ಶಿವ ಪೂಜೆಗೆ ಹೋದ ರೌಡಿ ದೇವಸ್ಥಾನದಲ್ಲೇ ಬರ್ಬರ ಹತ್ಯೆ

Public TV
2 Min Read

ಮಂಡ್ಯ: ಹಾಡಹಗಲೇ ರೌಡಿಯೊಬ್ಬನ ಬರ್ಬರ ಹತ್ಯೆ ನಡೆದ ಘಟನೆ ಮಂಡ್ಯದಲ್ಲಿ ನಡೆದಿದೆ. ಶಿವನ ದರ್ಶನಕ್ಕೆ ಬಂದವನನ್ನು ದೇವಾಲಯದಲ್ಲೇ ಮನಸ್ಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ನಟೋರಿಯಸ್ ರೌಡಿ ಶೀಟರ್ ಅರುಣ್ ಅಲಿಯಾಸ್ ಹಲ್ಲು ಅರುಣ್ ಬರ್ಬರವಾಗಿ ಕೊಲೆಯಾಗಿದ್ದಾನೆ. ಕೊಲೆ, ಬೆದರಿಕೆ, ಹಫ್ತಾ ವಸೂಲಿ, ಕಿಡ್ನಾಪ್ ಹೀಗೆ ಹಲವು ಕೇಸ್‌ಗಳಲ್ಲಿ ಜೈಲುವಾಸ ಅನುಭವಿಸಿದ್ದ ಈತ ಈಗ ಏಕಾಏಕಿ ತಾನೇ ಕೊಲೆಯಾಗಿದ್ದಾನೆ.

ಅರುಣ್ ಕೊಲೆಗೆ ಹಳೇ ವೈಷಮ್ಯವೇ ಕಾರಣ ಎಂದು ಶಂಕಿಸಲಾಗಿದೆ. ಕೆಆರ್ ಪೇಟೆಯ ಮತ್ತೊಬ್ಬ ರೌಡಿ ಶೀಟರ್ ಯತೀಶ್ ಹಾಗೂ ಗ್ಯಾಂಗ್ ಕೊಲೆಗೈದಿರುವ ಬಗ್ಗೆ ಅನುಮಾನ ವ್ಯಕ್ತವಾಗಿವೆ. ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ಅರುಣ್ ಮತ್ತು ಯತೀಶ್ 2002ರಲ್ಲಿಯೇ ಕ್ರಿಮಿನಲ್ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಇಬ್ಬರ ನಡುವೆ ಜಗಳ ಉಂಟಾಗಿ 2009ರಲ್ಲಿ ಮೊದಲ ಬಾರಿ ಅರುಣ್ ಮೇಲೆ ಯತೀಶ್ ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಮಾರಕಾಸ್ತ್ರಗಳಿಂದ ಆತನನ್ನು ಕೊಚ್ಚಿ ಪರಾರಿಯಾಗಿದ್ದರು. ಸಾವು ಬದುಕಿನ ನಡುವೆ ಹೋರಾಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಅರುಣ್ ಯತೀಶ್ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಎನ್ನಲಾಗಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಶೂಟೌಟ್- ಭಾರತೀಯ ಮೂಲದ ವ್ಯಕ್ತಿಯ ಹತ್ಯೆ

2012ರಲ್ಲಿ ತನ್ನ ಮೇಲೆ ಹಲ್ಲೆ ನಡೆಸಿದ್ದ ಯತೀಶ್‌ನ ಬಲಗೈ ಬಂಟ ಭಾಸ್ಕರ್‌ನನ್ನ ಕೊಚ್ಚಿ ಬೀಸಾಡಿದ್ದ ಅರುಣ್ ಹಗೆ ತೀರಿಸಿಕೊಂಡಿದ್ದ. ಬಳಿಕ ಇಬ್ಬರು ರೌಡಿಗಳ ನಡುವೆ ರಾಜಿ ನಡೆದು ಕೇಸ್‌ಗಳು ಖುಲಾಸೆಯಾಗಿತ್ತು. ಆದರೂ ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ಮುಂದುವರಿದಿದೆ. 2016ರಲ್ಲಿ ಯತೀಶ್ ತಮ್ಮ ರಾಜೇಶ್‌ನ ಹುಟ್ಟುಹಬ್ಬದಂದೇ ಮರ್ಡರ್ ಮಾಡಿದ್ದ ಅರುಣ್ ಯತೀಶ್‌ನ ದ್ವೇಷಕ್ಕೆ ಗುರಿಯಾಗಿದ್ದ.

ಈ ಕೇಸ್‌ನಲ್ಲಿ ಜೈಲು ಸೇರಿದ್ದ ಅರುಣ್ ರೌಡಿಸಂನಲ್ಲಿ ಮತ್ತಷ್ಟು ಚಿಗುರಿದ್ದ. ನಂಜನಗೂಡು ಜೈಲಿನಲ್ಲಿದ್ದಾಗಲೇ ಜೈಲರ್ ಸಹಾಯ ಪಡೆದು ಹೊರಬಂದಿದ್ದ ನಟೋರಿಯಸ್ ಅರುಣ್ ಕೆಆರ್ ಪೇಟೆಯ ಚಿನ್ನದ ವ್ಯಾಪಾರಿ ಗೋಪಾಲ್‌ನನ್ನು ಅಪಹರಿಸಿ, 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ. ಈ ಪ್ರಕರಣ ಕೂಡ ಸಾಬೀತಾಗಿ ಅರುಣ್‌ಗೆ ಸಹಾಯ ಮಾಡಿದ್ದ ಜೈಲರ್ ಕೂಡ ಜೈಲು ಸೇರಿದ್ದ. ಇದನ್ನೂ ಓದಿ: ಹಿಮಾಲಯಕ್ಕೆ ಚಾರಣ ಹೋದ ಬೆಂಗ್ಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ನಾಪತ್ತೆ

ಕಳೆದ 3 ವರ್ಷಗಳ ಹಿಂದೆ ಜೈಲಿನಿಂದ ರಿಲೀಸ್ ಆಗಿದ್ದ ಅರುಣ್ ಮೈಸೂರಿನಲ್ಲಿ ವಾಸವಿದ್ದ. ಪ್ರತಿ ಸೋಮವಾರ ಕೆಆರ್ ಪೇಟೆಯ ಈಶ್ವರ ದೇವಾಲಯಕ್ಕೆ ಬರುತ್ತಿದ್ದ ಈತ ಅರ್ಧ ಗಂಟೆಗೂ ಹೆಚ್ಚು ಕಾಲ ದೇವಾಲಯದಲ್ಲೇ ಇರುತ್ತಿದ್ದ ಎನ್ನಲಾಗಿದೆ. ಇಂದು ಕೂಡ ಸಂಬಂಧಿ ಪ್ರವೀಣ್ ಬೈಕಿನಲ್ಲಿ ದೇವಾಲಯಕ್ಕೆ ಡ್ರಾಪ್ ಪಡೆದಿದ್ದ ಅರುಣ್ ದೇವಾಲಯ ಪ್ರವೇಶ ಮಾಡುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ 8-10 ಜನ ಹಂತಕರು ಪೆಪ್ಪರ್ ಸ್ಪ್ರೇ ಕಣ್ಣಿಗೆ ಹಾಕಿ, ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿದ್ದಾರೆ. ತಮ್ಮನ ಕೊಲೆ ಪ್ರತೀಕಾರವಾಗಿ ಅರುಣ್‌ನನ್ನು ಯತೀಶ್ ಹತ್ಯೆಗೈದಿದ್ದಾನೆ ಎನ್ನಲಾಗಿದೆ.

ಒಟ್ಟಾರೆ ಪ್ರತೀಕಾರದ ಜ್ವಾಲೆಗೆ ಅರುಣ್‌ನ ಹತ್ಯೆ ನಡೆಸಲಾಗಿದ್ದು, ಹಂತಕರಿಗಾಗಿ ಕೆಆರ್ ಪೇಟೆ ಪಟ್ಟಣ ಪೊಲೀಸರು ಬಲೆ ಬೀಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *