ಭಾರತದ ವಾಯುನೆಲೆಗಳನ್ನು ಹೊಡೆದಿದ್ದೇವೆ: ನಕಲಿ ಉಪಗ್ರಹ ಚಿತ್ರ, ದೃಶ್ಯ ಹಂಚಿಕೊಂಡು ಮತ್ತೆ ಬೆತ್ತಲಾದ ಪಾಕ್‌

Public TV
2 Min Read

ಇಸ್ಲಾಮಾಬಾದ್: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಗೆ ಪ್ರತ್ಯುತ್ತರವಾಗಿ ಭಾರತದ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದೇವೆಂದು ಸುಳ್ಳು ಹೇಳಿ ಜಗತ್ತಿನ ಮುಂದೆ ಪಾಕಿಸ್ತಾನ (Pakistan) ಮತ್ತೆ ಬೆತ್ತಲಾಗಿದೆ.

ಭಾರತದ ವಿರುದ್ಧದ ಸಂಘರ್ಷದಲ್ಲಿ ತಾನು ಗೆದ್ದಿದ್ದೇನೆ ಎಂದು ಜಗತ್ತನ್ನು ನಂಬಿಸಲು ಪಾಕಿಸ್ತಾನ ಶತಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ, ನಕಲಿ ಉಪಗ್ರಹ ಚಿತ್ರಗಳು, ನಕಲಿ ದೃಶ್ಯಗಳು ಮತ್ತು ತಪ್ಪು ಮಾಹಿತಿ ಪಾಕ್‌ ಹರಡುತ್ತಿದೆ. ಇದನ್ನೂ ಓದಿ: ಭಾರತದ ಬಳಿಯಿರುವಂತೆ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ನಮಗೂ ಕೊಡಿ – ಅಮೆರಿಕಕ್ಕೆ ಪಾಕ್‌ ಬೇಡಿಕೆ

ಆಪರೇಷನ್ ಸಿಂಧೂರ ನಂತರ, ಪಾಕಿಸ್ತಾನವು ಪಂಜಾಬ್‌ನ ಆದಂಪುರ ವಾಯುನೆಲೆಯಲ್ಲಿ ನಿಲ್ಲಿಸಲಾಗಿದ್ದ ಸುಖೋಯ್-30ಎಂಕೆಐ ಅನ್ನು ಹೊಡೆದುರುಳಿಸಿ, ಗುಜರಾತ್‌ನ ಭುಜ್ ವಾಯುನೆಲೆಯಲ್ಲಿ ಎಸ್-400 ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ಘಟಕವನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿತ್ತು. ಅದೇ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಪಾಕ್‌ ಸುಳ್ಳು ಹೇಳುತ್ತಿದೆ ಎಂಬುದನ್ನು ಪ್ರಧಾನಿ ನಿರೂಪಿಸಿದರು. ಈ ಬೆಳವಣಿಗೆಯಿಂದ ಪಾಕ್‌ಗೆ ತೀವ್ರ ಮುಖಭಂಗವಾಯಿತು.

ಪಂಜಾಬ್‌ನ ಆದಂಪುರ ವಾಯುನೆಲೆಯಲ್ಲಿ ಸುಖೋಯ್-30ಎಂಕೆಐ ಯುದ್ಧ ವಿಮಾನದ ಮೇಲೆ ದಾಳಿ ನಡೆಸಲಾಗಿದೆ ಎಂದು ಪಾಕ್‌ ಹೇಳಿಕೊಂಡಿತ್ತು. ಹಾನಿಗೊಳಗಾದ ಜಾಗ ಇದು, ಇದರ ಸಮೀಪದಲ್ಲೇ ಯುದ್ಧ ವಿಮಾನವಿದೆ ಎಂದು ಪಾಕ್‌ ಹೇಳಿಕೊಂಡಿತ್ತು. ಆದರೆ ಉನ್ನತ ಚಿತ್ರಣ ವಿಶ್ಲೇಷಕ ಡೇಮಿಯನ್ ಸೈಮನ್ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಈ ಚಿತ್ರವು ಸಂಘರ್ಷಕ್ಕೂ ಮುಂಚಿನ ದಿನಾಂಕವನ್ನು ಹೊಂದಿದೆ. ವಿಮಾನವು ನಿಯಮಿತ ನಿರ್ವಹಣೆಯಲ್ಲಿರುವ ಮಿಗ್-29 ಆಗಿತ್ತು. ಹಾನಿ ಎಂದು ಹೇಳಿರುವುದು ಕ್ಷಿಪಣಿ ಹೊಡೆತದ್ದಲ್ಲ, ಪರೀಕ್ಷೆಯಿಂದ ಎಂಜಿನ್‌ನಲ್ಲಿ ಮಸಿ ಸಂಗ್ರಹವಾಗಿರುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಜ್ಜು – ಜೂ.10ರಂದು ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಶುರು

ಅದಂಪುರದಲ್ಲಿ S-400 ಕ್ಷಿಪಣಿ ಹಾನಿಯಾಗಿದೆ ಎಂದು ಪಾಕ್‌ ಹೇಳಿಕೊಂಡಿತ್ತು. ಆದರೆ, ಈ ಉಪಗ್ರಹ ಚಿತ್ರವನ್ನು ಡಿಜಿಟಲ್ ಆಗಿ ಸಂಪಾದಿಸಲಾಗಿದೆ. ಬಾಂಬ್ ಕುಳಿಗಳು ಇರುವಂತಹ ಕಪ್ಪು ಚುಕ್ಕೆಗಳನ್ನು ಸೇರಿಸಲಾಗಿದೆ. ಆದರೆ, ನಿಜವಾದ ಉಪಗ್ರಹ ಚಿತ್ರಗಳೊಂದಿಗೆ ಹೋಲಿಸಿದರೆ ಸ್ಥಳದಲ್ಲಿ ಅಂತಹ ಯಾವುದೇ ಗುರುತುಗಳು ಕಂಡುಬಂದಿಲ್ಲ ಎಂಬುದು ಸ್ಪಷ್ಟವಾಗಿದೆ.

Share This Article