ಬಸ್‍ನಿಂದ ಬಿದ್ದು ಯುವತಿಯ ಮೆದುಳು ನಿಷ್ಕ್ರಿಯ – ಸಾವಿನಲ್ಲೂ 9 ಜನರ ಬಾಳಿಗೆ ಬೆಳಕಾದಳು

Public TV
2 Min Read

ಚಿಕ್ಕಮಗಳೂರು: ಮಗಳ ಸಾವಿನ ನೋವಿನಲ್ಲೂ ಹೆತ್ತವರು ಆಕೆಯ ಒಂಬತ್ತು ಅಂಗಾಂಗಳನ್ನು ದಾನ (Organs Donate) ಮಾಡಿ ಸಾರ್ಥಕತೆ ಮರೆದ ಪ್ರೇರಣದಾಯಕ ಘಟನೆಗೆ ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ಶೇಖರ್ ನಾಯ್ಕ್ ಹಾಗೂ ಲಕ್ಷ್ಮಿ ದಂಪತಿ ಸಾಕ್ಷಿಯಾಗಿದ್ದಾರೆ.

ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ಶೇಖರ್ ನಾಯ್ಕ್, ಲಕ್ಷ್ಮಿಬಾಯಿ ದಂಪತಿಯ ಪುತ್ರಿ ರಕ್ಷಿತಾ ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ (ಕಾಮರ್ಸ್) ಓದುತ್ತಿದ್ದಳು. ನಗರದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ನಲ್ಲಿ ಇದ್ದಳು. ಎರಡು ದಿನಗಳ ಹಿಂದೆ ಮನೆಗೆ ಹೋಗಲೆಂದು ಹೋಗುವಾಗ ಸರ್ಕಾರಿ ಬಸ್‍ನಿಂದ (Bus) ಆಯಾತಪ್ಪಿ ಬಿದಿದ್ದಳು. ಕೂಡಲೇ ಸ್ಥಳೀಯರು ಹಾಗೂ ಸಂಬಂಧಿಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತಲೆಗೆ ಗಂಭೀರ ಗಾಯವಾದ ಕಾರಣ ವೈದ್ಯರು ಬದುಕಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿದೆ. ರಕ್ಷಿತಾಳ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿದ್ದು ಬೇರೆಲ್ಲಾ ಅಂಗಾಂಗಳಿಗೆ ಯಾವುದೇ ತೊಂದರೆಯಾಗದ ಹಿನ್ನೆಲೆ ಅವುಗಳ ದಾನಕ್ಕೆ ಮುಂದಾಗಬಹುದು ಎಂದು ವೈದ್ಯರು ಹೆತ್ತವರಿಗೆ ಮಾಹಿತಿ ನೀಡಿದ್ದಾರೆ. ಮಗಳನ್ನು ಕಳೆದುಕೊಂಡ ನೋವಲ್ಲೂ ಅಪ್ಪ ಶೇಖರ್ ನಾಯ್ಕ್-ಅಮ್ಮ ಲಕ್ಷ್ಮಿ ಬಾಯಿ ರಕ್ಷಿತಾಳ ಎಲ್ಲಾ ಅಂಗಾಂಗಗಳ ದಾನಕ್ಕೆ ಮುಂದಾಗಿ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇದನ್ನೂ ಓದಿ: ತಾಯಿಯ ಮಡಿಲಲ್ಲೇ ಭಾಷಣ ಮಾಡಿ ಪ್ರಥಮ ಸ್ಥಾನ ಗೆದ್ದ ಬಾಲಕಿ!

ಎದೆಬಡಿತ ನಮಗೆ ಕೇಳಿಸಲ್ಲ:
ನನ್ನ ತಂಗಿಯ ಒಂಬತ್ತು ಅಂಗಾಗಳನ್ನು ಒಂಬತ್ತು ಜನರಿಗೆ ಹಾಕುತ್ತಾರೆ. ಅವರೆಲ್ಲಾ ಬದುಕುತ್ತಾರೆ. ಆದರೆ, ಆಕೆಯ ಕಣ್ಣು ಮತ್ತೊಬ್ಬರ ಮೂಲಕ ಜಗತ್ತನ್ನು ನೋಡಲಿದೆ. ಆದರೆ, ನಮ್ಮನ್ನ ನೋಡಲ್ಲ. ಆಕೆಯ ಎದೆಬಡಿತ ಮತ್ತೊಬ್ಬರಿಗೆ ಕೇಳಿಸುತ್ತೆ. ಆದರೆ, ನಮಗೆ ಕೇಳಿಸಲ್ಲ ಎಂದು ರಕ್ಷಿತಾಳ 14 ಜನ ಸಹೋದರರು ಕಣ್ಣೀರಿಟ್ಟಿದ್ದಾರೆ. ನಮ್ಮ ತಂಗಿ ನಮ್ಮ ಜೊತೆ ಇಲ್ಲ. ಆದರೆ, ಅಂಗಾಂಗಗಳ ಮೂಲಕ ಮತ್ತೊಬ್ಬರ ಬದುಕಿಗೆ ಬೆಳಕಾಗಲಿದ್ದಾಳೆ. ನಾವು ಯಾವುದೇ ತೊಂದರೆ ಮಾಡಲ್ಲ. ಆಕೆಯ ಯಾವ್ಯಾವ ಅಂಗಗಳು ಮತ್ತೊಬ್ಬರಿಗೆ ಉಪಯೋಗಕ್ಕೆ ಬರುತ್ತೋ ಆ ಎಲ್ಲಾ ಅಂಗಗಳನ್ನೂ ತೆಗೆದುಕೊಳ್ಳಲಿ ಎಂದು ಕಣ್ಣೀರಿಟ್ಟಿದ್ದಾರೆ.

ಒಬ್ಬಳೆ ಮಗಳು:
ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ರಕ್ಷಿತಾಳ ಅಪ್ಪ-ಅಮ್ಮರದ್ದು ದೊಡ್ಡ ಕುಟುಂಬ. ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು ಸೇರಿದಂತೆ 14 ಜನ ಅಣ್ಣತಮ್ಮಂದಿರಿಗೆ ರಕ್ಷಿತಾ ಒಬ್ಬಳೆ ಮುದ್ದಿನ ತಂಗಿ. ಹಾಗಾಗಿ, ಆಕೆಯನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂದು ಹೆತ್ತವರು, ಸಹೋದರರೂ ಹೋರಾಡುತ್ತಿದ್ದಾರೆ. ಹಳ್ಳಿಯಲ್ಲಿ ನೂರಾರು ಜನ ಆಕೆಗೆ ಪ್ರಾರ್ಥಿಸಿದ್ದಾರೆ. ಕುಟುಂಬಸ್ಥರು ಮೂರ್ನಾಲ್ಕು ದಿನದಿಂದ ಊಟ-ತಿಂಡಿ-ನಿದ್ದೆ ಬಿಟ್ಟು ಹೋರಾಡುತ್ತಿದ್ದಾರೆ. ಆದರೆ, ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿದ್ದು ವೈದ್ಯರು ಉಳಿಯಲು ಸಾಧ್ಯವೇ ಇಲ್ಲ ಎಂದಾಗ ಹೆತ್ತವರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಹೋಗ್ಬೇಡಿ ಸರ್- ಮಂಡ್ಯದಲ್ಲಿ ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳು ಕಣ್ಣೀರು

ಒಂಬತ್ತು ಅಂಗಗಳ ದಾನ:
ರಕ್ಷಿತಾಳ ಹೃದಯ, ಎರಡು ಕಿಡ್ನಿ, ಎರಡು ಕಣ್ಣುಗಳು, ಎರಡು ಶ್ವಾಸಕೋಶ ಸೇರಿ ಒಟ್ಟು ಒಂಭತ್ತು ಮಂದಿಗೆ ರಕ್ಷಿತಾಳ ಅಂಗಾಂಗಗಳನ್ನು ಜೋಡಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ.ಮೋಹನ್ ಸ್ಪಷ್ಟಪಡಿಸಿದ್ದಾರೆ. ಅದಕ್ಕಾಗಿ ಈಗಾಗಲೇ ಚಿಕ್ಕಮಗಳೂರಿಗೆ ಬೆಂಗಳೂರು, ಚೆನ್ನೈನಿಂದ ನುರಿತ ವೈದ್ಯರ ತಂಡವೂ ಆಗಮಿಸಿದೆ. ಗುರುವಾರ (ಸೆಪ್ಟೆಂಬರ್ 22) ಬೆಳಗ್ಗೆ 10.30 ರಿಂದ 12 ಗಂಟೆಯೊಳಗೆ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿರುವ ರಕ್ಷಿತಾಳ ಅಂಗಾಂಗಳನ್ನು ತೆಗೆಯುವ ಪ್ರಕ್ರಿಯೆ ನಡೆಯಲಿದೆ. ಕೂಡಲೇ ಎರಡು ಹೆಲಿಕಾಪ್ಟರ್ ಮೂಲಕ ರಕ್ಷಿತಾಳ ಅಂಗಾಂಗಗಳನ್ನು ರವಾನೆ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *