ನನ್ನ ಮೇಲಿನ ಗುತ್ತಿಗೆದಾರರ ಎರಡೂ ಆರೋಪಗಳು ನಿರಾಧಾರ – ರವಿ ಬೋಸರಾಜು

Public TV
2 Min Read

ರಾಯಚೂರು: ಗುತ್ತಿಗೆದಾರರ ಬಿಲ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಪುತ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಹಾಗೂ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗುತ್ತಿಲ್ಲ ಎಂಬ ಎರಡೂ ಆರೋಪಗಳು ನಿರಾಧಾರ ಎಂದು ಸಚಿವ ಎನ್.ಎಸ್.ಬೋಸರಾಜು (NS Boasaraju) ಅವರ ಪುತ್ರ ರವಿ ಬೋಸರಾಜು (Ravi Bosaraju) ಹೇಳಿದರು.

ಜಿಲ್ಲೆಯಲ್ಲಿ ಮಾತನಾಡಿದ ಅವರು, ನಮ್ಮ ಮನೆಗೆ ಬಂದು ನೂರಾರು ಜನ ಅಹವಾಲುಗಳನ್ನು ಕೊಡುತ್ತಿರುತ್ತಾರೆ. ಸಚಿವರು ಸಿಗುತ್ತಿಲ್ಲ, ನೀವು ಸಹಾಯ ಮಾಡಬೇಕು ಎಂದು ಅರ್ಜಿ ಕೊಡುತ್ತಾರೆ. ಆ ಅರ್ಜಿಗಳನ್ನು ಯಾವ ಕಚೇರಿಗೆ ಕಳುಹಿಸಬೇಕು? ಆ ಕಚೇರಿಗಳಿಗೆ ಕಳುಹಿಸುತ್ತೇವೆ. ಇದನ್ನು ಹಸ್ತಕ್ಷೇಪ ಎನ್ನುವುದಾದರೆ ಹೌದು, ಹಸ್ತಕ್ಷೇಪ ಮಾಡುತ್ತಿದ್ದೇನೆ. ಆದರೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ ನನ್ನ ಮೇಲೆ ಮಾಡಿರುವ ಆರೋಪಗಳು ಸುಳ್ಳು, ಹಸ್ತಕ್ಷೇಪ ಅಂದರೆ ಏನು? ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ – 8 ಮಂದಿ ದುರ್ಮರಣ

1,800 ಕೋಟಿ ರೂ. ಇರುವ ಖಾತೆಯಲ್ಲಿ 14 ಸಾವಿರ ಕೋಟಿ ರೂ. ಮಾಡಿರುವ ಬಿಜೆಪಿ ಸರ್ಕಾರದಲ್ಲಿ ಅನುದಾನವಿಲ್ಲದೆ ಹೋದಾಗ ಪರದಾಡುತ್ತಿರುವ ಗುತ್ತಿಗೆದಾರರು ಮನೆಗೆ ಬರುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಅವರು ಕೊಟ್ಟ ಮನವಿಯನ್ನು ಸಂಬಂಧಪಟ್ಟ ಸಚಿವರ ಕಚೇರಿಗೆ ಕಳುಹಿಸಿರುತ್ತೇನೆ. ಆ ಮೇಲೆ ಏನು ಮಾಡಬೇಕು ಎನ್ನುವುದು ಅವರಿಗೆ ಬಿಟ್ಟಿದ್ದು. ಇದನ್ನೇ ಹಸ್ತಕ್ಷೇಪ ಅನ್ನೋದಾದರೆ ಹೌದು ಎಂದರು.

ಸಣ್ಣ ನೀರಾವರಿ ಇಲಾಖೆಯಲ್ಲಿ 2,200 ಮೇಲ್ಪಟ್ಟು ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರ ಅಕೌಂಟ್‌ಗಳಿಗೆ ದುಡ್ಡು ಹೋಗಿದೆ. ಇದರಲ್ಲಿ ಯಾವ ಅನ್ಯಾಯವಿದೆ? ಪಾರದರ್ಶಕತೆಯನ್ನು ಪಾಲಿಸುವುದೇ ಅನ್ಯಾಯಾನಾ? ಪಿಡಬ್ಲ್ಯೂಡಿ ಮತ್ತು ಸಣ್ಣ ನೀರಾವರಿ ಇಲಾಖೆಯನ್ನು ಎಲ್ಲರೂ ಪ್ರಶಂಸೆ ಮಾಡಿದ್ದಾರೆ. ಕಾಣದ ಕೈ ಕೆಲಸ ಮಾಡುತ್ತಿದೆ ಎನ್ನುತ್ತಾರೆ. ಆದರೆ ಇದರಲ್ಲಿ ಯಾವುದೋ ಕಾಣದ ಕೈ ಕೆಲಸ ಮಾಡುತ್ತಿದೆ ಎಂದು ನನಗೂ ಅನುಮಾನ ಬಂದಿದೆ ಎಂದು ಹೇಳಿದರು.

ನಮಗೆ ದುಡ್ಡು ಬಂದಿದೆ ಎಂದು ರಾಜ್ಯದ ಎಲ್ಲೆಡೆಯಿಂದ ಗುತ್ತಿಗೆದಾರರು ಪ್ರಶಂಸೆ ಮಾಡುತ್ತಿದ್ದಾರೆ. ಇವರು ಮಾಡಿರುವ ಆರೋಪಗಳೆಲ್ಲಾ ನಿರಾಧಾರ. ಮಾಧ್ಯಮಗಳಲ್ಲಿ ಆರೋಪವನ್ನು ಮಾಡುವುದಲ್ಲ. ನೇರವಾಗಿ ಲೋಕಾಯುಕ್ತಕ್ಕೆ ಹೋಗಿ ದೂರು ಕೊಡಬೇಕು. ಯಾವುದೇ ತನಿಖೆಯಾಗಲಿ, ಎಲ್ಲದಕ್ಕೂ ನಾವು ಸಿದ್ಧ ಎಂದು ತಿಳಿಸಿದರು.ಇದನ್ನೂ ಓದಿ: 30 ದಿನಗಳಿಗಿಂತ ಹೆಚ್ಚು ಕಾಲ ಇರುವ ವಿದೇಶಿ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ

Share This Article