Connect with us

Bagalkot

ಹಿಡಿದು, ಎಳೆದಾಡಿ, ಮೆಟ್ಟಿಲಿನಿಂದ ತಳ್ಳಿದ್ರು- ಪುರಸಭೆ ಸದಸ್ಯೆ ಕಣ್ಣೀರು

Published

on

– ಮೋದಿ ಭೇಟಿ ಬಚಾವೋ ಅಂತಾರೇ, ಶಾಸಕರ ವರ್ತನೆ ಸರಿನಾ?
– ದಲಿತ ಹೆಣ್ಣು ಮಗಳಿಗೆ ಹೀಗಾದ್ರೆ ಮುಂದೆ ಗತಿ ಏನು?

ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರ ಪುರಸಭೆ ಸದಸ್ಯೆರನ್ನು ಎಳೆದಾಡಿ, ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ಸದಸ್ಯೆ ಚಾಂದಿನಿ ನಾಯ್ಕ್ ಕಣ್ಣೀರಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ ಘಟನೆ ಕುರಿತು ಮಾಹಿತಿ ನೀಡಿದ ಸದಸ್ಯೆ ಚಾಂದಿನಿ ನಾಯ್ಕ್, ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ತೆರಳಿದ್ದೆವು. ಈ ವೇಳೆ ನಮಗೆ ಮತ ಚಲಾಯಿಸಲು ಅವಕಾಶ ನೀಡದೆ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಘಟನೆ ನಡೆಯುವ ಮುನ್ನವೇ ನಮಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದೆವು. ಆದರೆ ಅವರು ಯಾವುದೇ ರಕ್ಷಣೆ ನೀಡಲು ಮುಂದಾಗಲಿಲ್ಲ. ಶಾಸಕರು ಹಾಗೂ ಅವರ ಬೆಂಬಲಿಗರು ನಮ್ಮನ್ನು ಹಿಡಿದು ಎಳೆದಾಡಿ, ಮೆಟ್ಟಿಲು ಮೇಲಿನಿಂದ ತಳ್ಳಿ ತುಳಿದಾಡಿದ್ದರು. ಘಟನೆಯಿಂದ ಮಾಸಿಕವಾಗಿ, ದೈಹಿಕವಾಗಿ ನೋವಾಗಿದ್ದು, ನಮ್ಮ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನ್ಯಾಯ ಬೇಕಿದೆ ಎಂದರು.

ಪ್ರಧಾನಿ ಮೋದಿ ಅವರು ಮೋದಿ ಭೇಟಿ ಬಚಾವೋ ಎಂದು ಹೇಳುತ್ತಾರೆ. ಆದರೆ ಈ ರೀತಿ ಶಾಸಕರು ನಡೆದುಕೊಳ್ಳುತ್ತಾರಾ? ಚುನಾವಣೆಯ ಸಂದರ್ಭದಲ್ಲಿ ನಮ್ಮನ್ನು ಯಾರು ಕಿಡ್ನಾಪ್ ಮಾಡಿಲ್ಲ. ದಲಿತ ಸದಸ್ಯೆಯಾಗಿ ನನಗೆ ಅನ್ಯಾಯವಾಗಿತ್ತು. ಆದ್ದರಿಂದಲೇ ನಾನು ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅವರಿಗೆ ಬೆಂಬಲ ನೀಡಲು ಮುಂದಾಗಿದ್ದೆ. ಆದರೆ ನಮಗೆ ಮತ ಚಲಾಯಿಸಲು ಅವಕಾಶ ನೀಡದೆ ಚುನಾವಣೆ ನಡೆಸಿದ್ದಾರೆ. ಜನರು ನಮ್ಮನ್ನು ಆಯ್ಕೆ ಮಾಡಿದ್ದರು ನಮಗೆ ಯಾವುದೇ ಅವಕಾಶ ಲಭಿಸಿಲ್ಲ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ನಾನು ಮಹಿಳೆಯ ರಕ್ಷಣೆಗೆ ಮುಂದಾಗಿದ್ದೆ- ಅಸಭ್ಯ ವರ್ತನೆಗೆ ಸಿದ್ದು ಸವದಿ ಸಮರ್ಥನೆ

ಸವದಿ ಅವರೇ ನಮ್ಮ ಮೇಲೆ ಜನರನ್ನು ನುಗ್ಗಿಸಿದ್ದರು. ಇದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಯಾರು ದೌರ್ಜನ್ಯ ನಡೆಸಿದ್ದಾರೆ ಎಂಬುವುದು ಸ್ಪಷ್ಟವಾಗಿ ಕಾಣಿಸುತ್ತದೆ. ನಮ್ಮ ಮೇಲೆ ಇಷ್ಟು ನಡೆದರು ಪೊಲೀಸರು ರಕ್ಷಣೆ ನೀಡಲು ಮುಂದಾಗದೇ ಕೈಕಟ್ಟಿ ನಿಂತಿದ್ದರು. ಈಗ ನಮ್ಮ ಮೇಲಿನ ದೌರ್ಜನ್ಯ ನಡೆಸಿದವರ ವಿರುದ್ಧ ಪೊಲೀಸ್ ದೂರು ದಾಖಲಿಸುತ್ತೇವೆ. ಅಲ್ಲದೇ ಮರು ಚುನಾವಣೆ ಮಾಡಲು ಒತ್ತಾಯ ಮಾಡುತ್ತೇವೆ. ಪುರಸಭೆಯ ಮಹಿಳಾ ಸದಸ್ಯಯೇ ಮೇಲೆಯೇ ಈ ರೀತಿ ನಡೆದರೆ ಸಾಮಾನ್ಯ ಮಹಿಳೆಯ ಸ್ಥಿತಿ ಏನು ಎಂದು ಪ್ರಶ್ನೆ ಮಾಡಿದರು.

ನಡೆದಿದ್ದೇನು?
ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಸಂದರ್ಭದಲ್ಲಿ ಮಹಿಳೆಯೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಚುನಾವಣೆಯಲ್ಲಿ ಮತ ಚಲಾಯಿಸಲು ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ, ಚಾಂದಿನಿ ನಾಯ್ಕ್ ಸೇರಿದಂತೆ ಮೂವರು ಮಹಿಳಾ ಸದಸ್ಯೆಯರು ತೆರಳುತ್ತಿದ್ದರು. ಈ ವೇಳೆ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ತೆರಳುತ್ತಿದ್ದಾರೆ ಎಂಬ ಮಾಹಿತಿ ಪಡೆದ ಶಾಸಕರು, ಸದಸ್ಯೆಯನ್ನು ಎಳೆದಾಡಿ ಗೂಂಡಾ ವರ್ತನೆ ತೋರಿದ್ದರು. ಶಾಸಕರು ದೌರ್ಜನ್ಯ ನಡೆಸಿರುವ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯನ್ನು ಎಳೆದಾಡಿ ಮೈ, ಕೈ ಮುಟ್ಟಿ ಅಮಾನವೀವಾಗಿ ವರ್ತನೆ ಮಾಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿತ್ತು. ಪೊಲೀಸರ ಸಮ್ಮುಖದಲ್ಲಿಯೇ ಇಂತಹ ಅಮಾನವೀಯ ಘಟನೆ ನಡೆದಿದ್ದು, ಬಿಜೆಪಿ ಸದಸ್ಯರ ಸಂಖ್ಯಾಬಲ ಹೆಚ್ಚಿಸಲು ಮಹಿಳಾ ಪುರಸಭೆ ಸದಸ್ಯೆಯೊಂದಿಗೆ ಅಮಾನವೀಯತೆಯಿಂದ ವರ್ತನೆ ಮಾಡಲಾಗಿತ್ತು. ಶಾಸಕರ ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Click to comment

Leave a Reply

Your email address will not be published. Required fields are marked *