ಟ್ವಿಟ್ಟರ್‌ CEO ಜಾಕ್‌ ಡಾರ್ಸಿ ರಾಜೀನಾಮೆ – ಭಾರತೀಯ ಪರಾಗ್‌ ಅಗರ್‌ವಾಲ್‌ಗೆ ಒಲಿಯಿತು ಪಟ್ಟ

Public TV
2 Min Read

ಕ್ಯಾಲಿಫೋರ್ನಿಯಾ: ಟ್ವಿಟ್ಟರ್‌ ಸಹ-ಸಂಸ್ಥಾಪಕ ಜಾಕ್ ಡಾರ್ಸಿ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ  ರಾಜೀನಾಮೆ ನೀಡಿದ್ದಾರೆ.

“ನಾನು ಟ್ವಿಟರ್ ಅನ್ನು ಪ್ರೀತಿಸುತ್ತೇನೆ” ಎಂದು ಡಾರ್ಸಿ ಟ್ವೀಟ್ ಮಾಡಿ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ ಪರಾಗ್ ಅಗರ್‌ವಾಲ್ ಸಿಇಒ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎಂದು ಜಾಕ್‌ ಡಾರ್ಸಿ ತಿಳಿಸಿದ್ದಾರೆ.

2009ರಲ್ಲಿ ಡಾರ್ಸಿ ಹಣಕಾಸು ಪಾವತಿ ಸಂಸ್ಥೆ ʼಸ್ಕ್ವೇರ್‌ʼ ಸ್ಥಾಪಿಸಿದ್ದರು. ಈ ಕಂಪನಿಯಲ್ಲಿ ಡಾರ್ಸಿ ಮುಖ್ಯ ಕಾರ್ಯನಿರ್ವಹಕರಾಗಿದ್ದಾರೆ. ಕೆಲ ದಿನಗಳ ಹಿಂದೆ ದೊಡ್ಡ ಹೂಡಿಕೆದಾರರು ಡಾರ್ಸಿ ಅವರು ಎರಡು ಕಂಪನಿಗಳನ್ನು  ಪರಿಣಾಮಕಾರಿಯಾಗಿ ಮುನ್ನಡೆಸಬಹುದೇ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು. ಇದನ್ನೂ ಓದಿ: ಮೂರು ಕೃಷಿ ಕಾನೂನು ವಾಪಸ್ – ಖುಷಿಯಾಗದ ಕಾಂಗ್ರೆಸ್ ನಾಯಕರು

ಈ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಡಾರ್ಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿಯತೊಡಗಿತ್ತು. ಈಗ ಡಾರ್ಸಿ ಅಧಿಕೃತವಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ವರ್ಷದ ಜನವರಿ 6ರ ಕ್ಯಾಪಿಟಲ್ ಹಿಲ್‌ ಗಲಭೆ ಮತ್ತು ಈ ಘಟನೆಯ ನಂತರ ಡೊನಾಲ್ಡ್‌ ಟ್ರಂಪ್ ಮಾಡಿದ ಟ್ವೀಟ್‌ಗಳು ಸಾರ್ವಜನಿಕ ಗಲಾಟೆಗೆ ಕಾರಣವಾಗಿದೆ ಎಂದು ಆರೋಪಿಸಿ ಟ್ವಿಟ್ಟರ್‌ ಕಂಪನಿ ಟ್ರಂಪ್‌ ಅವರ ಖಾತೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಈ ನಿಷೇಧ ಕ್ರಮವನ್ನು ಡಾರ್ಸಿ ಸಮರ್ಥಿಸಿಕೊಂಡಿದ್ದರು. ಟ್ವಿಟ್ಟರ್‌ ಈ ಕ್ರಮ ವಿಶ್ವದೆಲ್ಲೆಡೆ ಭಾರೀ ಟೀಕೆಗೆ ಗುರಿಯಾಗಿತ್ತು.

ಪರಾಗ್‌ ಅಗರ್‌ವಾಲ್‌ ಯಾರು?
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಬಾಂಬೆಯ ಹಳೆಯ ವಿದ್ಯಾರ್ಥಿ ಪರಾಗ್‌ ಅಗರವಾಲ್ ಅವರನ್ನು ಮಾರ್ಚ್ 8, 2018 ರಂದು ಟ್ವಿಟ್ಟರ್‌ ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ(ಸಿಟಿಒ) ಆಗಿ ಆಗಿ ನೇಮಿಸಲಾಯಿತು. ಅವರು ಡಿಸೆಂಬರ್ 2016 ರಲ್ಲಿ ಕಂಪನಿಯನ್ನು ತೊರೆದ ಆಡಮ್ ಮೆಸಿಂಜರ್ ಅವರ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ತಾಕತ್ತಿದ್ದರೆ ಬಿಜೆಪಿ ಸರ್ಕಾರದ ವಿರುದ್ಧದ 40% ಆರೋಪ ಸಾಬೀತು ಪಡಿಸಲಿ: ಶ್ರೀರಾಮುಲು

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ ನಂತರ ಅಗರವಾಲ್ ಅಕ್ಟೋಬರ್ 2011 ರಲ್ಲಿ ಟ್ವಿಟ್ಟರ್‌ ಕಂಪನಿಯನ್ನು ಸೇರಿದ್ದರು. ಸ್ಟ್ಯಾನ್‌ಫೋರ್ಡ್‌ನಲ್ಲಿ ಓದುತ್ತಿದ್ದಾಗ, ಅವರು ಮೈಕ್ರೋಸಾಫ್ಟ್, ಯಾಹೂ ಮತ್ತು AT&T ಲ್ಯಾಬ್‌ಗಳಿಗೆ ಸಂಶೋಧನಾ ಇಂಟರ್ನಿ ಆಗಿ ಕೆಲಸ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *