ಬರದನಾಡಿನಲ್ಲಿ ಗೋಡಂಬಿ, ಮಾವು ಬೆಳೆದು ಸೈ ಎನಿಸಿಕೊಂಡ ಪದವೀಧರ ರೈತ

Public TV
2 Min Read

ಗದಗ: ಬಂಜರು ಭೂಮಿ, ಅದರಲ್ಲೂ ಬರದ ಬಿಸಿಲುನಾಡಿನಲ್ಲಿ ಗೋಡಂಬಿ ಬೆಳೆ ಬೆಳೆಯುವುದು ತುಂಬಾನೆ ಕಷ್ಟ. ಆದರೆ ಛಲದಂಕ ಮಲ್ಲನಂತೆ ಜಿಲ್ಲೆಯ ಪದವೀಧರ ರೈತರೊಬ್ಬರು ಬರದನಾಡಲ್ಲೂ ಗಿಣಿಯಂತೆ ಗೋಡಂಬಿ, ಮಾಗಿಯ ಮಾವು ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಜಿಲ್ಲೆಯ ಹುಲಕೋಟಿ ಗ್ರಾಮದ ರೈತ ಸುಭಾಸಗೌಡ ಆಧಪ್ಪಗೌಡ್ರ ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ ಎಂಬ ಮಾತು ಅರೆತು ಕೃಷಿನಲ್ಲಿ ಸಾಧನೆ ಮಾಡುತ್ತಿದ್ದಾರೆ. ಗದಗ ಜಿಲ್ಲೆ ಬರದನಾಡಲ್ಲಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಸಹಾಯದೊಂದಿಗೆ ಹನಿ ನೀರಾವರಿ ಮೂಲಕ ಸುಭಾಸಗೌಡ ಅವರು ಭರ್ಜರಿ ಗೋಡಂಬಿ ಬೆಳೆ ಜೊತೆಗೆ ಹಚ್ಚ ಹಸಿರುನಿಂದ ಕಂಗೊಳಿಸುವ ಮಾಗಿಯ ಮಾವು ಬೆಳೆದಿದ್ದಾರೆ.

ರೈತ ಸುಭಾಸಗೌಡ ಅವರು ಬಿ.ಕಾಂ ಪದವೀಧರರಾಗಿದ್ದರೂ ಕೃಷಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ. ಸುಭಾಸಗೌಡ ಅವರು ಒಟ್ಟು 27 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಅದರಲ್ಲಿ 19 ಎಕರೆ ಗೋಡಂಬಿ, 8 ಎಕರೆ ಮಾಗಿಯ ಮಾವು ಬೆಳೆದಿದ್ದಾರೆ.

ಸುಭಾಸಗೌಡ ಅವರು ಮೊದಮೊದಲು ವಾಣಿಜ್ಯ ಹಾಗೂ ಮಿಶ್ರ ಬೆಳೆ ಬೆಳೆದು ಸಮಯಕ್ಕೆ ಸರಿಯಾಗಿ ಮಳೆಯಾಗದೇ ಬರಗಾಲದಿಂದ ಸಾಲಕ್ಕೆ ತುತ್ತಾಗಿದ್ದರು. ಅತಿವೃಷ್ಠಿ, ಅನಾವೃಷ್ಠಿ, ಬರಗಾಲದಿಂದ ಬೆಳೆ ಬಾರದೆ ಕೈ ಸುಟ್ಟುಕೊಳ್ಳುತ್ತಿದ್ದರು. ಈಗ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ಅಧಿಕ ಲಾಭದಿಂದ ಹಸನಾದ ಬದುಕು ಸಾಗಿಸುತ್ತಿದ್ದಾರೆ. ಪರಿಶ್ರಮದಿಂದ ಬೆಳೆದ ಗೋಡಂಬಿ ಬೆಳೆ ಉತ್ತರ ಕರ್ನಾಟಕದ ರೈತರಿಗೆ ಈಗ ಮಾದರಿಯಾಗಿದೆ.

ಹುಲಕೋಟಿ ಗ್ರಾಮದ ಸುಭಾಸಗೌಡ ಅವರು ಕಳೆದ 4 ವರ್ಷಗಳಿಂದ ಗೋಡಂಬಿ ಹಾಗೂ 11 ವರ್ಷಗಳಿಂದ ಮಾವು ಬೆಳೆಯುತ್ತಿದ್ದಾರೆ. ವಿ.ಎಲ್ ಫೋರ್, ವಂಗೋರ್ಲಾ, ಸಿಲ್ವರ್-ಗೋಲ್ಡ್ ಎಂಬ ಹೊಸ ತಳಿಯ ಗೋಡಂಬಿ ಬೆಳೆಯುತ್ತಿದ್ದಾರೆ. ಕೃಷಿ ಇಲಾಖೆಯಿಂದ 1 ಹೆಕ್ಟೇರ್‍ಗೆ 18 ಸಾವಿರ ರೂ.ದಂತೆ 2 ಹೆಕ್ಟೇರ್‍ಗೆ 36 ಸಾವಿರ ರೂ. ಸಹಾಯ ಧನದಿಂದ ಈ ಬೆಳ ಬೆಳೆಯಲಾರಂಭಿಸಿದ್ದಾರೆ. 19 ಎಕರೆಯಲ್ಲಿ ಒಟ್ಟು 3,600 ಗೋಡಂಬಿ, 8 ಎಕರೆಯಲ್ಲಿ ನಾಲ್ಕು ನೂರಕ್ಕೂ ಅಧಿಕ ಮಾವಿನ ಸಸಿಗಳ ನಾಟಿಮಾಡಿ ಈಗ ಫಸಲು ಪಡೆಯುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಲ್ಲಿ ಸುಮಾರು 20 ಲಕ್ಷ ರೂಪಾಯಿ ಖರ್ಚಾಗಿದೆ. ಈಗ ಎಕರೆಗೆ 1 ಲಕ್ಷ ರೂಪಾಯಿ ನಿವ್ವಳ ಲಾಭ ಬರುವ ನಿರೀಕ್ಷೆಯಲ್ಲಿದ್ದಾರೆ.

ಬಿಸುಲು ನಾಡು, ಬಂಜರು ಭೂಮಿಯಲ್ಲಿ ಗೊಡಂಬಿ ಬೆಳೆಯುವುದು ತುಂಬಾನೆ ವಿರಳ. ಈಗ ಈತ ಬೆಳೆದಿರುವ ಬೆಳೆನೋಡಿ ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳಿಗೂ ಹುಬ್ಬೆರುವಂತಾಗಿದೆ. ಗದಗ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರದೀಪ್ ಎಲ್.ಕೆ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿ ಜಮೀನಿಗೆ ಭೇಟಿ ನೀಡಿ ಬೆಳೆ ವಿಕ್ಷಣೆ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *