ಮತ್ತೆ ಪ್ರಧಾನಿ ಮೋದಿ ಕೈಹಿಡಿದ ಕಚ್ಚಾ ತೈಲ

Public TV
2 Min Read

ನವದೆಹಲಿ: ಕಚ್ಚಾ ತೈಲ ಮತ್ತೆ ಪ್ರಧಾನಿ ಮೋದಿ ಅವರ ಕೈ ಹಿಡಿದಿದೆ. ಕುಸಿಯುತ್ತಿರುವ ದೇಶದ ಆರ್ಥಿಕತೆ ಮೇಲಕ್ಕೆ ಎತ್ತಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ‘ಮಿನಿ ಬಜೆಟ್’ ಮಂಡಿಸುತ್ತಿದ್ದಂತೆ ಇತ್ತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತಷ್ಟು ಇಳಿಕೆಯಾಗಿದೆ.

ಚೀನಾ ಸರ್ಕಾರ ಅಮೆರಿಕದ ಉತ್ಪನ್ನಗಳ ಮೇಲೆ ಮತ್ತಷ್ಟು ಸುಂಕ ವಿಧಿಸಿದ ಬೆನ್ನಲ್ಲೇ ಅಮೆರಿಕ ಕಚ್ಚಾ ತೈಲ ದರ ಶೇ.3 ರಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್ ದರ 53.58 ಡಾಲರ್ (ಅಂದಾಜು 3,800 ರೂ.) ಇಳಿಕೆಯಾಗಿದೆ. ಭಾರತಕ್ಕೆ ಹತ್ತಿರವಾಗಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.2 ರಷ್ಟು ಇಳಿಕೆಯಾಗಿದ್ದು ಪ್ರತಿ ಬ್ಯಾರೆಲ್ ತೈಲದ ದರ 58.75 ಡಾಲರ್(4,200 ರೂ.) ಇಳಿಕೆಯಾಗಿದೆ.

ಚೀನಾ, ಅಮೆರಿಕದ ನಂತರ ವಿಶ್ವದಲ್ಲೇ ಅತಿ ಹೆಚ್ಚು ತೈಲವನ್ನು ಆಮದು ಮಾಡುತ್ತಿರುವ ದೇಶ ಭಾರತವಾಗಿದ್ದು, ದೇಶದ ಆರ್ಥಿಕತೆ ಮೇಲೆ ತೈಲ ದರ ಭಾರೀ ಪ್ರಭಾವ ಬೀರುತ್ತದೆ.

ಇಡೀ ವಿಶ್ವದಲ್ಲಿ ಈಗ ಉತ್ಪಾದನೆ ಕಡಿಮೆಯುತ್ತಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ನಿರಂತರವಾಗಿ ಇಳಿಕೆಯಾಗುತ್ತಿದೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಮಂದಗತಿಯಲ್ಲಿರುವುದರಿಂದ ತೈಲದ ಬೇಡಿಕೆ ಇಳಿದಿದ್ದು, ಬೆನ್ನಿಗೇ ದರವೂ ಇಳಿಕೆಯಾಗುತ್ತಿದೆ.ಎಷ್ಟು ಇಳಿಕೆಯಾಗಿದೆ ಎಂದರೆ 2018ರ ಆಗಸ್ಟ್ ನಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 72 ಡಾಲರ್ ಇತ್ತು. ಈಗ ಒಂದೇ ವರ್ಷದಲ್ಲಿ 14 ಡಾಲರ್ ಇಳಿಕೆಯಾಗಿತ್ತು, ಚೀನಾ ಅಮೆರಿಕ ವಾಣಿಜ್ಯ ಸಮರ ಮತ್ತಷ್ಟು ಹೆಚ್ಚಾದರೆ ಮತ್ತೆ ಬೆಲೆ ಇಳಿಕೆಯಾಗಲಿದೆ.

ಮೋದಿ 2014ರಲ್ಲಿ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 108 ಡಾಲರ್(ಅಂದಾಜು 7,750 ರೂ.) ಇತ್ತು. ಮೋದಿ ಸರ್ಕಾರ ಮೂರನೇ ವರ್ಷದ ಅವಧಿಯಲ್ಲಿ 48 ಡಾಲರ್(3,400 ರೂ.) ಬೆಲೆಗೆ ಇಳಿಕೆಯಾಗಿತ್ತು.

ತೈಲ ಬೆಲೆ ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ ಬಜೆಟ್ ನಲ್ಲಿ 2 ರೂ. ಏರಿಕೆ ಮಾಡಿತ್ತು. 2018ರ ಕರ್ನಾಟಕ ಚುನಾವಣೆಯ ಸಮಯದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 80 ಡಾಲರ್(5,700 ರೂ.)ಗೆ ಏರಿಕೆ ಆಗಿತ್ತು. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಿಂದ 2018-19ರ ಹಣಕಾಸು ವರ್ಷದಲ್ಲಿ ಸರ್ಕಾರ 2.579 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. 2013-14ರ ಅವಧಿಯಲ್ಲಿ 88,600 ಕೋಟಿ ರೂ. ಸಂಗ್ರಹಿಸಿದ್ದರೆ 2017-18ರ ಅವಧಿಯಲ್ಲಿ 2016 ಕೋಟಿ ಆದಾಯ ಸಂಗ್ರಹಿಸಿದೆ.

ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ 17.98 ರೂ. ಅಬಕಾರಿ ಸುಂಕ ಹಾಕಿದರೆ ಒಂದು ಲೀಟರ್ ಡೀಸೆಲ್ ಮೇಲೆ 13.83 ರೂ. ಇದೆ.

Share This Article
Leave a Comment

Leave a Reply

Your email address will not be published. Required fields are marked *