ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಆರೈಕೆ: ಸುಧಾಕರ್

Public TV
2 Min Read

ಬೆಂಗಳೂರು: ಎಷ್ಟೇ ಜನರಿಗೆ ಸೋಂಕು ತಗುಲಿದರೂ ಮನೆಯಲ್ಲಿ ಆರೈಕೆ ಮಾಡುವ ವ್ಯವಸ್ಥೆ ಮಾಡುತ್ತಿದ್ದೇವೆ. ಈ ಮೂಲಕ ಕೊರೊನಾ ಮೂರನೇ ಅಲೆಯನ್ನು ನಿಯಂತ್ರಣ ಮಾಡಲು ವಿಶೇಷ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು.

ಬಸವನಗುಡಿಯ ಅಬಲಾಶ್ರಮದಲ್ಲಿ ಸ್ವಾಸ್ಥ್ಯ ಹೆಸರಿನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಕೊರೊನಾ ಮೂರನೇ ಅಲೆಗೆ ನಾವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಕುರಿತಾಗಿ ನಿನ್ನೆ 10 ಸಾವಿರ ವೈದ್ಯರ ಜೊತೆ ಸಂವಾದ ಮಾಡಿದ್ದೇನೆ. ಇವರು ಹೋಂ ಐಸೋಲೇಷನ್ ಇದ್ದಾಗ ಹೇಗೆ ಟೆಲಿ ಟ್ರೈನಿಂಗ್ ಮಾಡಬೇಕು ಎನ್ನುವುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ವಿಶ್ವದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಜಾಸ್ತಿಯಾಗಿದೆ. ಸಮಾಧಾನದ ವಿಚಾರ ಎಂದರೆ ರೋಗದ ಲಕ್ಷಣ ಕಡಿಮೆ ಇದೆ. ಜೊತೆಗೆ ಆಸ್ಪತ್ರೆಯಲ್ಲಿ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಇದರಿಂದಾಗಿ ಕೊರೊನಾ ಮೂರನೇ ಅಲೆಯನ್ನು ನಿಯಂತ್ರಣ ಮಾಡಬಹುದು. ಫೆಬ್ರವರಿಯಲ್ಲಿ ಇದರ ತೀವ್ರತೆ ಕಡಿಮೆಯಾಗಬಹುದು ಎಂದು ಹೇಳಲಾಗುತ್ತದೆ ಎಂದರು.

ಬಳ್ಳಾರಿಯಲ್ಲಿ ಹಾಸ್ಟೆಲ್‍ಗಳನ್ನು ಮುಚ್ಚುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಜಿಲ್ಲೆಗಳ ಪರಿಸ್ಥಿತಿಗೆ ಅನುಸಾರವಾಗಿ ಕ್ರಮಕೈಗೊಳ್ಳುವ ಅಧಿಕಾರವನ್ನು ಅಲ್ಲಿನ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಬಳ್ಳಾರಿಯಲ್ಲಿ ಹಾಸ್ಟೆಲ್‍ಗಳಲ್ಲಿ ಕೇಸ್‍ಗಳ ಸಂಖ್ಯೆ ಜಾಸ್ತಿ ಆಗಿರಬಹುದು. ಹಾಗಾಗಿ ಡಿಸಿ ಈ ಕ್ರಮ ಕೈಗೊಂಡಿರಬಹುದು. ಬಳ್ಳಾರಿಯ ಪರಿಸ್ಥಿತಿ ಬಗ್ಗೆ ಅಲ್ಲಿನ ಡಿಸಿ ಜೊತೆ ಚರ್ಚಿಸುತ್ತೇನೆ. ಡಿಸಿಯವರಿಂದ ಜಿಲ್ಲೆಯ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.

CORONA-VIRUS.

ಬೆಳಗಾವಿಯ ರಾಮದುರ್ಗ ತಾಲೂಕಿನಲ್ಲಿ ರೂಬೆಲ್ಲ ಲಸಿಕೆ ಪಡೆದ ಬಳಿಕ ಮೂವರು ಮಕ್ಕಳು ಸಾವನ್ನಪ್ಪಿದ್ದರು. ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಏನಾಗಿದೆ ಎಂದು ನೋಡಿಕೊಂಡು ಮಾತಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಆಫ್ಘಾನ್ ಸಂಗೀತಗಾರನ ಮುಂದೆಯೇ ವಾದ್ಯ ಸುಟ್ಟ ತಾಲಿಬಾನ್

ಇಂದಿಗೆ ಲಸಿಕಾಕರಣವು 1 ವರ್ಷ ಪೂರೈಸಿದೆ. ಇಡೀ ವಿಶ್ವದಲ್ಲಿ ಇಷ್ಟು ದೊಡ್ಡ ಪ್ರಮಾಣದ ಸಾಧನೆ ಭಾರತ ಮಾಡಿದೆ. ಪ್ರಧಾನ ಮಂತ್ರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಭಿಯಾನ ಸಾಕಾರಗೊಳ್ಳಲು ಲಸಿಕೆ ಸಂಶೋಧನೆ ಮಾಡಿದ ವಿಜ್ಞಾನಿಗಳು ಸಂಸ್ಥೆಗೆ ಕೃತಜ್ಞತೆ ಹೇಳುತ್ತೇನೆ. 36 ದೇಶಗಳಲ್ಲಿ ಕೇವಲ 10% ರಷ್ಟು ಲಸಿಕೆ ಪಡೆಯಲು ಆಗಿಲ್ಲ. ಕರ್ನಾಟಕ 99% ಮೊದಲ ಡೋಸ್ ಆಗಿದೆ. 80% ಎರಡನೇ ಡೋಸ್ ಆಗಿರುವವರು ಇದ್ದಾರೆ. ವಿಶ್ವದ ಬಡ ರಾಷ್ಟ್ರಗಳಿಗೆ ಕೂಡಾ ಭಾರತ ಲಸಿಕೆ ಸರಬರಾಜು ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: MPSC ಹುದ್ದೆ ಆಕಾಂಕ್ಷಿ ಅನುಮಾನಾಸ್ಪದ ರೀತಿಯಲ್ಲಿ ಕೊಠಡಿಯಲ್ಲಿ ಶವವಾಗಿ ಪತ್ತೆ

ಈ ಸಂದರ್ಭದಲ್ಲಿ ಆರ್ ಎಸ್‍ಎಸ್ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ, ಅಬಲಾಶ್ರಮದ ಗೌರವಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ದೇಶಪಾಂಡೆ, ಮಾಜಿ ಮೇಯರ್ ಬಿ.ಎಸ್.ಸತ್ಯನಾರಾಯಣ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *