ಸಮೀಕ್ಷೆ ಮಾಡದೇ ಜಾತಿಗಣತಿ ಸ್ಟಿಕ್ಕರ್ ಅಂಟಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಕೇಸ್ – ಮೂವರು BBMP ನೌಕರರು ಅಮಾನತು

Public TV
2 Min Read

ಬೆಂಗಳೂರು: ಸಮೀಕ್ಷೆಯನ್ನೇ ಮಾಡದೇ ಜಾತಿಗಣತಿ ಪೂರ್ಣ ಎಂಬ ಸ್ಟಿಕ್ಕರ್ ಅಂಟಿಸಿದ್ದನ್ನು ಮನೆ ಮಾಲೀಕ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಬಿಬಿಎಂಪಿ (BBMP) ನೌಕರರನ್ನು ಅಮಾನತುಗೊಳಿಸಲಾಗಿದೆ.

ಈ ಕುರಿತು ರಾಜರಾಜೇಶ್ವರಿನಗರ ವಲಯ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. 2025ರ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಸಂಬಂಧ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಮೂರು ಜನ ಬಿಬಿಎಂಪಿ ನೌಕರರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸಮೀಕ್ಷೆಯನ್ನೇ ಮಾಡದೇ ಜಾತಿಗಣತಿ ಪೂರ್ಣ ಸ್ಟಿಕ್ಕರ್‌ ಅಂಟಿಸಿದ ಬಿಬಿಎಂಪಿ ಸಿಬ್ಬಂದಿ – ಪ್ರಶ್ನಿಸಿದ ಮನೆ ಮಾಲೀಕನ ಮೇಲೆ ಹಲ್ಲೆ

ಹೆಚ್.ಬಿ.ಆರ್ ಲೇಔಟ್ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಪರಿವೀಕ್ಷಕರಾದ ರಮೇಶ್, ಕಂದಾಯ ವಸೂಲಿಗಾರರಾದ ಪೆದ್ದುರಾಜು ಹಾಗೂ ಕೆಂಗೇರಿ ಉಪವಿಭಾಗ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ವಸೂಲಿಗಾರರಾದ ಸಿ.ಸಂದಿಲ್ ಕುಮಾರ್‌ರವರನ್ನು ಕರ್ತವ್ಯಲೋಪದ ಮೇರೆಗೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.

ಏನಿದು ಘಟನೆ?
ಚಿಕ್ಕಲ್ಲಸಂದ್ರದ ಸಾರ್ವಭೌಮ ನಗರದ 7ನೇ ಕ್ರಾಸ್‌ನಲ್ಲಿರುವ ನಂದೀಶ್ ಎಂಬುವವರ ಮನೆಗೆ ಬಿಬಿಎಂಪಿ ಸಿಬ್ಬಂದಿ ಜಾತಿಗಣತಿ ಪೂರ್ಣಗೊಂಡಿದೆ ಎಂಬ ಸ್ಟಿಕ್ಕರ್ ಅಂಟಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮನೆ ಮಾಲೀಕ ಆರೋಪಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೆ ಮಾಲೀಕನ ಮಗ ಶಶಾಂಕ್, ನಾವು ಎಲ್ಲರೂ ಮನೆ ಒಳಗಡೆ ಇದ್ದೆವು. ಆಗ ಪೌರಕಾರ್ಮಿಕರು ಮನೆಗೆ ಸ್ಟಿಕ್ಕರ್ ಅಂಟಿಸಿದ್ದಾರೆ. ಇದನ್ನು ನಮ್ಮ ತಂದೆ ಪ್ರಶ್ನಿಸಿದ್ದಾರೆ. ಸರ್ವೇ ಮಾಡಿಲ್ಲ, ದಾಖಲೆ ಎಲ್ಲಿ ಅಂತ ಕೇಳಿದೆವು. ಇದಕ್ಕೆ ಸಿಬ್ಬಂದಿ, ಇದು ನನಗೆ ಕೊಟ್ಟಿರೋ ಟಾಸ್ಕ್ ಎಂದಿದ್ದಾರೆ. 1 ಗಂಟೆ ಬಳಿಕ ಮೇಲ್ವಿಚಾರಕರ ಜೊತೆ ಬಂದು, ಅಪ್ಪನಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೇ ಕಾಲಿನಿಂದ ಒದ್ದು, ಕೆನ್ನೆಗೆ ಹೊಡೆದಿದ್ದಾರೆ. ಐಡಿ ಕಾರ್ಡ್ ಸಹ ಅವರು ತಂದಿರಲಿಲ್ಲ ಎಂದು ಆರೋಪಿಸಿದ್ದರು. ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಸ್ಟೇಷನ್‌ಗೆ ಅಮ್ಮ, ನಾನು, ತಂದೆ ದೂರು ಕೊಡಲು ಹೋಗಿದ್ದೆವು. ಈ ವೇಳೆ, ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ. ಇದರಿಂದ ದೂರು ಕೊಡದೇ ವಾಪಸ್ ಆಗಿದ್ದೆವು ಎಂದು ತಿಳಿಸಿದ್ದರು.

ಇದೆಲ್ಲದರ ನಡುವೆ ಮನೆಯ ಸದಸ್ಯರನ್ನು ಮಾತನಾಡಿಸದೇ ಕಾಟಾಚಾರಕ್ಕೆ ಕಂಡ ಕಂಡ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಹೋಗ್ತಿದ್ದಾರೆ. ವಿಪರ್ಯಾಸವೆಂದರೆ ಈ ಸಮೀಕ್ಷೆಗೆ ಪೌರಕಾರ್ಮಿಕರು, ಜಲಮಂಡಳಿಯ ಸಿಬ್ಬಂದಿಗಳನ್ನೂ ಬಳಸಿಕೊಳ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.ಇದನ್ನೂ ಓದಿ: ಅಮ್ಮ, ಸೋದರನಿಗೆ ಡ್ರಗ್ಸ್ ಚಟ – ಬಾಲಕನಿಗೆ ಆಸರೆಯಾಗಿದ್ದು ನಾಯಿಗಳು ಮಾತ್ರ – ಬೊಗಳುವ ಮೂಲಕ ಮಾತ್ರ ಸಂವಹನ!

Share This Article