ಸೋಂಕು ಕಡಿಮೆ ಇದ್ದಾಗ ಕರ್ಫ್ಯೂ ವಿಧಿಸಿ, ಹೆಚ್ಚಾದಾಗ ಕರ್ಫ್ಯೂ ಹಿಂಪಡೆದಿದ್ದಾರೆ: ಡಿಕೆಶಿ

Public TV
3 Min Read

ಬೆಂಗಳೂರು: ಇದು ಬಿಜೆಪಿ ಕರ್ಫ್ಯೂ. ಅವರಿಗೆ ಬೇಕಾದಾಗ ವಿಧಿಸುತ್ತಾರೆ, ಬೇಡವಾದಾಗ ತೆರವುಗೊಳಿಸುತ್ತಾರೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ನಾವು ಪಾದಯಾತ್ರೆ ಮಾಡುತ್ತೇವೆ ಎಂಬ ಕಾರಣಕ್ಕೆ ಜನರಿಗೆ ಕೊಡಬಾರದ ಕಷ್ಟ ಕೊಟ್ಟರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸೋಂಕು ಪ್ರಮಾಣ ಕಡಿಮೆ ಇದ್ದಾಗ ಕರ್ಫ್ಯೂ ವಿಧಿಸಿದ್ದವರು, ಸೋಂಕು ಪ್ರಮಾಣ ಹೆಚ್ಚಾದಾಗ ಕರ್ಫ್ಯೂ ಹಿಂಪಡೆದಿದ್ದಾರೆ. ರಾಜಕೀಯ ಕಾರಣಕ್ಕೆ ಅವರು ಈ ರೀತಿ ಮಾಡುತ್ತಿದ್ದಾರೆ ಎಂದರು. ಕರ್ಫ್ಯೂ ವಿಧಿಸಿದ್ದರಿಂದ ಜನರಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಹಣ್ಣು, ತರಕಾರಿ ಬೆಳೆಯುವವರ, ಮಾರುವವರ ಪರಿಸ್ಥಿತಿ ಏನಾಗಿದೆ ಎಂದು ನೋಡಿದ್ದೀರಿ. ಕೆಎಸ್ಆರ್‌ಟಿಸಿ, ಮೆಟ್ರೋದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯಾಣ ಮಾಡಬಹುದು, ವಿಮಾನಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಪ್ರಯಾಣ ಮಾಡಬಹುದು. ಬಡವರು, ಹೊಟೇಲ್ ನವರು, ಚಿತ್ರಮಂದಿರಗಳವರು ಹಾಗೂ ಇತರರು ಶೇ.50 ರಷ್ಟು ಮಾತ್ರ ವ್ಯಾಪಾರ ಮಾಡಬೇಕಂತೆ. ಕುಟುಂಬ ಸದಸ್ಯರು ವಾಹನಗಳಲ್ಲಿ ಸಂಚಾರ ಮಾಡುವಾಗ ಶೇ.50ರಷ್ಟು ನಿಯಮ ಪಾಲನೆ ಮಾಡಲು ಸಾಧ್ಯವೇ? ಸರ್ಕಾರ ಪ್ರಾಯೋಗಿಕವಾಗಿ ಯೋಚಿಸಬೇಕು. ಈ ಸರ್ಕಾರ ಆ ರೀತಿ ಯೋಚಿಸುತ್ತಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ

ಬೇರೆಲ್ಲೂ ಇಲ್ಲದ ನಿಯಮ ಇಲ್ಲಿ ಯಾಕೆ?: ಔಷಧಿ ನೀಡಿ, ಸಹಾಯ ಮಾಡಿ, ಆರೋಗ್ಯ ಕಾಪಾಡಿ ಸರ್ಕಾರ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಆದರೆ ಈ ಸರ್ಕಾರ ಅವೈಜ್ಞಾನಿಕವಾಗಿ ನಿಯಮಗಳನ್ನು ಜಾರಿ ಮಾಡುತ್ತಿದೆ. ಸರ್ಕಾರಗಳು ರಾಜ್ಯ ಹಾಗೂ ದೇಶದ ಆರ್ಥಿಕತೆ ನೋಡಬೇಕು. ಆಂಧ್ರ, ತೆಲಂಗಾಣ ಹಾಗೂ ಬೇರೆ ರಾಜ್ಯಗಳಲ್ಲಿ ಇಲ್ಲದ ನಿಯಮ ಇಲ್ಲಿ ಯಾಕೆ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು. ಇದನ್ನೂ ಓದಿ: ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ: ಡಿಕೆಶಿ

ವಿದ್ಯುತ್ ದರ ಏರಿಕೆ ಪ್ರಸ್ತಾಪದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು, ಜನಸಾಮಾನ್ಯರ ಆದಾಯ ಖಾತರಿ ಮತ್ತು ಹೆಚ್ಚಳಕ್ಕೆ ಸರ್ಕಾರ ಮೊದಲು ಕ್ರಮ ಕೈಗೊಳ್ಳಲಿ. ಅವರಿಗೆ ಆದಾಯ ಬಂದ ಮೇಲೆ ವಿದ್ಯುತ್ ದರ ಏರಿಕೆ ಮಾಡಲಿ. ಹಾಲಿನ ದರ, ವಿದ್ಯುತ್ ದರ ಹೆಚ್ಚಿಸುತ್ತಿದ್ದಾರೆ. ರೈತನಿಗೆ ತೊಂದರೆ ಆದಾಗ ಅವನ ರಕ್ಷಣೆಗೆ ಸರ್ಕಾರ ಯಾಕೆ ನಿಲ್ಲಲಿಲ್ಲ? ಬೆಳೆ ದರ ಏಕೆ ಹೆಚ್ಚಿಸಲಿಲ್ಲ? ಬೆಂಬಲ ಬೆಲೆ ಯಾಕೆ ನೀಡಲಿಲ್ಲ. ಏರಿಕೆಯಾಗಿರುವ ಕಬ್ಬಿಣ, ಸಿಮೆಂಟ್ ದರ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಿಲ್ಲ. ಈಗ ವಿದ್ಯುತ್ ದರ ಬಾಕಿ ಕೊಡಬೇಕು ಎನ್ನುತ್ತಿದ್ದಾರೆ. ವಿದ್ಯುತ್ ಕಂಪನಿಗಳ ಪರಿಸ್ಥಿತಿ ಹೇಗಿದೆ ಎಂದು ನಮಗೆ ಗೊತ್ತಿದೆ. ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವ ಕ್ರಮ ಕೈಗೊಳ್ಳಬೇಕು ಎಂದರು. ಇದನ್ನೂ ಓದಿ: ಕೋವಿಡ್‌ ಯಾರನ್ನೂ ಬಿಟ್ಟಿಲ್ಲ, ದೇವೇಗೌಡರಿಗೆ ಕೊರೊನಾ ತೀವ್ರತೆ ಇಲ್ಲ: ಬೊಮ್ಮಾಯಿ

ತಮಿಳುನಾಡು ಆರಂಭಿಸಲಿರುವ ಹೊಗೇನಕಲ್ ಯೋಜನೆ ಬಗ್ಗೆ ಮಾತನಾಡಿದ ಅವರು, ಈ ವಿಚಾರವಾಗಿ ಈಗ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸರ್ಕಾರ ಏನೆಲ್ಲಾ ಹೇಳಿಕೆ ನೀಡುತ್ತದೆಯೋ ನೀಡಲಿ. ನಂತರ ಮಾತನಾಡುತ್ತೇನೆ ಎಂದರು.

ಕಾಂಗ್ರೆಸ್‌ ಸದಸ್ಯತ್ವಕ್ಕೆ ಆನ್‌ಲೈನ್‌ ನೋಂದಣಿ!: ನಾವು ಆನ್‌ಲೈನ್ ಹಾಗೂ ಆಫ್‌ಲೈನ್‌ ಸದಸ್ಯತ್ವ ನೋಂದಣಿ ಮಾಡುತ್ತಿದ್ದೇವೆ. ಪ್ರತಿಯೊಬ್ಬರಿಗೂ ಆನ್‌ಲೈನ್ ಸದಸ್ಯತ್ವ ಅವಕಾಶ ನೀಡಲಾಗಿದೆ. ಮಾರ್ಚ್‌ವರೆಗೂ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ. ನಂತರವೂ ಸದಸ್ಯತ್ವ ನೀಡುತ್ತೇವೆ. ಆದರೆ ಪಕ್ಷದ ಆಂತರಿಕ ಚುನಾವಣೆಗಳಲ್ಲಿ ಮತದಾನದ ಹಕ್ಕು ಪಡೆಯಬೇಕಾದರೆ ಈ ಅಭಿಯಾನದ ಕಾಲಾವಧಿಯಲ್ಲಿಯೇ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರತಿ ಬೂತ್‌ಗೆ ಇಬ್ಬರು ಕಾರ್ಯಕರ್ತರ ನೇಮಕಕ್ಕೆ ಸೂಚನೆ ನೀಡಲಾಗಿದೆ. ಆನ್‌ಲೈನ್ ಸದಸ್ಯತ್ವ ಹೇಗೆ ಮಾಡಬೇಕು ಎಂಬುದಕ್ಕೆ ಈಗ ತರಬೇತಿ ನೀಡಲಾಗುತ್ತಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *