ರಾಮನ ಊರಲ್ಲಿ ಧರ್ಮ ಭೇದವಿಲ್ಲ- ಸೀತಾರಾಮ ಮಂದಿರದಲ್ಲಿ ಮುಸಲ್ಮಾನರಿಗೆ ಇಫ್ತಾರ್ ವ್ಯವಸ್ಥೆ!

Public TV
1 Min Read

ಅಯೋಧ್ಯೆ: ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಅಯೋಧ್ಯೆ ವಿವಾದ ದಶಕಗಳಿಂದ ಬಗೆಹರಿಯದೆ ಉಳಿದಿದೆ. ಆದರೆ ಶ್ರೀರಾಮ ಹುಟ್ಟಿದ ನೆಲ ಅಯೋಧ್ಯೆಯಲ್ಲಿ ಹಿಂದೂ-ಮುಸಲ್ಮಾನ್ ಎಂಬ ಭೇದವಿಲ್ಲ. ಇಲ್ಲಿನ ಶ್ರೀ ಸೀತಾರಾಮ ಮಂದಿರದಲ್ಲಿ ಮುಸ್ಲಿಂ ಬಾಂಧವರಿಗೆ ಹಿಂದೂಗಳು ಇಫ್ತಾರ್ ವ್ಯವಸ್ಥೆ ಮಾಡಿ ಏಕತೆ ಮೆರೆದಿದ್ದಾರೆ.

ಶ್ರೀ ಸೀತಾರಾಮ ದೇವಸ್ಥಾನದ ಟ್ರಸ್ಟ್ ವತಿಯಿಂದ ಮುಸ್ಲಿಂ ಬಾಂಧವರಿಗೆ ರೋಜಾ ಇಫ್ತಾರ್ ಔತಣಕೂಟವನ್ನು ಸೋಮವಾರದಂದು ಆಯೋಜಿಸಲಾಗಿತ್ತು. ಈ ರೋಜಾ ಇಫ್ತಾರ್ ನಲ್ಲಿ ಮುಸಲ್ಮಾನರು ಮಾತ್ರವಲ್ಲದೇ ನಗರದ ಕೆಲವು ಸಾಧು-ಸಂತರು ಕೂಡ ಭಾಗಿಯಾಗಿದ್ದರು. ಇದನ್ನೂ ಓದಿ:ಮದರಸಾ ತೆರೆಯಲು ಮುಂದಾದ ಆರ್‌ಎಸ್‌ಎಸ್

ದೇವಸ್ಥಾನದ ಟ್ರಸ್ಟ್ ವತಿಯಿಂದ ಮೂರನೇ ಬಾರಿಗೆ ರೋಜಾ ಇಫ್ತಾರ್ ಏರ್ಪಡಿಸಲಾಗಿತ್ತು. ಇದು ಮುಂದೆಯೂ ಹೀಗೆ ಮುಂದುವರೆಯಲಿದೆ ಎಂದು ದೇವಾಲಯದ ಟ್ರಸ್ಟಿಗಳು ಹೇಳಿದ್ದಾರೆ. ನಾವು ಧರ್ಮ ಭೇದವನ್ನು ಮರೆತು ಶಾಂತಿ ಮತ್ತು ಹಿಂದೂ-ಮುಸ್ಲಿಂ ಸ್ನೇಹ ಸಂಬಂಧವನ್ನು ಕಾಯ್ದುಕೊಳ್ಳಲು ಈ ಇಫ್ತಾರ್ ವ್ಯವಸ್ಥೆ ಮಾಡಿದ್ದೇವೆ. ಧರ್ಮ ಭೇದ ತೊರೆದು ಪ್ರತಿ ಹಬ್ಬ ಆಚರಣೆಯನ್ನೂ ಒಗ್ಗೂಡಿ ಆಚರಿಸಿ ಸಂಭ್ರಮಿಸಬೇಕು ಎಂದು ಹೇಳಿದರು. ಇದನ್ನೂ ಓದಿ:ನೀರು ಕೇಳಿದ ಮುಸ್ಲಿಂ ಪ್ರಯಾಣಿಕನಿಗೆ ಆಹಾರ ನೀಡಿದ ಗಗನಸಖಿ!

ರೋಜಾ ಇಫ್ತಾರ್ ಗೆ ಬಂದಿದ್ದ ಮುಜಾಲ್ ಫಿಜಾ ಅವರು ಮಾತನಾಡಿ, ದೇಶದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಅಯೋಧ್ಯೆಯಲ್ಲಿ ಅಲ್ಪಸಂಖ್ಯಾತರಾಗಿದ್ದರೂ ನಾವು ಎಂದಿಗೂ ಹೆದರಿಲ್ಲ. ನಾನು ನನ್ನ ಹಿಂದೂ ಸ್ನೇಹಿತರೊಡನೆ ಸೇರಿ ನವರಾತ್ರಿಯನ್ನು ಆಚರಿಸುತ್ತೇನೆ. ನಮ್ಮಲ್ಲಿ ಭೇದಬಾವವಿಲ್ಲ ಎಂದು ತಿಳಿಸಿದರು.

ಧರ್ಮದ ಆಧಾರದ ಮೇಲೆ ಎಂದಿಗೂ ಮನುಷ್ಯರನ್ನು ನೋಡಬಾರದು. ಮನುಷ್ಯತ್ವ, ಪ್ರೀತಿ ಎಲ್ಲದಕ್ಕೂ ಮಿಗಿಲಾದದ್ದು ಎನ್ನುವುದನ್ನು ಈ ಮೂಲಕ ಅಯೋಧ್ಯೆಯಲ್ಲಿ ಹಿಂದೂ-ಮುಸಲ್ಮಾನ್ ಬಾಂಧವರು ಸಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *