ನವದೆಹಲಿ: ಬಿಜೆಪಿ ಭಾನುವಾರ ಬಿಹಾರದ ಸಚಿವ ನಿತಿನ್ ನಬಿನ್ (Nitin Nabin) ಅವರನ್ನು ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯಧ್ಯಕ್ಷರನ್ನಾಗಿ (BJP’s National Working President) ನೇಮಕ ಮಾಡಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇಮಕಾತಿ ಆದೇಶವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಪ್ರಸ್ತುತ ಅಧ್ಯಕ್ಷರಾದ ಜೆಪಿ ನಡ್ಡಾ ಅವರ ಅವಧಿ 2024 ರಲ್ಲಿ ಕೊನೆಗೊಂಡಿತ್ತು ಆದರೆ 2024ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವಧಿಯನ್ನು ವಿಸ್ತರಿಸಲಾಗಿತ್ತು. ಬಿಹಾರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿರುವ ನಬಿನ್ ಅವರ ನೇಮಕ ತಕ್ಷಣವೇ ಜಾರಿಗೆ ಬಂದಿದೆ ಎಂದು ಪಕ್ಷ ತಿಳಿಸಿದೆ. ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕವಾಗಿರುವ ನಬಿನ್ ಅವರಿಗೆ ಪಕ್ಷದ ಕೇಂದ್ರ ನಾಯಕತ್ವ ಮತ್ತು ಅದರ ರಾಜ್ಯ ಘಟಕಗಳ ನಡುವೆ ಸಮನ್ವಯ ಸಾಧಿಸುವುದು, ಸಾಂಸ್ಥಿಕ ವ್ಯವಹಾರಗಳ ಮೇಲ್ವಿಚಾರಣೆ ಹಾಗೂ ದೇಶಾದ್ಯಂತ ಬಿಜೆಪಿಯ ರಾಜಕೀಯ ಮತ್ತು ಚುನಾವಣಾ ಕಾರ್ಯತಂತ್ರಗಳನ್ನು ಜಾರಿಗೆ ತರಲು ಸಹಾಯ ಮಾಡುವ ಜವಾಬ್ದಾರಿಗಳನ್ನ ನೀಡಲಾಗಿದೆ.
ನಿತಿನ್ ನಬಿನ್ ಕುಟುಂಬ ರಾಜಕೀಯ ಹಿನ್ನೆಲೆ ಹೊಂದಿದೆ. ನಿತಿನ್ ನಬಿನ್ ತಂದೆ ನಬಿನ್ ಕಿಶೋರ್ ಪ್ರಸಾದ್ ಸಿನ್ಹ ಬಿಜೆಪಿಯ ಹಿರಿಯ ನಾಯಕರಾಗಿದ್ದರು. ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಂದೆ ನಿಧನದ ಬಳಿಕ ಬಿಜೆಪಿಯಲ್ಲಿ ನಿತಿನ್ ನಬಿನ್ ಸಕ್ರಿಯರಾದರು. ಹಂತ ಹಂತವಾಗಿ ಬಿಜೆಪಿಯಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಕಾರ್ಯಕರ್ತನಾಗಿ, ಮುಖಂಡನಾಗಿ, ಶಾಸಕನಾಗಿ ಬಳಿಕ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ನಿತಿಶ್ ಕುಮಾರ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಧಾನಿ ಮೋದಿ ಅಭಿನಂದನೆ:
ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ನಬಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ನಿತಿನ್ ಅವರು ಕಠಿಣ ಪರಿಶ್ರಮಿ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದಾರೆ. ಅವರ ಶಕ್ತಿ ಮತ್ತು ಸಮರ್ಪಣೆ ಪಕ್ಷವನ್ನು ಬಲಪಡಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಮೋದಿ ಹೇಳಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ನಬಿನ್ ಅವರು ಯುವ ಮತ್ತು ಶ್ರಮಶೀಲ ನಾಯಕರಾಗಿದ್ದು, ಬಿಹಾರದಲ್ಲಿ ಶಾಸಕರಾಗಿ ಮತ್ತು ಸಚಿವರಾಗಿದ್ದಾರೆ. ಜನರ ಆಕಾಂಕ್ಷೆಗಳನ್ನು ಈಡೇರಿಸಲು ಅವರು ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಅವರು ತಮ್ಮ ವಿನಮ್ರ ಸ್ವಭಾವ ಮತ್ತು ಸ್ಥಾಪಿತ ಕಾರ್ಯ ಶೈಲಿಗೆ ಹೆಸರುವಾಸಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

