ನಾನು 35 ಅಂಕದ ಕೆಟಗೆರಿಯವರು ಅದಕ್ಕೆ ಕೈಗಾರಿಕಾ ಸಚಿವನಾದೆ: ಮುರುಗೇಶ್ ನಿರಾಣಿ

Public TV
3 Min Read

– ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಹುಬ್ಬಳ್ಳಿಯ ಬಿವಿಬಿ ಕಾಲೇಜು
– ವಿದ್ಯಾರ್ಥಿಗಳು ಕೇವಲ ಉದ್ಯೋಗಿಗಳಾಗದೇ ಕೆಲಸ ನೀಡುವ ಉದ್ಯಮಪತಿಗಳಾಗಲಿ

ಹುಬ್ಬಳ್ಳಿ: ಅದೊಂದು ಅಪರೂಪದ ಕ್ಷಣ, ಅಲ್ಲಿ ಅಧಿಕಾರದ ಹಮ್ಮು- ಬಿಮ್ಮು, ದೊಡ್ಡವರು, ಚಿಕ್ಕವರು ಯಾವುದೂ ಇರಲಿಲ್ಲ. ಬದಲಿಗೆ ವಿಧೇಯ ಹಳೆಯ ವಿದ್ಯಾರ್ಥಿಗಳಂತೆ ಅವರೆಲ್ಲರೂ ಬೆರೆತರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿ ಪ್ರತಿಷ್ಠಿತ ಬಿವಿಬಿ ಎಂಜಿನಿಯರಿಂಗ್ ಕಾಲೇಜು.

ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ 75 ನೇ ವರ್ಷಾಚರಣೆ ಹಾಗೂ ಕೆಎಇ ಟೆಕ್ ಪಾರ್ಕ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ. ಇದರಲ್ಲಿ ವಿಶೇಷತೆ ಎಂದರೆ ಈ ಇಬ್ಬರೂ ಇದೇ ಕಾಲೇಜಿನ ಸಹಪಾಠಿಗಳು. ಹಾಗಾಗಿಯೇ ಇಂದು ಅವರು ಉನ್ನತ ಸ್ಥಾನಮಾನದಲ್ಲಿದ್ದರೂ ತಾವು ಕಾಲೇಜಿನ ವಿಧೇಯ ಹಳೆಯ ವಿದ್ಯಾರ್ಥಿಗಳು. ಸ್ನೇಹದ ಮುಂದೆ ಅಧಿಕಾರ ಗೌಣ ಎಂಬುದನ್ನು ಅಕ್ಷರಶಃ ತೋರಿಸಿಕೊಟ್ಟರು. ಇದನ್ನೂ ಓದಿ: 60 ತಿಂಗಳಲ್ಲಿ 59 ತಿಂಗಳು ಅಭಿವೃದ್ಧಿ, ಒಂದು ತಿಂಗಳ ಮಾತ್ರ ರಾಜಕಾರಣ ಮಾಡೋಣ: ಬೊಮ್ಮಾಯಿ

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕಾಲೇಜಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಪ್ರಾಧ್ಯಾಪಕರು,ಹಿರಿಯ-ಕಿರಿಯ ಸಹಪಾಠಿಗಳನ್ನು, ಹಾಜರಾಗದ ಪ್ರಯೋಗಾಲಯಗಳು, ಪುಸ್ತಕ ಪಡೆಯದ ಗ್ರಂಥಾಲಯಗಳು, ಹಾಸ್ಟೆಲ್, ಕ್ಯಾಂಪಸ್, ಕ್ಯಾಂಟೀನ್ ಎಲ್ಲವನ್ನೂ ವಿನೋದವಾಗಿ ನೆನಪಿಸಿಕೊಂಡರು. ಹಿಂದೆ ನಾನು ವಿದ್ಯಾರ್ಥಿಯಾಗಿದ್ದಾಗ ಕರ್ನಾಟಕ ವಿವಿ ಕುಲಪತಿಗಳಾಗಿದ್ದ ಡಾ.ಡಿ.ಎಂ.ನಂಜುಂಡಪ್ಪ ಅವರ ಕಾಠಿಣ್ಯ, ಶಿಸ್ತು, ಬದ್ಧತೆಯಿಂದ ನಮ್ಮ ವ್ಯಾಸಂಗ ಪೂರ್ಣವಾಗಲು ಸಾಧ್ಯವಾಯಿತು ಎಂದು ಸ್ಮರಿಸಿಕೊಂಡರು.

ಕಾರ್ಯಕ್ರಮಕ್ಕೆ ಮತ್ತಷ್ಟು ಸೊಬಗು ತಂದವರು ಸಚಿವ ಮುರುಗೇಶ್ ಆರ್. ನಿರಾಣಿ.ಇದೇ ಕಾಲೇಜಿನ ವಿದ್ಯಾರ್ಥಿಯಾಗಿ ಇಂದು ದೇಶದ ಹೆಮ್ಮೆಯ ಕೈಗಾರಿಕೋದ್ಯಮಿಯಾಗಿರುವ ಬೃಹತ್ ,ಮಧ್ಯಮ ಕೈಗಾರಿಕೆ ಸಚಿವರಾಗಿರುವ ಮುರುಗೇಶ್ ನಿರಾಣಿ ಅವರು ತಮ್ಮ ಕಾಲೇಜಿನ ಹಳೆಯ ದಿನಗಳನ್ನು ಮೆಲುಕು ಹಾಕಿದರು. ಇದನ್ನೂ ಓದಿ: ಎಸಿಬಿ ಬಲೆಗೆ ಬಿದ್ದ ಗುಡಸ ಗ್ರಾಮ ಪಂಚಾಯತ್ ಗುಮಾಸ್ತ

ನಾನು ಇಂಜಿನಿಯರಿಂಗ್‍ನಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಂಡಿದ್ದರೆ ಪ್ರೊಫೆಸರ್ ಅಥವಾ ಹೆಚ್ಚೆಂದರೆ ಎಇಇ ಆಗುತ್ತಿದ್ದೆ. ಆದರೆ ನಾವು 35 ಅಂಕದ ಕೆಟಗೆರಿಯವರು. ಅದಕ್ಕೆ ಕೈಗಾರಿಕಾ ಸಚಿವನಾದೆ ಎಂದು ಹೇಳುತ್ತಿದ್ದಂತೆ ಸಭಿಕರಿಂದ ಜೋರಾದ ಚಪ್ಪಾಳೆಯ ಸುರಿಮಳೆಯೇ ಸುರಿಯಿತು. ಇದಕ್ಕೆ ಅಷ್ಟೇ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ ನಿರಾಣಿ ಅವರು, ನಿಮ್ಮ ಚಪ್ಪಾಳೆ ನೋಡಿದರೆ ಇಲ್ಲಿ ನನ್ನ ಕೆಟಗರಿಯವರೇ ಬಹಳ ಜನ ಇದ್ದಾರೆಂದು ತಿಳಿಯುತ್ತದೆ ಎಂದು ತಮಾಷೆ ಮಾಡಿದರು.

ನಾನು ಈ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಬಹಳ ಖಯಷಿಯಾಗುತ್ತದೆ. ಪ್ರಧಾನಿ,ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕರ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದೆನೆ. ಅದಕ್ಕಿಂದ ಖುಷಿ ಈ ಕಾರ್ಯಕ್ರಮ ನೀಡುತ್ತಿದೆ. ಬಿವಿಬಿ ಕಾಲೇಜು ಸಾಕಷ್ಟು ಜನ ಮೇಧಾವಿಗಳನ್ನು ನೀಡಿದೆ. ವಿಶ್ವದಲ್ಲೇ ಶ್ರೇಷ್ಠ ಐಟಿ ಕಂಪನಿಯಾದ ಇನ್ಫೋಸಿಸ್‍ನ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ, ಬಿಜೆಪಿಯ ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ ಅವರುಗಳು ಈ ಕಾಲೇಜಿನ ವಿದ್ಯಾರ್ಥಿಗಳು ಎಂದು ಹೆಮ್ಮೆಯಿಂದ ಹೇಳಿದರು. ಇದನ್ನೂ ಓದಿ: ಸುರೇಶ್ ಅಂಗಡಿ ಇಲ್ಲೇ ಚಿಕಿತ್ಸೆ ಪಡೆದಿದ್ದರೆ ಉಳಿಯುತಿದ್ದರೆನೋ? – ಶೆಟ್ಟರ್

ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಇಂದು ರಾಜ್ಯದ ಮುಖ್ಯಮಂತ್ರಿಯವರೊಂದಿಗೆ ಹಂಚಿಕೊಳ್ಳುತ್ತಿರುವುದು, ತವರಿಗೆ ಬಂದಿರುವ ಸಂತಸದ ಭಾವನೆ ಮೂಡಿಸಿದೆ ಎಂದು ಭಾವುಕರಾದರು.

ಕೆಎಲ್‍ಇ ಸಪ್ತರ್ಷಿಗಳ ಪ್ರಯತ್ನದಿಂದ ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿಯಾಗಲು, ವಿಶೇಷವಾಗಿ ಮಹಿಳೆಯರು ತಾಂತ್ರಿಕ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. 3-4 ದಶಕಗಳ ಹಿಂದೆ ಕೇವಲ ಸುಮಾರು 500 ರಿಂದ 600 ವಿದ್ಯಾರ್ಥಿಗಳಿದ್ದ ಈ ಕಾಲೇಜು ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇಲ್ಲಿ ಸುಮಾರು 6 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಕೇವಲ ಉದ್ಯೋಗಿಗಳಾಗದೇ ಮತ್ತೊಬ್ಬರಿಗೆ ಕೆಲಸ ನೀಡುವ ಉದ್ಯಮಪತಿಗಳಾಗಲಿ ಎಂದು ಕರೆ ಕೊಟ್ಟರು. ಸರ್ಕಾರದ ಅನೇಕ ಪ್ರೋತ್ಸಾಹದಾಯಕ ಯೋಜನೆಗಳ ಪ್ರಯೋಜನ ಪಡೆಯಬೇಕು. ಅಕ್ಟೋಬರ್ 15ರಿಂದ ತಮ್ಮ ನಿರಾಣಿ ಸಮೂಹ ಸಂಸ್ಥೆಗಳ ಉದ್ಯಮ ಘಟಕಗಳು ಪುನರಾರಂಭ ಮಾಡಲಿವೆ.ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿಗೆ ಭೇಟಿ ನೀಡಿ ಸ್ಫೂರ್ತಿ ಪಡೆಯಲಿ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *