ಜನರನ್ನ ಆಸ್ಪತ್ರೆಗೆ ಸೇರಿಸುವಲ್ಲಿ ದಾಖಲೆ ಬರೆದ ರಾಯಚೂರು – ವಾಂತಿ, ಭೇದಿ ರೋಗಿಗಳಿಂದ ಬೆಡ್ ಫುಲ್

Public TV
2 Min Read

ರಾಯಚೂರು: ಕಲುಷಿತ ನೀರನ್ನು ಸರಬರಾಜು ಮಾಡಿ ಸಾವಿರಕ್ಕೂ ಹೆಚ್ಚು ಜನ ಆಸ್ಪತ್ರೆ ಕದ ತಟ್ಟಿದ್ದಾರೆ. ಸರ್ಕಾರಿ ಜಿಲ್ಲಾ ಆಸ್ಪತ್ರೆ ಮಾತ್ರವಲ್ಲದೆ ರಾಯಚೂರಿನ ಪ್ರತಿಯೊಂದು ಖಾಸಗಿ ಆಸ್ಪತ್ರೆಗಳ ಬೆಡ್‍ಗಳು ವಾಂತಿ-ಭೇದಿ ರೋಗಿಗಳಿಂದಲೇ ತುಂಬಿವೆ. ನಿರ್ಜಲೀಕರಣ ಕಾರಣಕ್ಕೆ ಹಿಂದೆದೂ ಕಾಣದಷ್ಟು ರೋಗಿಗಳನ್ನ ವೈದ್ಯರು ನೋಡುತ್ತಿದ್ದಾರೆ.

ಕಲುಷಿತ ನೀರನ್ನ ಸಾರ್ವಜನಿಕರಿಗೆ ಸರಬರಾಜು ಮಾಡಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿರುವ ರಾಯಚೂರು ನಗರಸಭೆ ಈಗ ಮತ್ತೊಂದು ದಾಖಲೆ ಬರೆದಿದೆ. ವಾಂತಿ-ಭೇದಿಯಿಂದ ಐದು ಜನ ಸಾವನ್ನಪ್ಪಿರುವ ಬೆನ್ನಲ್ಲೇ ಇದುವರೆಗೆ ಸಾವಿರಕ್ಕೂ ಹೆಚ್ಚು ಜನ ನಿರ್ಜಲೀಕರಣದಿಂದ ಆಸ್ಪತ್ರೆಗೆ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅನುಮತಿ ಪಡೆಯದೇ ಜಾಹೀರಾತು: ಇಬ್ಬರು ಅಭ್ಯರ್ಥಿಗಳ ವಿರುದ್ಧ FIR ದಾಖಲು

ಮೇ 29 ರಿಂದ ಪ್ರಕರಣಗಳು ಹೆಚ್ಚಾಗಿದ್ದು, ಈಗಾಗಲೇ ವಾಂತಿ-ಭೇದಿಯಿಂದ ಒಂದು ಸಾವಿರಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ್ದಾರೆ. ಇದರಲ್ಲಿ ಬಹುತೇಕರು ನಾಲ್ಕೈದು ದಿನ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಆದ್ರೆ ಕೆಲವರು ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಅತಿಯಾದ ನಿರ್ಜಲೀಕರಣದಿಂದ ಕೆಲವರಿಗೆ ಕಿಡ್ನಿ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.

ನಗರಸಭೆ ಈಗಲೂ ಅದೇ ನಿರ್ಲಕ್ಷ್ಯ ಮುಂದುವರಿಸಿರುವುದರಿಂದ ಶುದ್ಧ ನೀರು ಕೊಂಡು ಕುಡಿಯಲಾಗದವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮೇ 29ರಿಂದ ಇದುವರೆಗೆ ರಿಮ್ಸ್ ಆಸ್ಪತ್ರೆಗೆ 183 ಜನ ದಾಖಲಾಗಿದ್ದಾರೆ. ಇದರಲ್ಲಿ 140 ಜನ ಬಿಡುಗಡೆಯಾಗಿದ್ದು, 43 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 11 ಜನ ಮಕ್ಕಳಿದ್ದಾರೆ. ಇನ್ನೂ ರಿಮ್ಸ್ ಆಸ್ಪತ್ರೆಯಲ್ಲೇ ಒಟ್ಟು 5ರಲ್ಲಿ 3 ಜನ ಸಾವನ್ನಪ್ಪಿದ್ದಾರೆ.

ರಾಯಚೂರು ನಗರದಲ್ಲಿರುವ ಪ್ರತಿಯೊಂದು ಖಾಸಗಿ ಆಸ್ಪತ್ರೆಯಲ್ಲೂ ಕನಿಷ್ಠ 40 ರಿಂದ 50 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಷ್ಟೋ ಜನ ಮನೆಯಲ್ಲೇ ಡ್ರಿಪ್ಸ್ ಹಾಕಿಕೊಂಡು ಮಲಗಿದ್ದಾರೆ. ಏಕಾಏಕಿ ತುಂಬಾ ಸಂಖ್ಯೆಯಲ್ಲಿ ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಮೊದಲಿಗೆ ಕಾರಣ ತಿಳಿದು ಬಂದಿರಲಿಲ್ಲ. ಯಾವಾಗ ಕುಡಿಯಲು ನಗರಸಭೆ ನೀರನ್ನೇ ಅವಲಂಬಿಸಿರುವ ಪ್ರದೇಶಗಳ ಜನರಲ್ಲಿ ನಿರ್ಜಲೀಕರಣ ಕಾಣಿಸಿಕೊಂಡಿತೋ, ಆಗ ಇದು ನಗರಸಭೆ ಯಡವಟ್ಟು ಅನ್ನೋದು ಬಯಲಾಯ್ತು. ಈಗಲೂ ಕೂಡ ನಗರಸಭೆ ಶುದ್ಧ ನೀರಿಗೆ ಪ್ರತ್ಯೇಕ ವ್ಯವಸ್ಥೆ ಮಾಡದ ಹಿನ್ನೆಲೆ ಜನ ಆಸ್ಪತ್ರೆಗಳಿಗೆ ದಾಖಲಾಗುತ್ತಲೇ ಇದ್ದಾರೆ. ಇದನ್ನೂ ಓದಿ:  ಪೊಲೀಸರನ್ನ ಹತ್ಯೆ ಮಾಡಿದ್ದ ಭಯೋತ್ಪಾದಕ ಎನ್‍ಕೌಂಟರ್ 

ಜಿಲ್ಲಾಡಳಿತ ಮಾತ್ರ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿರುವವರ ಮೇಲೆ ನಿಗಾ ಇಟ್ಟಿರುವುದಾಗಿ ಹೇಳುತ್ತಿದೆ. ಆದ್ರೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಕಡಿಮೆಯಾಗುತ್ತಿಲ್ಲ. ಕನಿಷ್ಠ ಈಗಲಾದ್ರೂ ನಗರಸಭೆ ಹಾಗೂ ಜಿಲ್ಲಾಡಳಿತ ರೋಗಿಗಳ ಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *