19 ವರ್ಷದ ಬಳಿಕ ಬಂತು ಬಲಿ ಹಬ್ಬ- ಜೀವ ಹೋದ ವ್ಯಕ್ತಿಗೆ ಬರುತ್ತೆ ಮರುಜೀವ

Public TV
2 Min Read

ಚಾಮರಾಜನಗರ: ಅಲ್ಲಿ ಆ ವ್ಯಕ್ತಿಯ ಜೀವ ಹೋಗಿರುತ್ತದೆ, ಈ ಹಿನ್ನೆಲೆಯಲ್ಲಿ ಆತನ ಶವವನ್ನು ಊರ ತುಂಬಾ ಎಸೆದಾಡಿಕೊಂಡು ಮೆರವಣಿಗೆ ಮಾಡುತ್ತಾರೆ. ಹೀಗೆ ನಿರ್ಜೀವವಾಗಿದ್ದ ವ್ಯಕ್ತಿಗೆ 9 ತಾಸಿನ ನಂತರ ಮರುಜೀವ ಬರುತ್ತದೆ.

ಹೌದು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಸೀಗಮಾರಮ್ಮ ದೇವಿಯ ಜಾತ್ರೆಯಲ್ಲಿ ತಲತಲಾಂತರದಿಂದ ಆಚರಿಸಿಕೊಂಡು ಬಂದ ಆಚರಣೆಯಾಗಿದೆ. 19 ವರ್ಷಗಳ ಬಳಿಕ ಸೀಗಮಾರಮ್ಮ ಬಲಿ ಹಬ್ಬ ನಡೆಯುತ್ತಿದೆ. ಈ ಹಬ್ಬವನ್ನು ಗ್ರಾಮದ ಎಲ್ಲಾ ಸಮುದಾಯಗಳು ಒಟ್ಟಿಗೆ ಸೇರಿ ಆಚರಣೆ ಮಾಡುತ್ತಾರೆ. 24 ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಪ್ರತಿಯೊಂದು ಸಮುದಾಯಕ್ಕೂ ಒಂದೊಂದು ಜವಾಬ್ದಾರಿ ವಹಿಸಲಾಗುತ್ತದೆ.

ಬಲಿ ಕೊಡುವ ಕರ್ತವ್ಯವನ್ನು ನಾಯಕ ಸಮುದಾಯಕ್ಕೆ, ಹೆಬ್ರೆ ಬಾರಿಸುವುದು ಪರಿಶಿಷ್ಟ ಜಾತಿಗೆ, ಕನಕಂಡ್ರಿ ಹೊರುವುದು ಶಿವಾರ್ಚಕರಿಗೆ ಹೀಗೆ ಎಲ್ಲಾ ಸಮುದಾಯಕ್ಕೂ ಜವಾಬ್ದಾರಿ ನೀಡಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬಲಿ ಬೀಳುವ ವ್ಯಕ್ತಿಗೆ ಎರಡು ದಿನ ಮುಂಚೆಯೇ ವೀಳ್ಯ ನೀಡಲಾಗುತ್ತದೆ. ಅವರು ಊರಿನ ಬಲಿ ಬೀಳುವ ಮನೆಯಲ್ಲಿ ವಾಸಿಸುತ್ತಾರೆ.

ನರ ಬಲಿ: ಬಲಿ ನೀಡುವ ದಿನ ಬಲಿ ಬೀಳುವ ವ್ಯಕ್ತಿಯನ್ನು ಗ್ರಾಮಕ್ಕೆ ಕರೆದೊಯ್ಯಲಾಗುತ್ತದೆ. ಈ ವೇಳೆ ಸೀಗಮಾರಮ್ಮ ದೇವತೆ ಮೈಮೇಲೆ ಬಂದ ಅರ್ಚಕರು ಬಲಿ ಬೀಳುವ ವ್ಯಕ್ತಿಗೆ ಅಕ್ಕಿ ಕಾಳು ಎಸೆಯುತ್ತಾರೆ. ಆ ವೇಳೆ ಅರ್ಧ ಜೀವ ಹೋಗುತ್ತದೆ.

ಅರೆ ಜೀವವಾದ ವ್ಯಕ್ತಿಯನ್ನು ಮತ್ತೆ ಬಲಿ ಮನೆಗೆ ಕರೆತಂದು ಬಲಿ ಮನೆಯಲ್ಲಿ ಮಲಗಿಸಲಾಗುತ್ತದೆ. ಈ ವೇಳೆ ಸೀಗೆಮಾರಮ್ಮ ದೇವತೆ ಮೈಮೇಲೆ ಬರುವ ಅರ್ಚಕ ಆವೇಷದಿಂದ ಬಲಿ ವ್ಯಕ್ತಿಯ ಮೇಲೆ ಕಾಲಿಡುತ್ತಾರೆ. ಆ ಸಂದರ್ಭದಲ್ಲಿ ಆ ಬಲಿ ವ್ಯಕ್ತಿಯ ಜೀವ ಹೋಗುತ್ತದೆ ಎನ್ನುವ ನಂಬಿಕೆಯಿದೆ. ಹೀಗೆ ರಾತ್ರಿ ಆ ವ್ಯಕ್ತಿಯನ್ನು ಊರತುಂಬೆಲ್ಲಾ ಮೆರವಣಿಗೆ ಮಾಡುತ್ತಾರೆ. ಮೆರವಣಿಗೆ ವೇಳೆ ಶವವನ್ನು ಎಸೆಯಲಾಗುತ್ತದೆ. ಸತತ 9 ತಾಸು ಆತನ ಉಸಿರಾಟ ನಿಂತು ಹೋಗಿರುತ್ತದೆ. ಆದರೆ ಹೀಗೆ ಬಲಿ ಬಿದ್ದ ವ್ಯಕ್ತಿಗೆ ಬೆಳಗ್ಗೆ ಮತ್ತೆ ಮರುಜೀವ ಬರುತ್ತದೆ. ಪ್ರಾಣ ಹೋಗಿ ನಿಷ್ಕ್ರೀಯವಾದ ವ್ಯಕ್ತಿಯನ್ನು ಬಲಿ ಪೀಠಕ್ಕೆ ಕೊಂಡೊಯ್ಯುವ ಗ್ರಾಮಸ್ಥರು. ಬಲಿ ಪೀಠದ ಬಳಿ ಸತ್ತ ವ್ಯಕ್ತಿಯ ದರ್ಶನಕ್ಕೆ ಅವಕಾಶ ಕೊಡುತ್ತಾರೆ. ಇದನ್ನೂ ಓದಿ: ಲಕ್ಷ್ಮಣ ಸವದಿಯ ಮುಂದಿನ ರಾಜಕೀಯ ಹಾದಿ ಏನು?

ಮರುಜೀವ ಬಂತು: ಬೆಳಗ್ಗೆ 9 ಗಂಟೆ ವೇಳೆಗೆ ಒಳಗೆರೆ ಹುಚ್ಚಮ್ಮ ದೇವತೆ ಮೈಮೇಲೆ ಬಂದ ಅರ್ಚಕರಿಂದ ನಿರ್ಜೀವ ವ್ಯಕ್ತಿ ಮೇಲೆ ತೀರ್ಥ ಪ್ರೋಕ್ಷಣೆ ಮಾಡಲಾಗುತ್ತದೆ. ಸತ್ತ ವ್ಯಕ್ತಿಗೆ ತೀರ್ಥ ಪ್ರೋಕ್ಷಣೆಯಿಂದ ಮರುಜೀವ ಬರುವುದೇ ವಿಶೇಷ. ಸತ್ತಿದ್ದ ವ್ಯಕ್ತಿಗೆ 11ನೇ ದಿನ ಸಾಂಕೇತಿಕವಾಗಿ ತಿಥಿ ಕಾರ್ಯ ನಡೆಯುತ್ತದೆ. ಹೀಗೆ ಬಲಿ ಬೀಳುವ ವ್ಯಕ್ತಿ ಇನ್ನು ಮುಂದೆ ತನ್ನ ಜೀವಮಾನದಲ್ಲಿ ಹೊರಗೆ ಊಟ ತಿಂಡಿ ಮಾಡುವಂತಿಲ್ಲ. ಇದನ್ನೂ ಓದಿ: ಮೈಸೂರು ಮೃಗಾಲಯದಲ್ಲಿ ಸಂಭ್ರಮ- ಮೂರು ಮರಿಗಳಿಗೆ ಜನ್ಮ ನೀಡಿದ ತಾರಾ!

ಈ ಹಬ್ಬದ ವೇಳೆ ಗ್ರಾಮದಲ್ಲಿ ಮಾಂಸಹಾರ ಮಾಡಲ್ಲ, ಮದ್ಯಪಾನ ಮಾಡಲ್ಲ, ಮನೆಗಳಲ್ಲಿ ಒಗ್ಗರಣೆ ಹಾಕಲ್ಲ. ಈ ಅವಧಿಯಲ್ಲಿ ಮದುವೆ ಸೇರಿದಂತೆ ಶುಭಕಾರ್ಯಗಳು ನಿಷಿದ್ಧವಾಗಿದೆ. ಈ ಅವಧಿಯಲ್ಲಿ ಯಾರಾದರು ಸತ್ತರೆ ಒಂದೇ ಗಂಟೆ ಅವಧಿಯಲ್ಲಿ ಗ್ರಾಮದಿಂದ ಹೊರಕ್ಕೆ ಶವ ಸಾಗಾಣೆ ಮಾಡುತ್ತಾರೆ.

ಒಟ್ಟಿನಲ್ಲಿ ಆಧುನಿಕ ಯುಗದಲ್ಲೂ ಕೂಡ ಇಂತಹ ಆಚರಣೆ ನಡೆಯುತ್ತಿರುವುದು ವಿಶೇಷವಾಗಿದೆ. ಬಲಿ ಬೀಳುವ ವ್ಯಕ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ. ಈ ನಂಬಿಕೆಯ ಆಧಾರದ ಮೇಲೆ ಇಲ್ಲಿ ಸೀಗ ಮಾರಮ್ಮ ಬಲಿ ಜಾತ್ರೆ ನಡೆದುಕೊಂಡು ಹೋಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *