ವಿಜಯಪುರದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಲು ರೆಡಿಯಾಗಿದೆ ಓಬವ್ವ ಪಡೆ

Public TV
2 Min Read

ವಿಜಯಪುರ: ಜಿಲ್ಲೆಯಲ್ಲಿ ಹೆಣ್ಮಕ್ಕಳ ರಕ್ಷಣೆಗೆ ಪ್ರಾತಿನಿಧ್ಯ ಕೊಡಲಾಗುತ್ತಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಓಬವ್ವ ಪಡೆ ರೋಡ್ ರೋಮಿಯೋಗಳಿಗೆ ಸಿಂಹಸ್ವಪ್ನವಾಗಲಿದೆ. ವಿಜಯಪುರದ ಹೆಣ್ಣು ಮಕ್ಕಳು ನಿಶ್ಚಿಂತೆಯಿಂದ ಯಾವ ಭಯವಿಲ್ಲದೆ ಓಡಾಡಬಹುದಾಗಿದೆ.

ವೀರ ಒನಕೆ ಓಬವ್ವ ತನ್ನ ರಾಜ್ಯದ ಮೇಲೆ ಕಣ್ಣು ಹಾಕಿದ್ದ ಹೈದರಾಲಿ ಶತ್ರುಪಡೆಯನ್ನು ಬರಿ ಒನಕೆಯಿಂದಲೇ ಮಣ್ಣು ಮುಕ್ಕಿಸಿದ್ದಳು. ಈಗ ಈ ವೀರ ವನಿತೆ ಓಬವ್ವ ಹೆಸರಿನಲ್ಲಿ ಪಡೆಯೊಂದು ರೆಡಿಯಾಗಿದೆ. ಅದು ಹೆಣ್ಮಕ್ಕಳಿಗೆ ಕಾಟ ಕೊಡುವ ರೋಡ್ ರೋಮಿಯೋಗಳಿಗಾಗಿ. ಇಲ್ಲಿಯವರೆಗೂ ಇಂತಹ ಯಾವ ಪಡೆಯೂ ವಿಜಯಪುರದಲ್ಲಿರಲಿಲ್ಲ, ಹೀಗಾಗಿ ಹೆಣ್ಣು ಮಕ್ಕಳ ರಕ್ಷಣೆಗಾಗಿಯೆ ವಿಶೇಷವಾಗಿ ಓಬವ್ವ ಪಡೆ ರೆಡಿಯಾಗುತ್ತಿದೆ.

ವಿಜಯಪುರ ಜಿಲ್ಲಾ ಪೊಲೀಸ್ ಇಂಥದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 15 ಜನ ಮಹಿಳಾ ಪೊಲೀಸ್ ಪೇದೆಗಳನ್ನೊಳಗೊಂಡ ಪಡೆ ಇದಾಗಿದೆ. ಇವರಿಗೆ ಜಬರ್ದಸ್ತ್ ತರಬೇತಿ ಕೊಡಲಾಗುತ್ತಿದೆ. ಬೈಕ್ ರೈಡಿಂಗ್, ಕರಾಟೆ, ಸೇರಿದಂತೆ ಇತರೆ ತರಬೇತಿ ನೀಡಲಾಗುತ್ತಿದೆ. ವಿಜಯಪುರ ಎಸ್‍ಪಿ ಪ್ರಕಾಶ ನಿಕ್ಕಂ ನೇತೃತ್ವದಲ್ಲಿ ಮಹಿಳಾ ಪೇದೆಗಳಿಗೆ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಓಬವ್ವ ಪಡೆ ಬೈಕ್ ಮೇಲೆ ಗಸ್ತು ತಿರುಗುತ್ತಲೇ ಇರುತ್ತದೆ. ಶಾಲಾ- ಕಾಲೇಜುಗಳ ಸುತ್ತಮುತ್ತ, ಮಾರುಕಟ್ಟೆಗಳಲ್ಲಿ ಚಿತ್ರಮಂದಿರದ ಹತ್ತಿರದ ಸ್ಥಳಗಳು ಹೀಗೆ ಎಲ್ಲಡೆ ಗಸ್ತು ತಿರುಗುತ್ತಲೆ ಇರುತ್ತಾರೆ. ಹೆಣ್ಣು ಮಕ್ಕಳಿಗೆ ಕಾಟ ಕೊಡುವ ರೋಡ್ ರೋಮಿಯೋಗಳಿಗೆ ಓಬವ್ವ ಪಡೆ ಒದ್ದು ಬುದ್ಧಿ ಕಲಿಸಲಿದೆ. ಅಲ್ಲದೆ ಹೆಣ್ಣುಮಕ್ಕಳ ತಂಟೆಗೆ ಬರುವವರಿಗೆ ತಕ್ಕ ಶಿಕ್ಷೆಯೂ ನಿಶ್ಚಿತ.

ಈ ಓಬವ್ವ ಪಡೆ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ತರಬೇತಿ ಕೊಡುವ ಕೆಲಸವನ್ನು ಮಾಡಲಿದೆ. ಸ್ವಯಂರಕ್ಷಣೆ ಮಾಡಿಕೊಳ್ಳುವುದು ಹೇಗೆ, ಪುಂಡ ಪೋಕರಿಗಳಿಗೆ ಬುದ್ಧಿ ಕಲಿಸುವುದು ಹೇಗೆ ಎಂಬುದನ್ನು ತರಬೇತಿ ನೀಡಲಿದೆ. ಸೂಕ್ತ ತರಬೇತಿ ಪಡೆದು ಆದಷ್ಟು ಬೇಗ ಓಬವ್ವ ಪಡೆ ಫೀಲ್ಡ್ ಗೆ ಇಳಿಯಲಿದೆ. ಓಬವ್ವ ಪಡೆ ರೋಡ್ ರೋಮಿಯೋ, ಪುಡಾರಿಗಳು, ಕಾಮುಕರ ಹೆಡೆಮುರಿ ಕಟ್ಟಲಿದೆ.

ಓಬವ್ವ ಪಡೆಗೆ ಜಿಲ್ಲೆಯಾದ್ಯಂತ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಾಲಾ ಕಾಲೇಜುಗಳ ಆವರಣಗಳ ಮುಂದೆ ಮಹಿಳಾ ವಸತಿ ನಿಲಯಗಳ ಮುಂದೆ ಪಡ್ಡೆ ಹುಡುಗರ ಕಾಟ ಹೇಳತೀರದು. ಹೆಣ್ಣು ಮಕ್ಕಳನ್ನು ಚುಡಾಯಿಸುವವರಿಗೆ ಓಬವ್ವ ಪಡೆ ದೊಡ್ಡ ಭರವಸೆಯ ರಕ್ಷಣಾ ಕವಚವಾಗಿ ಮೂಡಿ ಬರಲೆಂದು ವಿಜಯಪುರದ ಜನ ಆಶಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *