ಶೀಘ್ರದಲ್ಲೇ `ಅರ್ಜುನ’ನ ಪುತ್ಥಳಿ ಉದ್ಘಾಟನೆ – ಅರಣ್ಯ ಇಲಾಖೆಯಿಂದ ಪೂಜೆ

Public TV
1 Min Read

ಹಾಸನ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಮರಣ ಹೊಂದಿದ್ದ ಅಂಬಾರಿ ಆನೆ, ಅರ್ಜುನನ (Arjun Elephant) ಪ್ರತಿಮೆ ಹಾಗೂ ಸ್ಮಾರಕ ಉದ್ಘಾಟನೆಗೆ ಸಿದ್ಧಗೊಂಡಿದೆ.

2023 ಡಿಸೆಂಬರ್ 4 ರಂದು ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ಅರಣ್ಯದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮದಗಜದೊಂದಿಗೆ ಕಾದಾಡಿ ತೀವ್ರವಾಗಿ ಗಾಯಗೊಂಡಿದ್ದ ಅರ್ಜುನ ಕಾಡಿನಲ್ಲೇ ಸಾವನ್ನಪ್ಪಿತ್ತು. ಅರ್ಜುನ ಸಾವನ್ನಪ್ಪಿ ಒಂದು ವರ್ಷ ಕಳೆದ ನಂತರ ಅರ್ಜುನನ ಸ್ಮಾರಕ ಹಾಗೂ ಪುತ್ಥಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಬಳ್ಳೆಯಲ್ಲಿ ನಿರ್ಮಾಣಗೊಂಡಿರುವ ಅರ್ಜುನ ಪ್ರತಿಮೆಯನ್ನು ದಬ್ಬಳ್ಳಿಕಟ್ಟೆಗೆ ತಂದು ಪ್ರತಿಷ್ಠಾಪಿಸಲಾಗಿದೆ.

ಅರ್ಜುನನ ಪ್ರತಿಮೆ ಪ್ರತಿಷ್ಠಾಪಿಸುವ ವೇಳೆ ಯಾವುದೇ ವಿಘ್ನವಾಗದಂತೆ ಅರ್ಜುನನ ಪ್ರತಿಮೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಪೂಜೆ ಸಲ್ಲಿಸಿದ್ದಾರೆ. ಅರ್ಜುನನ ಪ್ರತಿಮೆ ಫೋಟೋಗಳನ್ನು ಅರಣ್ಯ ಇಲಾಖೆ (Forest Department) ಸಿಬ್ಬಂದಿ ವ್ಯಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ.

ಶೀಘ್ರದಲ್ಲಿಯೇ ಅರ್ಜುನನ ಪ್ರತಿಮೆ ಹಾಗೂ ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ. ಡಿ.4 ರಂದು ಅರ್ಜುನ ಮೃತ ಸ್ಥಳದಲ್ಲಿ ಸ್ಮಾರಕ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮ ನಿಗದಿಯಾಗಿತ್ತು. ಪುತ್ಥಳಿ ಕಾರ್ಯ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಉದ್ಘಾಟನೆ ಕಾರ್ಯಕ್ರಮ ಮುಂದೂಡಲಾಗಿತ್ತು.

Share This Article