ಸುಧಾಕರ್‌ಗೆ ಮಣೆ- ಬಿಜೆಪಿ ಕಾರ್ಯಕರ್ತರ ಅಸಮಾಧಾನ, ನಳಿನ್‌ಗೆ ದೂರು

Public TV
2 Min Read

ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಸುಧಾಕರ್ ಬೆಂಬಲಿಗರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಣೆ ಹಾಕುತ್ತಿದ್ದು, ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಂಜುನಾಥ್ ಕಾರ್ಯಕರ್ತರೊಂದಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದಲ್ಲಿ ನಳಿನ್ ಕುಮಾರ್ ಅವರನ್ನು ಮಂಜುನಾಥ್ ಭೇಟಿಯಾಗಿದ್ದಾರೆ. ಅನರ್ಹ ಶಾಸಕ ಸುಧಾಕರ್ ಬೆಂಬಲಿಗರಿಗೆ ಮುಖ್ಯಮಂತ್ರಿಗಳು ಮಣೆ ಹಾಕುತ್ತಿದ್ದಾರೆ. ಈ ಮೂಲಕ ಬಿಜೆಪಿಯ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಸುಧಾಕರ್ ಬೆಂಬಲಿಗರಿಗೆ ಹೆಚ್ಚು ಅಧಿಕಾರ ನೀಡುತ್ತಿದ್ದು, ಇದರಿಂದಾಗಿ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಅಧಿಕಾರ ಸಿಗದಂತಾಗಿದೆ ಎಂದು ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ.

ಮುಖ್ಯಮಂತ್ರಿ ಹಾಗೂ ಸರ್ಕಾರದ ನಡೆ ವಿರುದ್ಧ ಕಟೀಲ್‌ಗೆ ದೂರು ನೀಡಿರುವ ಮಂಜುನಾಥ್, ಈ ಕುರಿತು ಚಿತ್ತ ಹರಿಸುವಂತೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನಂತರ ಮಂಜುನಾಥ್ ನೇತೃತ್ವದ ಬಿಜೆಪಿ ನಿಯೋಗ ಕಟೀಲ್ ಅವರನ್ನು ಭೇಟಿ ಮಾಡಿತ್ತು. ಈ ಮೂಲಕ ತಮ್ಮ ಅಹವಾಲನ್ನು ನಾಯಕರಿಗೆ ಸಲ್ಲಿಸಿದ್ದಾರೆ.

ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಕಂದಾಯ ಸಚಿವ ಆರ್.ಆಶೋಕ್ ಕಾರಿನಲ್ಲೇ ಅನರ್ಹ ಶಾಸಕ ಸುಧಾಕರ್ ಸುತ್ತಾಡಿದ್ದಾರೆ. ವೈದ್ಯಕೀಯ ಕಾಲೇಜು ಜಾಗ ವೀಕ್ಷಣೆಗೆ ಆಗಮಿಸಿದ್ದ ಆರ್.ಆಶೋಕ್ ಜೊತೆಯಲ್ಲಿ ಸುಧಾಕರ್ ಸಹ ತೆರಳಿದ್ದಾರೆ. ಇಬ್ಬರೂ ಒಟ್ಟಿಗೆ ಕಾಲೇಜು ಜಾಗವನ್ನು ವೀಕ್ಷಣೆ ಮಾಡಿದರು. ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಬಳಿ ವೈದ್ಯಕೀಯ ಕಾಲೇಜಿಗೆ ಜಾಗ ಗುರುತಿಸಲಾಗಿದೆ.

ಈ ವೇಳೆ ಮಾತನಾಡಿದ ಸಚಿವ ಆರ್.ಅಶೋಕ್, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿಗೆ ಜಾಗ ಮಂಜೂರು ಮಾಡಲಾಗಿದೆ. ಆರೂರು ಗ್ರಾಮದ ಸರ್ವೆ ನಂಬರ್ 201 ಹಾಗೂ 202 ರಲ್ಲಿ 60 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಕಾನೂನು ಪ್ರಕಾರ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ನೀಡಲಾಗಿದೆ. ಯಾವುದೇ ಅಡ್ಡದಾರಿ ಶಾರ್ಟ್ ಕಟ್ ಇಲ್ಲ. ಸುಧಾಕರ್ ಈ ಬಗ್ಗೆ ಹೋರಾಟ ಮಾಡಿದ್ದಾರೆ. ಜಿಲ್ಲಾ ಕೇಂದ್ರಗಳಿಗೆ ವೈದ್ಯಕೀಯ ಕಾಲೇಜು ನೀಡುವುದನ್ನು ಮೊದಲು ಪೂರ್ಣಗೊಳಿಸಬೇಕು ಎಂದರು.

ತಾಲೂಕು ಮಟ್ಟಕ್ಕೆ ಮೆಡಿಕಲ್ ಕಾಲೇಜು ನೀಡುವುದು ಇನ್ನು ಬಂದಿಲ್ಲ. ಜಿಲ್ಲಾ ಕೇಂದ್ರಕ್ಕೆ ಮೆಡಿಕಲ್ ಕಾಲೇಜು ನೀಡಲು ಮಾತ್ರ ಶಕ್ತಿಯಿದೆ. ತಾಲೂಕು ಕೇಂದ್ರಕ್ಕೆ ಮೆಡಿಕಲ್ ಕಾಲೇಜು ಕೊಡುವ ಶಕ್ತಿ ಇಲ್ಲ. ಕಾನೂನು ಪ್ರಕಾರ ನೀಡಿದ್ದೇವೆ ಇದರಲ್ಲಿ ಯಾವುದೇ ದ್ವೇಷವಿಲ್ಲ. ಅಡ್ಡ ದಾರಿಯಲ್ಲಿ ಮಾಡುವ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಆಗಿದ್ದರೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ಆದರೆ ಜಿಲ್ಲಾ ಕೇಂದ್ರ ಬಿಟ್ಟು ತಾಲೂಕು ಕೇಂದ್ರಕ್ಕೆ ಕಾಲೇಜು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *