತ ಆಸ್ಪತ್ರೆಗೆ ನಿರ್ದೇಶಿಸಿದೆ. ಒಂದೊಮ್ಮೆ ಮಗು ಜೀವಂತವಾಗಿ ಉಳಿದರೆ ಮಗುವಿಗೆ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಆಸ್ಪತ್ರೆಗೆ ನಿರ್ದೇಶನ ನೀಡಿದೆ.

ಅರ್ಜಿದಾರರ ಪರ ವಕೀಲರಾದ ಆಕಾಶ್ ಎಸ್, ಗಿರೀಶ್ ಕುಮಾರ್, ವಿ.ಎಸ್ ವರಲಕ್ಷ್ಮೀ ಹಾಗೂ ಎಸ್. ನೀತು ವಾದಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *