Monday, 17th February 2020

Recent News

ನೀರು ಕೇಳಿದ ಮುಸ್ಲಿಂ ಪ್ರಯಾಣಿಕನಿಗೆ ಆಹಾರ ನೀಡಿದ ಗಗನಸಖಿ!

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ತೆರಳುತ್ತಿದ್ದ ಮುಸ್ಲಿಂ ಪ್ರಯಾಣಿಕರೊಬ್ಬರು ಇಫ್ತಾರ್ ಸಮಯವಾದಾಗ ಗಗನಸಖಿಯೊಬ್ಬರ ಬಳಿ ನೀರು ಕೇಳಿದ್ದರು. ಆದರೆ ಪ್ರಯಾಣಿಕ ಉಪವಾಸವಿದ್ದ ಬಗ್ಗೆ ತಿಳಿದ ಗಗನಸಖಿ ಅವರಿಗೆ ಇಫ್ತಾರ್ ಆಹಾರವನ್ನು ನೀಡಿ ಎಲ್ಲರ ಮನ ಗೆದ್ದಿದ್ದಾರೆ.

ಹೌದು. ರಂಜಾನ್ ಹಬ್ಬದ ಹಿನ್ನೆಲೆ ಪತ್ರಕರ್ತ ರಿಫಾತ್ ಜಾವೈದ್ ಅವರು ಉಪವಾಸದಲ್ಲಿದ್ದರು. ಶನಿವಾರದಂದು ರಿಫಾತ್ ಜಾವೈದ್ ಗೊರಖ್‍ಪುರದಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸಂಜೆ ತಮ್ಮ ಉಪವಾಸ ಮುರಿಯುವ ಸಮಯವಾದಗ ಗಗನಸಖಿ ಮಂಜುಳ ಅವರ ಬಳಿ ಒಂದು ಬಾಟಲ್ ನೀರನ್ನು ಕೇಳಿದ್ದಾರೆ. ಆದರೆ ಪ್ರಯಾಣಿಕ ಉಪವಾಸವಿರುವ ಬಗ್ಗೆ ಅರಿತ ಗಗನಸಖಿ ರಿಫಾತ್ ಅವರಿಗೆ ಟ್ರೇನಲ್ಲಿ ಇಫ್ತಾರ್ ಆಹಾರವನ್ನು ನೀಡಿ ಮಾನವೀಯತೆ ಮರೆದಿದ್ದಾರೆ.

ತಮಗೆ ಇಫ್ತಾರ್ ಆಹಾರ ನೀಡಿದ ಗಗನಸಖಿಯ ಸಹಾಯಕ್ಕೆ ಸಂತೋಷಗೊಂಡ ರಿಫಾತ್ ಅವರು ಈ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಗಗನಸಖಿಯ ಗುಣಕ್ಕೆ ಮನಸೋತಿದ್ದಾರೆ. ನಾನು ದೆಹಲಿಗೆ ವಿಮಾನದಲ್ಲಿ ವಾಪಾಸ್ ತೆರೆಳುತ್ತಿದ್ದೆ. ಈ ವೇಳೆ ಇಫ್ತಾರ್ ನ ಸಮಯವಾಗಿತ್ತು. ಆದರಿಂದ ನಾನು ಗಗನಸಖಿ ಮಂಜುಳ ಅವರ ಬಳಿ ಹೋಗಿ ನೀರು ಕೇಳಿದೆ. ಆಗ ಅವರು ನನಗೆ ಒಂದು ಬಾಟರ್ ನೀರು ಕೊಟ್ಟರು. ಬಳಿಕ ನಾನು ಉಪವಾಸದಲ್ಲಿದ್ದೇನೆ ಇನ್ನೊಂದು ಬಾಟಲ್ ನೀರು ಬೇಕಿತ್ತು ಎಂದೆ. ಆಗ ಗಗನಸಖಿ ನೀವು ನಿಮ್ಮ ಸೀಟ್‍ಗೆ ಹೋಗಿ ತಂದು ಕೊಡುತ್ತೇನೆ ಎಂದು ಹೇಳಿ ಕಳುಹಿಸಿದರು. ನಂತರ ನನಗೆ ಟ್ರೇ ತುಂಬಾ ಇಫ್ತಾರ್ ಆಹಾರವನ್ನೂ ನೀಡಿ ಸತ್ಕರಿಸಿದರು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ನೆಟ್ಟಿಗರು ರಿಫಾತ್ ಅವರ ಟ್ವೀಟ್‍ಗೆ ರೀ-ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಧರ್ಮ ಬೇರೆಯಾಗಿದ್ದರು, ಮಾನವೀಯತೆಯಿಂದ ಒಬ್ಬರಿಗೆ ಸಹಾಯ ಮಾಡುವುದು ದೊಡ್ಡ ವಿಷಯ. ಜಾತಿ ಧರ್ಮವೆಂದು ಜಗಳವಾಡುವವರ ಮಧ್ಯೆ ಮನವೀಯತೆ ಎಲ್ಲದಕ್ಕಿಂತ ಮಿಗಿಲಾದದ್ದು ಎಂದು ಸಾರಿರುವ ಗಗನಸಖಿ ಸಹಾಯವನ್ನು ನಿಜಕ್ಕೂ ಮೆಚ್ಚಲೇಬೇಕು. ಈ ಮೂಲಕ ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದನ್ನ ಗಗನಸಖಿ ತೋರಿಸಿದ್ದಾರೆ. ಇದು ನಮ್ಮ ಭಾರತದ ವಿಶೇಷತೆ ಎಂದು ರೀ-ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *