4 ವರ್ಷದ ಬಳಿಕ ಆರಂಭವಾಯಿತು ಮೈಶುಗರ್ ಕಾರ್ಖಾನೆ

Public TV
3 Min Read

ಮಂಡ್ಯ: ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮಂಡ್ಯದ ಮೈಶುಗರ್ 4 ವರ್ಷದ ಬಳಿಕ ಆರಂಭವಾಗಿದೆ. ಸಚಿವ ಸಂಪುಟ ಸಭೆ ನಿರ್ಣಯದಂತೆ ಹಾಗೂ ಸರ್ಕಾರದ ಭರವಸೆಯಂತೆ ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಇಂದು ಮುನ್ನುಡಿ ಬರೆಯಲಾಯಿತು.

ಸಂಪ್ರದಾಯದಂತೆ ಪೂಜೆ, ಗಣಪತಿ ಹೋಮದ ಮೂಲಕ ಕಾರ್ಖಾನೆ ಬಾಯ್ಲರ್‍ಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಇದಕ್ಕಾಗಿ ಕಾರ್ಖಾನೆಯನ್ನು ಶುದ್ಧಿ ಮಾಡಿ, ಹೂವು, ತಳಿರು-ತೋರಣ ಕಟ್ಟಿ, ನವ ವಧುವಿನಂತೆ ಸಿಂಗಾರ ಮಾಡಲಾಗಿತ್ತು. ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣ ಗೌಡ, ಸಂಸದೆ ಸುಮಲತಾ, ಜಿಲ್ಲಾಡಳಿತದ ಅಧಿಕಾರಿಗಳು, ರೈತರು, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನೌಕರರು ಭಾಗಿಯಾಗಿದ್ದರು.

ಬಂದ್ ಆಗಿದ್ದು ಯಾಕೆ?
ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಅಂದರೆ ಅದು ಮಂಡ್ಯದ ಮೈಶುಗರ್ ಕಾರ್ಖಾನೆ. ಒಂದು ಕಾಲದಲ್ಲಿ ಗತವೈಭವಕ್ಕೆ ಕಾರಣವಾಗಿದ್ದ ಈ ಕಾರ್ಖಾನೆ ಕೊಡುವ ದರವೇ ಇಡೀ ರಾಜ್ಯದ ಕಬ್ಬಿನ ದರವನ್ನು ನಿರ್ಧಾರ ಮಾಡುತ್ತಿತ್ತು. ಅಂತಹ ಇತಿಹಾಸ ಪ್ರಸಿದ್ಧ ಕಾರ್ಖಾನೆ ಅವ್ಯಾಹತ ಭ್ರಷ್ಟಾಚಾರ, ರಾಜಕೀಯ ಹಪಾಹಪಿಗೆ ನಶಿಸುವ ಹಂತ ತಲುಪಿತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಖಾನೆ ಸಂಪೂರ್ಣ ಸ್ಥಬ್ಧವಾಗಿತ್ತು. ಇದನ್ನೂ ಓದಿ: ಪ್ರವೀಣ್ ಹತ್ಯೆಗೈದ ಆರೋಪಿಗಳ ಬಂಧನ- ಪೊಲೀಸ್ ಇಲಾಖೆಗೆ ಕುಟುಂಬಸ್ಥರು ಧನ್ಯವಾದ

ಕಾರ್ಖಾನೆ ಸ್ಥಗಿತದಿಂದ ಇಡೀ ಮಂಡ್ಯ ಜಿಲ್ಲೆಯ ಆರ್ಥಿಕ ಸ್ಥಿತಿ ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಕಾರ್ಖಾನೆ ಆರಂಭಕ್ಕೆ ನಿರಂತರವಾಗಿ, ಸಾಕಷ್ಟು ಹೋರಾಟಗಳು ನಡೆದಿದ್ವು. ಕಾಲಕಳೆದಂತೆ ಮೈಶುಗರ್ ವಿಚಾರವಾಗಿ ನಡೆಯುತ್ತಿದ್ದ ಹೋರಾಟಗಳು ಕೂಡ ಕವಲೊಡೆದು ಗೊಂದಲದ ಗೂಡಾಗಿತ್ತು. ಕೆಲವರು ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಕ್ಕೆ ಪಟ್ಟು ಹಿಡಿದಿದ್ದರೆ, ಮತ್ತೆ ಕೆಲವರು ಖಾಸಗಿಯಾದರೂ ಸರಿ, ಓ ಅಂಡ್ ಎಂ ಆದರೂ ಸರಿ. ಹೇಗಾದರೂ ಆಗಲಿ ಮೊದಲು ಕಾರ್ಖಾನೆ ಆರಂಭವಾಗಲಿ ಅಂತ ಒತ್ತಾಯಿಸಿದ್ದರು. ಇದು ಸರ್ಕಾರಕ್ಕೂ ತಲೆ ನೋವಾಗಿ ಪರಿಣಮಿಸಿತ್ತು. ಈ ಹಿಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಪುನರಾರಂಭಿಸುವ ನಿರ್ಧಾರ ಮಾಡಿದ್ದರು.

ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. 20 ಕೋಟಿ ವೆಚ್ಚದಲ್ಲಿ ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ತಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 4 ಲಕ್ಷ ಟನ್ ಕಬ್ಬು ನುರಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇನ್ನು 10 ದಿನದೊಳಗೆ ಪ್ರಾಯೋಗಿಕವಾಗಿ ಕಬ್ಬು ನುರಿಸುವ ಕಾರ್ಯ ಆರಂಭಿಸಲಾಗುತ್ತದೆ. ಸಣ್ಣಪುಟ್ಟ ತಾಂತ್ರಿಕ ದೋಷ ಸರಿಪಡಿಸಿಕೊಂಡು 15-20 ದಿನಗಳಲ್ಲಿ ಸಿಎಂ ಮೂಲಕವೇ ಅಧಿಕೃತವಾಗಿ ಕಾರ್ಖಾನೆ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ಕೊಟ್ಟು ಪುನರಾರಂಭ ಮಾಡಲಾಗುತ್ತದೆ ಅಂತ ಸಚಿವರು ಭರವಸೆ ನೀಡಿದ್ದರು. ಇದನ್ನೂ ಓದಿ: ಉಜ್ಜಯಿನಿ ಮಹಾಕಾಳೇಶ್ವರ ಮಂದಿರದಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಬಲಿಗರ ಗಲಾಟೆ

ಮೈಶುಗರ್ ಕಾರ್ಖಾನೆಯಲ್ಲಿ ನಡೆದ ಪೂಜೆಯಿಂದ ಜಿಲ್ಲೆಯ ಜನಪ್ರತಿನಿಧಿಗಳು, ರೈತರಲ್ಲಿ ಸಂತಸ ಮನೆ ಮಾಡಿದೆ. ಹೇಗಾದರೂ ಮಾಡಿ ಕಾರ್ಖಾನೆ ಆರಂಭಕ್ಕೆ ನಡೆಸಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಋಣಿಯಾರುತ್ತೇನೆ. ನಾನು ಸಂಸದೆಯಾಗಿ 3 ವರ್ಷ ಆದರೂ, ಇಂದಿನ ಸಂತಸದ ದಿನ ಯಾವತ್ತೂ ಇಲ್ಲ ಅಂತಾ ಸಂಸದೆ ಸುಮಲತಾ ಅಂಬರೀಶ್ ಹೇಳಿದರೆ, ರೈತ ನಾಯಕಿ ಸುನಂದ ಜಯರಾಂ ಮಾತ್ರ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೆವು. ಸರ್ಕಾರ ಕೊಟ್ಟ ಭರವಸೆಯಂತೆ ಕಾರ್ಖಾನೆ ಆರಂಭಕ್ಕೆ ಮುಂದಾಗಿದೆ. ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಪುನರಾರಂಭಿಸಿರುವುದು ಸ್ವಾಗತಾರ್ಹ. ಸರ್ಕಾರದ ನಿರ್ಧಾರಕ್ಕೆ ಅಭಿನಂದಿಸುತ್ತೇವೆ ಅಂತಾ ಸಂತಸ ವ್ಯಕ್ತಪಡಿಸಿದರು. ಮಂಡ್ಯ ಜನರ ಬಹು ದಿನಗಳ ಕನಸು ಈಡೇರುವ ಕಾಲಕ್ಕೆ ಕ್ಷಣಗಣನೆ ಆರಂಭವಾಗಿದೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *