ಪುರಸಭೆ ಸದಸ್ಯೆಯ ಗರ್ಭಪಾತ ಪ್ರಕರಣಕ್ಕೆ ಟ್ವಿಸ್ಟ್ – ಉಲ್ಟಾ ಹೊಡೆದ ಪತಿ ನಾಗೇಶ್ ನಾಯ್ಕ್

Public TV
2 Min Read

ಬಾಗಲಕೋಟೆ: ಗಲಾಟೆಯಿಂದಾಗಿಯೇ ತನ್ನ ಪತ್ನಿಗೆ ಗರ್ಭಪಾತ ಆಗಿದೆ ಅಂತ ಹೇಳಿಕೆ ಕೊಟ್ಟಿದ್ದ ಮಹಾಲಿಂಗಪುರ ಪುರಸಭೆ ಸದಸ್ಯೆ ಚಾಂದನಿ ನಾಯಕ್ ಪತಿ ನಾಗೇಶ್ ನಾಯಕ ಇದೀಗ ಉಲ್ಟಾ ಹೊಡೆದಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ತೇರದಾಳ ಶಾಸಕ ಸಿದ್ದು ಸವದಿ ತಳ್ಳಾಟ, ನೂಕಾಟದಿಂದ ಗರ್ಭಪಾತವಾಗಿದೆ ಎಂದು ಆರೋಪಿಸುವುದಿಲ್ಲ ಅಂತ ಚಾಂದಿನಿ ಪತಿ ನಾಗೇಶ್ ನಾಯ್ಕ ಇದೀಗ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಚುನಾವಣೆ ಘಟನೆಯಿಂದಲೇ ಆಗಿದೆ ಅನ್ನೋದನ್ನ ನಾವು ಒಪ್ಪುವುದಿಲ್ಲ. ಕಳೆದ ಏಳು ವರ್ಷಗಳಲ್ಲಿ ಎರಡ್ಮೂರು ಸಲ ಗರ್ಭಪಾತವಾಗಿದೆ. ಇದು ನಮ್ಮ ಮನೆಯ ವಿಷಯ, ದೊಡ್ಡದು ಮಾಡೋದು ಬೇಡ. ಯಾವ ರಾಜಕೀಯ ಪಕ್ಷಗಳು ಇದನ್ನು ಬಳಸಿಕೊಳ್ಳೋದು ಬೇಡ. ಇದನ್ನ ಇಲ್ಲಿಗೆ ಇಷ್ಟಕ್ಕೆ ಮುಗಿಸಿಬಿಡಿ. ಚುನಾವಣೆ ದಿನದ ಘಟನೆಯಿಂದ ಹೀಗಾಗಿರಬಹುದೆಂದು ತಪ್ಪಾಗಿ ಭಾವಿಸಿ ಹೇಳಿಕೆ ನೀಡಿದ್ದೆ. ಚುನಾವಣೆ ಘಟನೆ ನಡೆದು ಕೆಲ ದಿನಗಳ ಬಳಿಕ ಆಸ್ಪತ್ರೆಗೆ ತೋರಿಸಿದಾಗ ಗರ್ಭಪಾತ ವಿಷಯ ಗೊತ್ತಾಗಿದೆ ಎಂದು ನಾಗೇಶ್ ಉಲ್ಟಾ ಹೊಡೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕ, ಬೆಂಬಲಿಗರ ತಳ್ಳಾಟ ಪ್ರಕರಣ- ಪುರಸಭೆ ಸದಸ್ಯೆಗೆ ಗರ್ಭಪಾತ

ಚುನಾವಣೆ ಗಲಾಟೆ ಇದಕ್ಕೆ ಕಾರಣ ಅನ್ನೋದನ್ನ ನಾನು ಮತ್ತು ನನ್ನ ಪತ್ನಿ ಚಾಂದಿನಿ ಒಪ್ಪುವುದಿಲ್ಲ. ಈ ಬಗ್ಗೆ ಯಾರಿಂದಲೂ ಒತ್ತಡ ಇರೋದಿಲ್ಲ. ಸ್ವಯಂ ಪ್ರೇರಿತವಾಗಿ ಲಿಖಿತ ಹೇಳಿಕೆ ನೀಡಿದ್ದೇವೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಮಹಾಲಿಂಗಪುರದಲ್ಲಿ ಡಿ.5 ರಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿರೋ ಬೆನ್ನಲ್ಲೇ ಚಾಂದಿನಿ ಪತಿ ನಾಗೇಶ್ ಹೇಳಿಕೆ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಹಿಡಿದು, ಎಳೆದಾಡಿ, ಮೆಟ್ಟಿಲಿನಿಂದ ತಳ್ಳಿದ್ರು- ಪುರಸಭೆ ಸದಸ್ಯೆ ಕಣ್ಣೀರು

ಪ್ರಕರಣವನ್ನು ರಾಜಕೀಯ ಲಾಭ ಪಡೆಯಲು ಮುಂದಾಗಿದ್ದ ಕಾಂಗ್ರೆಸ್ ಡಿಸೆಂಬರ್ 5 ರಂದು ಬೃಹತ್ ಪ್ರತಿಭಟನೆ ಗೆ ಮುಂದಾಗಿತ್ತು. ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಲು ಕೈ ಪಕ್ಷ ತಂತ್ರ ಹೆಣೆದಿತ್ತು. ಇದೀಗ ಪುರಸಭೆ ಸದಸ್ಯೆ ಪತಿಯೇ ಗರ್ಭಪಾತಕ್ಕೂ ಘಟನೆಗೂ ಸಂಬಂಧ ಇಲ್ಲ ಎಂದಿದ್ದಾರೆ. ಆದರೆ ಈ ಹಿಂದೆ ನೂಕಾಟ ತಳ್ಳಾಟ ಹಾಗೂ ಪತ್ನಿಗೆ ಗರ್ಭಪಾತವಾಗಿರುವ ಬಗ್ಗೆ ಕಾನೂನು ಹೋರಾಟ ಮಾಡ್ತೇನೆ ಅಂದಿದ್ರು. ಸದ್ಯ ಇದೀಗ ನಾಗೇಶ್ ನಾಯ್ಕ್ ಹೇಳಿಕೆ ರಾಜಕಿಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ. ಇದನ್ನೂ ಓದಿ: ನಾನು ಮಹಿಳೆಯ ರಕ್ಷಣೆಗೆ ಮುಂದಾಗಿದ್ದೆ- ಅಸಭ್ಯ ವರ್ತನೆಗೆ ಸಿದ್ದು ಸವದಿ ಸಮರ್ಥನೆ

Share This Article
Leave a Comment

Leave a Reply

Your email address will not be published. Required fields are marked *