ಝೂನಲ್ಲಿ ಹಾಕಿದ ತಕ್ಷಣ ಹುಲಿ ತನ್ನ ಪ್ರವೃತ್ತಿ ಮೆರೆಯಲ್ಲ: ತಂದೆಯನ್ನು ಹೊಗಳಿದ ವಿಜಯೇಂದ್ರ

Public TV
2 Min Read

ಹಾಸನ: ಝೂನಲ್ಲಿ ಹಾಕಿದ ತಕ್ಷಣ ಹುಲಿ ತನ್ನ ಪ್ರವೃತ್ತಿ ಮೆರೆಯಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿ.ವೈ.ವಿಜಯೇಂದ್ರ ಅವರು ಹಾಡಿ ಹೊಗಳಿದರು.

ಹಾಸನ ಜಿಲ್ಲೆ, ಹೊಳೆನರಸೀಪುರದಲ್ಲಿ ಶಿವಕುಮಾರಸ್ವಾಮೀಜಿ ಅವರ 115ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಇವತ್ತು ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಯಾರೂ ಕೂಡ ಅಂದುಕೊಂಡಿರಲಿಲ್ಲ. ನಮ್ಮ ಪೂಜ್ಯ ತಂದೆಯವರು, ರಾಜ್ಯದ ಸಿಎಂ ಆಗಬೇಕೆಂದು ಯಾವತ್ತೂ ಕೂಡ ಹೋರಾಟ ಮಾಡಲಿಲ್ಲ. ಈ ರಾಜ್ಯ ಅನೇಕ ಮುಖ್ಯಮಂತ್ರಿಗಳನ್ನು ಕೊಟ್ಟಿದೆ, ಆದರೆ ಈ ವೇದಿಕೆ ಮೂಲಕ ಸವಾಲು ಹಾಕುತ್ತೇನೆ. ಶಿಕಾರಿಪುರ ಅಭಿವೃದ್ಧಿ ಹೊಂದಿದಂತೆ ಇನ್ಯಾವ ಕ್ಷೇತ್ರವೂ ರಾಜ್ಯದಲ್ಲಿ ಅಭಿವೃದ್ಧಿ ಹೊಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ 74 ವರ್ಷ ಆಗಿದೆ: ಸಿದ್ದುಗೆ ಟಾಂಗ್ ಕೊಟ್ಟ ಬಿ.ಸಿ.ನಾಗೇಶ್ 

ತಮ್ಮ ಸಮಾಜದ ಶಕ್ತಿಯ ಬಗ್ಗೆಯೂ ಇದೇ ವೇಳೆ ಮಾತನಾಡಿದ ಅವರು, ಒಕ್ಕಲಿಗರ ಪ್ರಾಬಲ್ಯವಿರುವ ಹಾಸನ ನೆಲದಲ್ಲಿ ತಮ್ಮ ಸಮಾಜದ ಶಕ್ತಿಯ ಬಗ್ಗೆ ಗುಣಗಾನ ಮಾಡಲಾಗಿದೆ. ಕಾಡಿನಲ್ಲಿ ಬೇಟೆಯಾಡುವ ಹುಲಿಯನ್ನ ಹಿಡಿದುಕೊಂಡು ಬಂದು ಬೋನಿನಲ್ಲಿ ಹಾಕಿದ ತಕ್ಷಣ ಅದು ಹುಲ್ಲು ತಿನ್ನಲ್ಲ. ಕಾಡಿನಲ್ಲಿರುವ ಹುಲಿ ಏನು ತಿನ್ನುತ್ತೋ, ಬೋನಿನಲ್ಲಿರುವ ಹುಲಿ ಅದನ್ನೇ ತಿನ್ನುತ್ತೆ. ಝೂನಲ್ಲಿ ಹಾಕಿದ ತಕ್ಷಣ ಹುಲಿ ತನ್ನ ಪ್ರವೃತ್ತಿ ಮೆರೆಯಲ್ಲ. ಭೇಟೆಯಾಡುವುದನ್ನು ಮರೆಯಲ್ಲ ಎಂದು ಆಕ್ರೋಶ ಹೊರಹಾಕಿದರು.

ಅದೇ ರೀತಿ ನಮ್ಮ ಸಮಾಜ ಕೂಡ ಕರ್ನಾಟಕ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಇದೆ. ಅದರಲ್ಲೂ ಈ ಭಾಗದಲ್ಲಿ ನಾವ್ಯಾರು ಕೂಡ ಬಸವಣ್ಣನವರ ರೀತಿ ಹುಲ್ಲು ತಿಂದು ಕೂರುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ರೈತರು, ದಲಿತ, ಹಿಂದುಳಿದ ವರ್ಗದವರು ಎಲ್ಲಿ ಕಣ್ಣೀರು ಹಾಕುತ್ತಿದ್ದರು ಅಲ್ಲಿ ಯಡಿಯೂರಪ್ಪ ಅವರು ಇರ್ತಿದ್ರು. ಅದೆಷ್ಟೋ ಪಾದಯಾತ್ರೆ, ಜೀತದಾಳು ಪದ್ಧತಿ ವಿರುದ್ಧ ಹೋರಾಟಗಳನ್ನು ಮಾಡಿದ್ದಾರೆ. ವಿಧಾನಸಭೆಯಲ್ಲಿ ಜೀತಪದ್ಧತಿ ವಿರುದ್ಧ ಕಾನೂನು ಮಂಡನೆ ಮಾಡ್ತಾರೆ ಎಂದು ವಿವರಿಸಿದರು.

ಅದು ರಾಚಯ್ಯ ಅವರು ಇರುವ ಸಂದರ್ಭ. ಯಡಿಯೂರಪ್ಪ ಅವರು ಅಂದು ವಿಧಾನಸಭೆಯಲ್ಲಿ ಮಾಡಿದ ಭಾಷಣ ಕೇಳಿ ರಾಚಯ್ಯ ಅವರು ಕಣ್ಣೀರು ಹಾಕಿ ಆ ಕಾನೂನನ್ನು ಕಿತ್ತು ಹಾಕಿದ್ರು. ಯಡಿಯೂರಪ್ಪ ಅವರ ಬಗ್ಗೆ ನನಗೆ ಹೆಮ್ಮೆಯಿದೆ. ಯಡಿಯೂರಪ್ಪ ಅವರ ಮಗನಾಗಿ ಬಾಲ್ಯದಿಂದಲೇ ಅವರ ಹೋರಾಟಗಳನ್ನು ನೋಡಿಕೊಂಡು ಬಂದಿದ್ದೇನೆ. ನಾಡಿನ ಎಲ್ಲ ವರ್ಗದ ಮಠಮಾನ್ಯಗಳ ಶ್ರೀಗಳ ಆಶೀರ್ವಾದದಿಂದ ಈ ರಾಜ್ಯದಲ್ಲಿ ನಾಲ್ಕು ಮುಖ್ಯಮಂತ್ರಿಯಾದರು ಎಂದರು.

ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯದಲ್ಲಿ ಯಾರೂ ಈ ರೀತಿ ಮಾಡಲಿಲ್ಲ. ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ರು. ಯಡಿಯೂರಪ್ಪ ಅವರು ರಾಜಕೀಯದಲ್ಲಿ ಬೆಳೆಯುತ್ತಾರೆ ಅಂತ ಹೇಳಿ ಇರುವ ರಸ್ತೆಯಲ್ಲೆಲ್ಲಾ ಕಲ್ಲು ಹೊಡೆಯುವ ಕೆಲಸ ಮಾಡಿದ್ರು. ಅದೇ ಕಲ್ಲನ್ನು ತೆಗೆದುಕೊಂಡು, ಅಡಿಪಾಯ ಹಾಕಿಕೊಂಡು ನಾಲ್ಕು ಬಾರಿ ಮುಖ್ಯಮಂತ್ರಿಯಾದರು. ಅಂತಹ ಧೀಮಂತ ನಾಯಕನನ್ನು ನಾಡು ಕಂಡಿದ್ರೆ ಅದು ನಿಮ್ಮ ಯಡಿಯೂರಪ್ಪನವರು ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ:  ಅಪ್ರಾಪ್ತ ಬಾಲಕ ವಾಹನ ಸವಾರಿ – ಮಾಲೀಕನಿಗೆ ಬಿತ್ತು ಭಾರೀ ದಂಡ 

ಮುಖ್ಯಮಂತ್ರಿಯಾಗಿದ್ದಾಗ ಆದಿಚುಂಚನಗಿರಿ ಮಠಕ್ಕೆ ಅನುದಾನ ಕೊಟ್ಟಿದ್ದಾರೆ. ಎಸ್‍ಸಿ ಸಮಾಜದ ಮಠಗಳಿಗೆ, ಹಿಂದುಳಿದ ಮಠಗಳಿಗೂ ಅನುದಾನ ಕೊಟ್ಟಿದ್ದಾರೆ. ಸರ್ಕಾರಕ್ಕೆ ಸರಿಸಮನಾಗಿ, ಅದಕ್ಕಿಂತ ಹೆಚ್ಚು ಮಠಮಾನ್ಯಗಳು ಶಿಕ್ಷಣವನ್ನು ನೀಡಿವೆ. ಆ ಮಠಗಳಿಗೆ ಶಕ್ತಿ ಕೊಡುವ ಉದ್ದೇಶದಿಂದ ಅನುದಾನ ಕೊಟ್ಟರು ಎಂದು ಹೆಮ್ಮೆಯಿಂದ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *