ಬೆಂಬಲಿಗರಿಗೆ ನೋಟಿಸ್ ನೀಡಿದ್ದಕ್ಕೆ ಪೊಲೀಸರಿಗೆ ಧಮ್ಕಿ – ವಿಜಯಾನಂದ್ ಕಾಶಪ್ಪನವರ್ ವಿರುದ್ಧ ಎಫ್‍ಐಆರ್

Public TV
1 Min Read

– ಏ ಮಗನೇ ಕಾನೂನು ಮಾಡುವವನು ನಾನು? ಸಿಪಿಐಗೆ ಅವಾಜ್

ಬಾಗಲಕೋಟೆ: ಬೆಂಬಲಿಗರಿಗೆ ನೋಟಿಸ್ ನೀಡಿದ್ದಕ್ಕೆ ಠಾಣೆಗೆ ನುಗ್ಗಿ ಧಮ್ಕಿ ಹಾಕಿದ್ದ ಹುನಗುಂದ ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ವಿರುದ್ಧ ಇಳಕಲ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಸಿಪಿಐ ಅಯ್ಯನಗೌಡ ದೂರಿನ ಮೇರೆಗೆ ಕರ್ತವ್ಯಕ್ಕೆ ಅಡ್ಡಿ, ನಿಂದನೆ, ಧಮಕಿ ಹಿನ್ನೆಲೆ ಕಲಂ 143, 147, 353, 504, 506 ಅಡಿಯಲ್ಲಿ ಕೇಸ್ ಎಫ್‍ಐಆರ್ ದಾಖಲು ಮಾಡಲಾಗಿದೆ.

ಡಿಸಿಸಿ ಬ್ಯಾಂಕ್ ಪಿಗ್ಮಿ ಎಜೆಂಟ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ವಿಜಯಾನಂದ ಕಾಶಪ್ಪನವರ್ ಬೆಂಬಲಿಗರಿಗೆ ನೊಟೀಸ್ ನೀಡಲಾಗಿತ್ತು. ಇದರಿಂದ ಕೋಪಗೊಂಡು ಠಾಣೆಗೆ ನುಗ್ಗಿದ ಕಾಶಪ್ಪನವರ್, ಏ ಮಿಸ್ಟರ್ ಇವರಿಗೆ ಏನ್ ವಿಚಾರಣೆ ಮಾಡ್ತಿಯಾ? ಜಾಮೀನು ಪತ್ರ ತೆಗೆದುಕೊಂಡು ಕಳಿಸೋದು ಅಷ್ಟೇ ನಿನ್ನ ಕೆಲಸ. ಅವರಿಗ್ಯಾಕೆ ನೊಟೀಸ್ ಕೊಡ್ತೀಯಾ? ಯಾರೂ ನೊಟೀಸ್ ತೊಗೊಬೇಡಿ. ಏ ಮಗನೇ ಕಾನೂನು ಮಾಡುವವನು ನಾನು. ನೀನು ಏನು ಕಾನೂನಿನ ಬಗ್ಗೆ ಹೇಳ್ತಿಯಾ? ಇವರ್ಯಾರು ಇನ್ನು ಮುಂದೆ ವಿಚಾರಣೆಗೆ ಬರಲ್ಲ. ನಿನ್ ಸಸ್ಪೆಂಡ್ ಮಾಡಿಸ್ತೀನಿ. ಠಾಣೆ ಬಿಟ್ಟು ಹೊರಗೆ ಬಾ ನೋಡಿಕೊಳ್ತೀನಿ ಎಂದು ಸಿಪಿಐಗೆ ವಿಜಯಾನಂದ್ ಕಾಶಪ್ಪನವರ್ ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದೆ.

ಅಕ್ಟೋಬರ್ 27, 2020ರಂದು ಇಳಕಲ್ ನಾಗೂರು ರಸ್ತೆ ಬಳಿ ಡಿಸಿಸಿ ಬ್ಯಾಂಕ್ ಪಿಗ್ಮಿ ಎಜೆಂಟ್ ಬಸವರಾಜ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ತಲೆಗೆ ಏಟು ಬಿದ್ದ ಸ್ಥಿತಿಯಲ್ಲಿ ಬಸವರಾಜ್ ಶವ ಪತ್ತೆಯಾಗಿತ್ತು. ಈ ಹಿನ್ನೆಲೆ ಕಾಶಪ್ಪನವರ ಅವರ ಬೆಂಬಲಿಗರಾದ ಮಂಜುನಾಥ ಗೊಂದಿ ಮತ್ತು ಇಳಕಲ್ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಬಿ.ಎಸ್.ಪಾಟಿಲ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಂಧಿಸುವ ಮುನ್ನವೇ 11 ಜನ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ವಿಚಾರಣೆಗೆ ಹಾಜರಾಗಲು ಎರಡು ಬಾರಿ ಮನೆಗೆ ನೊಟೀಸ್ ಕಳಿಸಲಾಗಿತ್ತು. ಆದರೆ ಯಾರು ವಿಚಾರಣೆಗೆ ಹಾಜರಾಗಿರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *