ಬೀಸೋ ದೊಣ್ಣೆಯಿಂದ ಕೋಲಾರ ಶಾಸಕ ಶ್ರೀನಿವಾಸಗೌಡ ಬಚಾವ್

Public TV
2 Min Read

-ಶಾಸಕರಿಗೆ ಕ್ಲೀನ್ ಚಿಟ್ ನೀಡಿದ ಎಸಿಬಿ

ಬೆಂಗಳೂರು: ನನ್ನ ಮನೆಯಲ್ಲಿ ಐದು ಕೋಟಿ ಹಣ ಬದ್ದಿತ್ತು ಎಂಬ ಹೇಳಿಕೆ ವಿರುದ್ಧ ಕೋಲಾರ ಶಾಸಕ ಶ್ರೀನಿವಾಸಗೌಡ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಶಾಸಕರಿಗೆ ಕ್ಲೀನ್ ಚಿಟ್ ನೀಡಿದೆ.

ಈ ಹಿಂದೆ ಶಾಸಕರು ನನ್ನ ಖರೀದಿಸಲು ಬಿಜೆಪಿ ನಾಯಕರು 5 ಕೋಟಿ ಹಣ ನೀಡಲು ಮುಂದಾಗಿದ್ದರು. ಕೆಲವು ದಿನ ಹಣ ನನ್ನ ಮನೆಯಲ್ಲಿಯೇ ಬಿದ್ದಿತ್ತು ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಇದೇ ಹೇಳಿಕೆಯನ್ನಾಧರಿಸಿ ಆರ್‍ಟಿಐ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಎಸಿಬಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯಗಳು ದೊರೆಯದ ಹಿನ್ನೆಲೆಯಲ್ಲಿ ಶಾಸಕರಿಗೆ ರಿಲೀಫ್ ನೀಡಿದೆ.

ಈ ಸಂಬಂಧ ಶಾಸಕರನ್ನು ಎಸಿಬಿ ಅಧಿಕಾರಿಗಳು ಬರೋಬ್ಬರಿ 112 ಪ್ರಶ್ನೆಗಳನ್ನು ಕೇಳಿದರೂ ಸಮರ್ಪಕ ಉತ್ತರ ಲಭ್ಯವಾಗಿಲ್ಲ. ಅಂದು ನಾನು ನನ್ನ ಸರ್ಕಾರವನ್ನು ಉಳಿಸಬೇಕಿತ್ತು. ಬಿಜೆಪಿ ‘ಆಪರೇಷನ್ ಕಮಲ’ದಲ್ಲಿ ಬಹುತೇಕ ಯಶಸ್ವಿಯಾಗಿದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿತ್ತು. ಹಾಗಾಗಿ ಸಂದರ್ಭದಲ್ಲಿ ಡೈವರ್ಟ್ ಮಾಡೋ ಉದ್ದೇಶದಿಂದ ಈ ರೀತಿ ಹೇಳಿಕೆಯನ್ನು ನೀಡಬೇಕಾಗಿ ಬಂತು. ನನಗೆ ಯಾರು ಆಫರ್ ಮಾಡಿರಲಿಲ್ಲ ಮತ್ತು ಯಾವ ಹಣವನ್ನು ಪಡೆದುಕೊಂಡಿಲ್ಲ ಎಂದು ಶಾಸಕ ಶ್ರೀನಿವಾಸಗೌಡ ಎಸಿಬಿ ಮುಂದೆ ಸ್ಪಷ್ಟನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಂದು ಶಾಸಕರು ಹೇಳಿದ್ದೇನು? : ಮೂರು ತಿಂಗಳ ಹಿಂದೆ ನನಗೂ ಆಫರ್ ಬಂದಿತ್ತು. ಉಸ್ತುವಾರಿ ಸ್ಥಾನ ನೀಡುವದರ ಜೊತೆಗೆ ಮೂವತ್ತು ಕೋಟಿಯ ಆಫರ್ ಬಿಜೆಪಿ ನಾಯಕರು ನೀಡಿದ್ದರು. ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ಯಲಹಂಕ ಶಾಸಕ ವಿಶ್ವನಾಥ್ ಹಾಗೂ ಮಾಜಿ ಶಾಸಕ ಅಶ್ವಥ್ ನಾರಾಯಣ ಅವರು ಬೆಂಗಳೂರಿನ ಮನೆಗೆ ಬಂದು ಆಫರ್ ನೀಡಿ ಸೂಟ್‍ಕೇಸ್ ಬಿಟ್ಟುಹೋದ್ರು. ಸೂಟ್‍ಕೇಸ್ ತೆಗೆದಾಗ ಅದರಲ್ಲಿ ಐದು ಕೋಟಿ ಹಣವಿತ್ತು. ಫೋನ್ ಮಾಡಿ ಕೇಳಿದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ 25 ಕೋಟಿ ಕೊಡುತ್ತೀವಿ ಅಂತಾ ಹೇಳಿದರು.

ಹಣದ ಸೂಟ್‍ಕೇಸ್ ಎರಡು ತಿಂಗಳು ನನ್ನ ಮನೆಯಲ್ಲಿತ್ತು. ಈ ಸಂಬಂಧ ಸಿಎಂ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದಾಗ ಈ ವಿಷಯವನ್ನು ದೊಡ್ಡದು ಮಾಡೋದು ಬೇಡ. ನಿಮ್ಮ ಮನೆಯಲ್ಲಿರುವ ಹಣವನ್ನು ವಾಪಾಸ್ಸು ಕಳುಹಿಸು ಎಂದು ಸೂಚನೆ ನೀಡಿದ್ದರು. ಸಿಎಂ ಸೂಚನೆ ಮೇರೆಗೆ ಹಣವನ್ನು ವಾಪಾಸ್ಸು ಕಳುಹಿಸಿದೆ ಎಂದು ಗೊಂದಲದ ಹೇಳಿಕೆಯನ್ನು ಸಚಿವರು ನೀಡಿದರು. ಸಿಎಂ ಸೂಚನೆಯ ಮೇರೆಗೆ ಫೋನ್ ಮಾಡಿದಾಗ ಅಶ್ವಥ್ ನಾರಾಯಣ್ ಬಂದು ಹಣ ಪಡೆದುಕೊಂಡು ಹೋದರು ಎಂದು ಹೇಳಿದ್ದರು.

ದೂರು ದಾಖಲಿಸಿದ ಟಿ.ಜೆ.ಅಬ್ರಾಹಂ ಸಹ ಕೇವಲ ಮಾಧ್ಯಮಗಳ ಹೇಳಿಕೆಯನ್ನೇ ಆಧರಿಸಿ ದೂರು ದಾಖಲಿಸಿದ್ದೇನೆ. ನಮ್ಮ ಬಳಿಯೂ ಶಾಸಕರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ತಿಳಿಸಿದ್ದಾರೆ .

Share This Article
Leave a Comment

Leave a Reply

Your email address will not be published. Required fields are marked *