ದೇಶದಲ್ಲೇ ಮೊದಲ ಪ್ರಯತ್ನ- ಸಮುದ್ರದ ಉಪ್ಪು ನೀರಿನಿಂದ ಸಿಗಲಿದೆ ಶುದ್ಧವಾದ ಸಿಹಿ ನೀರು

Public TV
2 Min Read

-ಮಂಗಳೂರು ಕಡಲಿನಲ್ಲಿ ಹೊಸ ಆವಿಷ್ಕಾರ

ಮಂಗಳೂರು: ಆಳಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರು 10ಕ್ಕೂ ಹೆಚ್ಚು ದಿನಗಳ ಕಾಲ ಸಮುದ್ರದಲ್ಲೇ ಇರುತ್ತಾರೆ. ಈ ಸಂದರ್ಭ ಸಮುದ್ರದ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಒಂದು ವಾರದ ಬಳಕೆಗೆ ಬೇಕಾದ ಸಿಹಿ ನೀರನ್ನು ಹೋಗುವಾಗಲೇ ಬೋಟ್‍ನಲ್ಲಿ ಸಂಗ್ರಹಿಸಿ ಕೊಂಡೊಯ್ಯುತ್ತಾರೆ. ಆದರೆ ಇನ್ಮುಂದೆ ಈ ರೀತಿ ಕೊಂಡೊಯ್ಯುವ ಬದಲು ಸಮುದ್ರದ ಉಪ್ಪು ನೀರನ್ನೇ ಸಿಹಿ ನೀರಾಗಿ ಪರಿವರ್ತಿಸಿ ಬಳಕೆ ಮಾಡಬಹುದು. ಆಸ್ಟ್ರೇಲಿಯಾದ ಈ ತಂತ್ರಜ್ಞಾನವನ್ನು ಭಾರತದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಜಾರಿಗೊಳಿಸಲಾಗಿದೆ. ಈ ರೀತಿ ಬೋಟ್‍ನಲ್ಲಿಯೇ ಉಪ್ಪು ನೀರನ್ನು ಸಿಹಿ ನೀರಾಗಿ ಫಿಲ್ಟರ್ ಮಾಡುವ ತಂತ್ರಜ್ಞಾನದ ಪ್ರಾತ್ಯಕ್ಷಿತೆಯನ್ನು ಸಚಿವ ಎಸ್.ಅಂಗಾರ ಸಮ್ಮುಖದಲ್ಲೇ ನಡೆಸಲಾಯಿತು.

ಈ ತಂತ್ರಜ್ಞಾನ ಅಮೇರಿಕಾ, ಯುರೂಪ್‍ನಲ್ಲಿ ಈಗಾಗಲೇ ಬಳಕೆಯಲ್ಲಿದೆ. ಆಸ್ಟ್ರೇಲಿಯಾ ಮೂಲದ ರೆಯಾನ್ಸ್ ಎಂಬ ಕಂಪೆನಿ ಈ ಕಿಟ್‍ನ್ನು ತಯಾರಿಸುತ್ತಿದೆ. ಇಲ್ಲಿ ಬೋಟ್ ಸಂಚರಿಸುವಾಗಲೇ ಉಪ್ಪು ನೀರನ್ನು ಪೈಪ್ ಮೂಲಕ ಸಂಗ್ರಹಿಸಲಾಗುತ್ತೆ. ಪೈಪ್‍ನಿಂದ ಬಂದ ಉಪ್ಪು ನೀರು ಶುದ್ದೀಕರಿಸುವ ಯಂತ್ರದ ಒಳಗೆ ಪಂಪ್ ಆಗಿ ಬಳಿಕ ಫಿಲ್ಟರ್ ಆಗಿ ಸಿಹಿ ನೀರು ಇನ್ನೊಂದು ಪೈಪ್ ಮೂಲಕ ಹೊರ ಬರುತ್ತೆ. ಈ ರೀತಿ ಗಂಟೆಗೆ 168 ಲೀಟರ್ ನೀರು ಫಿಲ್ಟರ್ ಆಗಲಿದ್ದು, ದಿನವೊಂದಕ್ಕೆ 2000 ಲೀ. ನೀರು ಫಿಲ್ಟರ್ ಆಗುತ್ತೆ. ಇದರಿಂದ ಸದ್ಯ ನೀರು ಸಂಗ್ರಹಿಸಿಡಲು ಬೋಟ್‍ನಲ್ಲಿ ಸ್ಥಳವಕಾಶ ಸಮಸ್ಯೆ ಜೊತೆ ಅಧಿಕ ಭಾರದ ಹೊರೆ ತಪ್ಪಿದಂತಾಗುತ್ತದೆ. ಮೀನುಗಾರರಿಗೆ ನಿತ್ಯ ಬಳಕೆಗೆ ಇದೇ ನೀರನ್ನು ಬಳಸಬಹುದಾಗಿದ್ದು, ಸಿಹಿ ನೀರು ಮುಗಿಯುತ್ತೆ ಎಂಬ ಆತಂಕವು ಇರೋದಿಲ್ಲ.

ಈ ಯಂತ್ರಕ್ಕೆ 4 ಲಕ್ಷದ 60 ಸಾವಿರ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರ ಶೇ.50ರಷ್ಟು ಸಬ್ಸಿಡಿ ನೀಡುವ ನಿರ್ಧಾರ ಮಾಡಿದೆ. ಇದೀಗ ರಾಜ್ಯ ಸರ್ಕಾರವೂ ಬೋಟ್ ಮಾಲೀಕರಿಗೆ ಈ ಯಂತ್ರ ಅಳವಡಿಕೆಗೆ ವಿಶೇಷ ಅನುದಾನ ನೀಡುವ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಇನ್ಮುಂದೆ ಮೀನುಗಾರರಿಗೆ ಸಿಹಿ ನೀರು ಸಮುದ್ರದಲ್ಲೇ ಲಭ್ಯವಾಗಲಿದ್ದು ಸಿಹಿ ನೀರಿನ ಆಭಾವ ತಪ್ಪಲಿದೆ. ಇದನ್ನೂ ಓದಿ: ಪೂಜೆ ಮಾಡಿಕೊಂಡು ಹೋಗು ಅಂದ್ರೆ ದೇವಾಲಯವೇ ತನ್ನದೆಂದ ಪೂಜಾರಿ – ಗ್ರಾಮಸ್ಥರಿಂದ ಪ್ರತಿಭಟನೆ

Share This Article
Leave a Comment

Leave a Reply

Your email address will not be published. Required fields are marked *