ಬೆಂಗಳೂರು: ಬಡ ಕಾರ್ಮಿಕರು ಹಾಗೂ ಮಹಿಳೆಯರಿಗೆ ನೆರವಾಗುತ್ತಿದ್ದ ಅಟಲ್ ಸಾರಿಗೆ ಬಸ್‍ಗಳನ್ನು ಸ್ಥಗಿತಗೊಳಿಸಿರುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಖಂಡನೆ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮೋಹನ್ ದಾಸರಿ, ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು 2009ರಲ್ಲಿ ಅಟಲ್ ಸಾರಿಗೆಯನ್ನು ಜಾರಿಗೆ ತಂದಿತ್ತು. ಇದರಲ್ಲಿ ಪ್ರಯಾಣ ದರ ಶೇ. 50ರಷ್ಟು ಕಡಿಮೆ ಇದ್ದಿದ್ದರಿಂದ ಬಡವರಿಗೆ ಪ್ರಯಾಣಿಸಲು ನೆರವಾಗುತ್ತಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರವು ಅಟಲ್ ಸಾರಿಗೆಯನ್ನು ಸದ್ದಿಲ್ಲದೇ ಸ್ಥಗಿತಗೊಳಿಸಿದೆ. ಈ ಮೂಲಕ ಅಟಲ್ ಬಿಹಾರಿ ವಾಜಪೇಯಿಯವರಿಗೆ ಬಿಜೆಪಿ ಸರ್ಕಾರ ಅಗೌರವ ತೋರಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರು ಜಮೀರ್ ಕಾಲಿಗೆ ಹೋಗಿ ಬೀಳ್ತಾರೆ: ಈಶ್ವರಪ್ಪ
ಭ್ರಷ್ಟ ಬಿಜೆಪಿ ಸರ್ಕಾರವು ಜನಪರ ಯೋಜನೆಗಳನ್ನೆಲ್ಲ ಒಂದೊಂದಾಗಿ ಸ್ಥಗಿತಗೊಳಿಸುತ್ತಿರುವ ಜನವಿರೋಧಿ ಸರ್ಕಾರ. ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಸೈಕಲ್ ವಿತರಿಸಲು ಇದಕ್ಕೆ ಸಾಧ್ಯವಾಗುತ್ತಿಲ್ಲ. ಬಿಸಿಯೂಟ, ಇಂದಿರಾ ಕ್ಯಾಂಟೀನ್, ಅನ್ನಭಾಗ್ಯ ಯೋಜನೆಗಳ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಿದೆ. ಎಲ್ಲದಕ್ಕೂ ಜಿಎಸ್‍ಟಿ ವಿಧಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದೊಂದೇ ಬಿಜೆಪಿಗೆ ತಿಳಿದಿದೆ. ಸಾಮಾನ್ಯ ಜನರ ಬದುಕನ್ನು ದಯನೀಯ ಸ್ಥಿತಿಗೆ ಕೊಂಡೊಯ್ಯುತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಿಎಂ ಆವಾಸ್ ಯೋಜನೆಯಲ್ಲಿ ರಾಜ್ಯಕ್ಕೆ ಅನುದಾನ ಕಡಿತ – ಬಿಜೆಪಿಗೆ ವೋಟ್ ಹಾಕಿದ ತಪ್ಪಿಗೆ ಈ ಶಿಕ್ಷೆಯೇ?: ದಿನೇಶ್ ಗುಂಡೂರಾವ್
ರಾಜ್ಯ ಸರ್ಕಾರಕ್ಕೆ ಬಡವರ ಬಗ್ಗೆ ಸ್ವಲ್ಪವಾದರೂ ಕಾಳಜಿಯಿದ್ದರೆ ಅಟಲ್ ಸಾರಿಗೆ ಬಸ್‍ಗಳನ್ನು ಪುನರಾರಂಭಿಸಲಿ. ಈ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‍ಗಳನ್ನು ಸೇರಿಸಿ ಬಡಜನರಿಗೆ ನೆರವಾಗಲಿ. ಸಾಧ್ಯವಾಗದಿದ್ದರೆ ಸರ್ಕಾರವನ್ನು ದಿವಾಳಿ ಮಾಡಿದ್ದೇವೆ ಎಂದು ಬಿಜೆಪಿ ಒಪ್ಪಿಕೊಳ್ಳಲಿ ಎಂದು ಮೋಹನ್ ದಾಸರಿ ಸವಾಲು ಹಾಕಿದ್ದಾರೆ.