ವಿಶ್ವಕಪ್ ಫೈನಲ್ ಬಳಿಕ ಕಿವೀಸ್, ಇಂಗ್ಲೆಂಡ್ ನಡ್ವೆ ಮತ್ತೊಂದು ಸೂಪರ್ ಓವರ್

Public TV
1 Min Read

ಆಕ್ಲೆಂಡ್: 2019 ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ಟೈ ಆಗುವ ಮೂಲಕ ಸೂಪರ್ ಓವರ್ ಗೆ ದಾರಿ ಮಾಡಿಕೊಟ್ಟಿತ್ತು. ಬಳಿಕ ನಡೆದ ಸೂಪರ್ ಓವರ್ ಕೂಡ ಟೈ ಆದ ಪರಿಣಾಮ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ತಂಡ ಕಪ್ ಗೆದ್ದಿತ್ತು. ವಿಶ್ವಕಪ್ ಬಳಿಕ ಮತ್ತೊಮ್ಮೆ ಎದುರಾದ ಎರಡು ತಂಡಗಳು ಮತ್ತೊಂದು ಸೂಪರ್ ಓವರ್ ಹೋರಾಟಕ್ಕೆ ಸಾಕ್ಷಿಯಾಗಿದೆ.

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ 5 ಪಂದ್ಯಗಳ ಟಿ20 ಸರಣಿ ಇಂದು ಅಂತ್ಯವಾಗಿದೆ. ಸರಣಿಯಲ್ಲಿ ಮೊದಲ 4 ಪಂದ್ಯಗಳಲ್ಲಿ ಇತ್ತಂಡಗಳು ತಲಾ 2 ಗೆಲುವು ಪಡೆದು ಸಮಬಲ ಸಾಧಿಸಿದ್ದವು. ಪರಿಣಾಮ ಭಾನುವಾರ ನಡೆದ ಪಂದ್ಯ ಸರಣಿಯ ಫೈನಲ್ ಆಗಿ ಮಾರ್ಪಾಟ್ಟಿತ್ತು.

ಪಂದ್ಯದ ಆರಂಭಕ್ಕೂ ಮೊದಲೇ ಮಳೆ ಅಡ್ಡಿ ಪಡಿಸಿದ ಪರಿಣಾಮ 11 ಓವರ್ ಗಳಿಗೆ ಪಂದ್ಯ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ ತಂಡ 11 ಓವರ್ ಗಳಲ್ಲಿ 5 ವಿಕೆಟ್ ಕಳೆದು 146 ರನ್ ಗಳಿಸಿತ್ತು. ಸವಾಲಿನ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್‍ಗಳ ಸಮಬಲದ ಹೋರಾಟದ ಪರಿಣಾಮ ಪಂದ್ಯ ಟೈ ಆಯ್ತು. ಗೆಲುವಿಗಾಗಿ ಅಂತಿಮ ಓವರಿನಲ್ಲಿ ಇಂಗ್ಲೆಂಡ್‍ಗೆ 16 ರನ್ ಅಗತ್ಯವಿತ್ತು. ಅಂತಿಮ ಓವರ್ ಬೌಲ್ ಮಾಡಿದ ನೀಶಾಮ್, ಟಾಮ್ ಕರ್ರನ್ ವಿಕೆಟ್ ಪಡೆದರು. ಆದರೆ ಅಂತಿಮ 3 ಎಸೆತಗಳಲ್ಲಿ 12 ರನ್ ಗಳಿಸಿದ ಜೋರ್ಡನ್ ಪಂದ್ಯ ಟೈ ಆಗಲು ಕಾರಣರಾದರು.

ಫಲಿತಾಂಶಕ್ಕಾಗಿ ನಡೆದ ಸೂಪರ್ ಓವರ್ ಆಟದಲ್ಲಿ ಇಂಗ್ಲೆಂಡ್ 17 ರನ್ ಗಳಿಸಿದರೆ, ಕಿವೀಸ್ 8 ರನ್ ಗಳಿಸಿ ಸೋಲುಂಡಿತು. ಪಂದ್ಯದ 7 ರನ್ ಗೆಲುವು ಪಡೆದ ಇಂಗ್ಲೆಂಡ್ ತಂಡ 3-2ರ ಅಂತರದಲ್ಲಿ ಟಿ20 ಸರಣಿಯನ್ನು ಗೆದ್ದು ಸಂಭ್ರಮಿಸಿತು.

Share This Article
Leave a Comment

Leave a Reply

Your email address will not be published. Required fields are marked *