ಮತ್ತೆ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾಗೆ ಚಾಲನೆ

Public TV
1 Min Read

ದೊಡ್ಮನೆ ಕುಡಿ ನಟ ವಿನಯ್ ರಾಜ್‌ಕುಮಾರ್ (Vinay Rajkumar) ಅವರು ಗ್ರಾಮಾಯಣ ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಮೂರ್ನಾಲ್ಕು ವರ್ಷಗಳ ಹಿಂದೆ ಶುರುವಾಗಿದ್ದ ಸಿನಿಮಾಗೆ ಹಲವು ಕಾರಣಗಳಿಂದ ನಿಂತು ಹೋಗಿತ್ತು. ಇದೀಗ ಮತ್ತೆ ‘ಗ್ರಾಮಾಯಣ’ (Gramayana) ಸಿನಿಮಾ ತರಲು ಭರ್ಜರಿ ತಯಾರಿ ನಡೆಯುತ್ತಿದೆ. ಅದಕ್ಕೆ ಅದ್ದೂರಿ ಮುಹೂರ್ತ ಕೂಡ ಫಿಕ್ಸ್ ಆಗಿದೆ.

‘ಸಿದ್ಧಾರ್ಥ್’ (Siddarth) ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ವಿನಯ್ ರಾಜ್‌ಕುಮಾರ್ ಅವರು ಇತ್ತೀಚಿಗೆ ಹೊಸ ರೀತಿಯ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಗ್ರಾಮಾಯಣ’ ಚಿತ್ರದ ವಿಚಾರವಾಗಿ ನಟ ವಿನಯ್ ಸುದ್ದಿಯಲ್ಲಿದ್ದಾರೆ. ಈ ಹೆಸರು ಕೇಳಿದ ತಕ್ಷಣ ಹಲವರಿಗೆ ಇದು ಈಗಾಗಲೇ ಆರಂಭವಾಗಿರುವ ಸಿನಿಮಾವಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಹೌದು, ‘ಗ್ರಾಮಾಯಣ’ ಸಿನಿಮಾ ಆರಂಭವಾಗಿ ಮೂರ್ನಾಲ್ಕು ವರ್ಷಗಳಾಗಿವೆ. ಆದರೆ ಹಲವು ಕಾರಣಗಳಿಂದ ನಿಂತು ಹೋಗಿದ್ದ ಚಿತ್ರವನ್ನು ಖ್ಯಾತ ನಿರ್ಮಾಪಕ ಕೆ.ಪಿ ಶ್ರಿಕಾಂತ್ ಅವರು ಲಹರಿ ಫಿಲ್ಮ್ಸ್ ಮನೋಹರ್ ನಾಯ್ಡು ಜೊತೆಗೆ ಸೇರಿ ಆರಂಭಿಸುತ್ತಿದ್ದಾರೆ. ‘ಯುಐ’ ಸಿನಿಮಾದ ನಂತರ ಶ್ರಿಕಾಂತ್ ಮತ್ತು ಮನೋಹರ್ ನಾಯ್ಡು ನಿರ್ಮಾಣ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಇದನ್ನೂ ಓದಿ:ಅಂಬಿ ಪುತ್ರನ ಅದ್ದೂರಿ ಕಲ್ಯಾಣ- ಮದುವೆಯ ಕಲರ್‌ಫುಲ್ ಫೋಟೋಸ್

ದೇವನೂರು ಚಂದ್ರು ನಿರ್ದೇಶನದ ‘ಗ್ರಾಮಾಯಣ’ ಸಿನಿಮಾ ಒಂದೇ ಒಂದು ಟೀಸರ್‌ನಿಂದ ಹಲವರ ಗಮನ ಸೆಳೆದಿತ್ತು. ಕೋವಿಡ್‌ನಿಂದ ಮತ್ತು ಹಲವು ಕಾರಣಗಳಿಂದ ಸಿನಿಮಾ ಅರ್ಧಕ್ಕೆ ನಿಂತು ಹೋಗಿತ್ತು. ಇದೀಗ ಹೊಸದಾಗಿ ಚಿತ್ರವನ್ನ ಶುರು ಮಾಡ್ತಿದ್ದಾರೆ. ಜೂನ್ 8ರಂದು ಈ ಸಿನಿಮಾದ ಮುಹೂರ್ತ ನಡೆಯಲಿದೆ ಎಂಬ ಮಾಹಿತಿ ಚಿತ್ರತಂಡದಿಂದ ಅಪ್‌ಡೇಟ್ ಸಿಕ್ಕಿದೆ.

‘ಗ್ರಾಮಾಯಣ’ ಹೆಸರೇ ಹೇಳುವಂತೆ ಹಳ್ಳಿ ಬ್ಯಾಕ್‌ಗ್ರೌಂಡ್‌ನಲ್ಲಿ ನಡೆಯುವ ಕಥೆಯಾಗಿದೆ. ನಮ್ಮ ನೆಲದ ಕಥೆಯಾಗಿದ್ದು, ಒಂದು ಹಳ್ಳಿಯಲ್ಲಿ ಏನೇನು ನಡೆಯುತ್ತದೆ, ಅಲ್ಲಿನ ವಾತಾವರಣ, ಜನ ಜೀವನವನ್ನು ಈ ಸಿನಿಮಾ ಮೂಲಕ ತೆರೆದಿಡುವ ಪ್ರಯತ್ನ ಮಾಡಲಾಗುತ್ತಿದೆ. ‘ಗ್ರಾಮಾಯಣ’ ಸಿನಿಮಾಗೆ ಬೆಂಗಳೂರಿನಲ್ಲಿ ಜೂನ್ 8ರಂದು ಅದ್ಧೂರಿ ಮುಹೂರ್ತ ನಡೆಯಲಿದ್ದು, ಈ ಸಮಾರಂಭದಲ್ಲಿ ಡಾ. ರಾಜ್‌ಕುಮಾರ್ ಕುಟುಂಬದ ಎಲ್ಲಾ ಸದಸ್ಯರು, ರಾಜ್ಯದ ಹಿರಿಯ ರಾಜಕಾರಣಿಗಳು, ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

Share This Article