ನಮ್ಮದು ಒನ್ ಮಿಷನ್, ಒನ್ ಡೈರೆಕ್ಷನ್ ಮಂತ್ರ: ಪ್ರಧಾನಿ ಮೋದಿ

Public TV
3 Min Read

– ನೀರಿನ ಬಗ್ಗೆ ಮಾತನಾಡುತ್ತಿದ್ದಂತೆ ನೀರಡಿಕೆ ಆಯಿತು
– ದೇಶದ 130 ಕೋಟಿ ಜನರಿಗೂ ದೇಶದ ಅಭಿವೃದ್ಧಿ ಬೇಕಾಗಿದೆ

ನವದೆಹಲಿ: ದೇಶದ ಅಭಿವೃದ್ಧಿ ದೃಷ್ಟಿಯಿಂದ ನಾವು ಒನ್ ಮಿಷನ್, ಒನ್ ಡೈರೆಕ್ಷನ್ ಮಂತ್ರವನ್ನು ಅನುಸರಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಕಳೆದ ಎರಡ್ಮೂರು ತಿಂಗಳುಗಳಿಂದ ಸಾಕಷ್ಟು ಕಾರ್ಯಗಳನ್ನು ಮಾಡಿದ್ದೇವೆ. ಜನರ ಆಸೆ ಆಕಾಂಕ್ಷೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಎಲ್ಲವನ್ನೂ ಇಲ್ಲಿ ಪರಿಗಣಿಸಲು ಸಾಧ್ಯವಾಗದ್ದರೂ ಮೂಲ ಅವಶ್ಯಕತೆಗಳನ್ನು ಪರಿಗಣಿಸಿದ್ದೇವೆ. ಜನರು ನೀಡಿದ ಬೆಂಬಲದಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು. ಇಂತಹ ಅವಕಾಶ ನೀಡಿದ ನಿಮಗೆ ನಾನು ಆಭಾರಿಯಾಗಿದ್ದೇನೆ ಎಂದು ಮತದಾರರಿಗೆ ತಿಳಿಸಿದರು.

ಚುನಾವಣೆ ವೇಳೆ ರಾಜನೀತಿಯಂತೆ ಪ್ರಣಾಳಿಕೆಯನ್ನು ಜನರ ಮುಂದೆ ಇಡಬೇಕಾಗುತ್ತದೆ. ಹೀಗಾಗಿ ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಮಿತಿಯು ದೇಶದ ಜನರ ಆಸೆ, ಆಕಾಂಕ್ಷೆಗಳನ್ನು ಗಮನದಲ್ಲಿ ಇಟ್ಟುಕೊಂಡು ಉತ್ತಮ ಪ್ರಣಾಳಿಕೆ ರೂಪಿಸಿದೆ. ದೇಶದ ಜನರ ನಿರೀಕ್ಷೆಗಳನ್ನು ಹಾಗೂ ನಾವು ಕೊಟ್ಟ ಭರವಸೆಯನ್ನು ಪ್ರಮಾಣಿಕವಾಗಿ ಈಡೇರಿಸಲು ಶ್ರಮಿಸುತ್ತೇವೆ ಎಂದು ಮೋದಿ ಹೇಳಿದರು.

ದೇಶವನ್ನು ಸಮೃದ್ಧವಾಗಿ ಬೆಳೆಸಲು, 75 ಯೋಜನೆಗಳನ್ನು ರೂಪಿಸಲಾಗುತ್ತದೆ. ದೇಶದಲ್ಲಿ ಭಾಷೆ, ಜೀವನ ಶೈಲಿ, ಶಿಕ್ಷಣ ಸೇರಿದಂತೆ ಅನೇಕ ವಿಚಾರಗಳಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವಿವಿಧತೆ ಕಂಡು ಬರುತ್ತದೆ. ಹೀಗಾಗಿ ಎಲ್ಲಾ ಭಾಗದ ಜನರ ಅಭಿವೃದ್ಧಿಗಾಗಿ ಮಲ್ಟಿ ಲೇಯರ್ ವಿಧಾನ ಅನುಸರಿಸಲಾಗುತ್ತದೆ. ಗ್ರಾಮೀಣ, ನಗರ ವಾಸಿಗಳು, ದಲಿತರು, ಅಲೆಮಾರಿಗಳು, ಆದಿವಾಸಿಗಳು, ಶೋಷಿತ ವರ್ಗ ಸೇರಿದಂತೆ ಎಲ್ಲರ ಏಳಿಗೆಗಾಗಿ ಶ್ರಮಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಮುನ್ನೆಚ್ಚರಿಕೆಯಿಂದ ನಿವಾರಣೆ ಮಾಡಲಾಗುತ್ತದೆ. ಉದಾಹರಣೆಗೆ ಗುಜರಾತ್, ರಾಜಸ್ಥಾನ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು. ಹೀಗಾಗಿ ಸುದೀರ್ಘ ಕಾಲಕ್ಕೆ ಅನುಕೂಲವಾಗುವ ಯೋಜನೆ ರೂಪಿಸಿ ಸಮಸ್ಯೆ ನಿವಾರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ವೇಳೆ ನೀರು ಕುಡಿದ ಪ್ರಧಾನಿ ಮೋದಿ ಅವರು, ನೀರಿನ ಬಗ್ಗೆ ಮಾತನಾಡುತ್ತಿದ್ದಂತೆ ನೀರಡಿಕೆ ಆಯಿತು ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಜಲಮಂತ್ರಾಲಯಗಳನ್ನು ವಿಭಾಗಗಳನ್ನಾಗಿ ಮಾಡಲಾಗುತ್ತದೆ. ನದಿ ಪ್ರದೇಶದಲ್ಲಿ ಮೀನಾಗಾರಿಕೆ ಮಾಡುವವರಿಗೆ ಈ ಬಾರಿಯ ಬಜೆಟ್‍ನಲ್ಲಿ ಅನೇಕ ಸವಲತ್ತುಗಳನ್ನು ನೀಡಿಲಾಗುತ್ತದೆ. ಅಷ್ಟೇ ಅಲ್ಲದೆ ಮೀನುಗಾರರಿಗೆ ಪ್ರತ್ಯೇಕ ಜಲ ಶಕ್ತಿ ಸಚಿವಾಲಯ ಸ್ಥಾಪನೆ ಮಾಡಲಾಗುತ್ತದೆ. ನದಿ ನೀರನ್ನು ಸದುಪಯೋಗಪಡಿಸಿಕೊಳ್ಳಲಾಗುತ್ತದೆ. ಪ್ರತಿಯೊಂದು ಪ್ರದೇಶದ ಜನರಿಗೂ ನಲ್ಲಿಯ ಮೂಲಕ ನದಿಯ ನೀರು ಸಿಗುವಂತೆ ಯೋಜನೆ ರೂಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಒಂದು ಬಲಿಷ್ಠ ತಂಡವನ್ನು ನೇಮಿಸಲಾಗುತ್ತದೆ ಎಂದು ತಿಳಿಸಿದರು.

ಸ್ವಚ್ಛತಾ ಆಂದೋಲನಲ್ಲಿಯೂ ದೇಶದ ಜನರ ಬೆಂಬಲ ಸಿಕ್ಕಿದೆ. ಅಭಿವೃದ್ಧಿಗೂ ದೇಶದ ಜನರ ಬೆಂಬಲ ಸಿಕ್ಕಿದೆ. ದೆಹಲಿಯಲ್ಲಿ ಎಸಿ ರೂಂನಲ್ಲಿ ಕೂರುವುದರಿಂದ ಬಡತನ ನಿರ್ಮೂಲನೆ ಸಾಧ್ಯವಿಲ್ಲ. ಬಡತನವನ್ನು ಬಡತನದಿಂದ ಹೋಗಲಾಡಿಸಬೇಕು. ದೇಶದ ಜನರಿಗೆ ಏನು ಕೊಟ್ಟು ಕಡಿಮೆ ಎನ್ನುವ ಮಾತಿದೆ. ಇದು ತಪ್ಪು ಕಲ್ಪನೆ, ದೇಶದ ಜನರಿಗೆ ಮಾಡುವ ಅವಮಾನ. ಸಾಕಷ್ಟು ಜನರು ಗ್ಯಾಸ್ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. 50 ಲಕ್ಷ ಹಿರಿಯ ನಾಯಕರು ರೈಲ್ವೇಯಲ್ಲಿ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. 130 ಕೋಟಿ ಜನರಿಗೂ ದೇಶದ ಅಭಿವೃದ್ಧಿ ಬೇಕಾಗಿದೆ. ಆ ಎಲ್ಲ ಜನರು ಶಕ್ತಿಯನ್ನು ಅಭಿವೃದ್ಧಿಯಾಗಿ ಬದಲಾಯಿಸ್ತೇವೆ ಎಂದು ತಿಳಿಸಿದರು.

ನಮ್ಮ ಸಂಕಲ್ಪ ಪತ್ರ ಶಾಸನ ಪತ್ರ, ದೇಶದ ಸಂರಕ್ಷಣೆ ಪತ್ರ, ದೇಶದ ಸಮೃದ್ಧಿಯ ಪತ್ರವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 2022ರ ವೇಳೆಗೆ 75 ವರ್ಷವಾಗುತ್ತದೆ. ಇಂತಹ ಸನ್ನಿವೇಶಗಳು ಪ್ರೇರಣೆಗೆ ಸಾಕ್ಷಿ ಆಗಲಿದೆ. ಪ್ರೇರಣೆಯನ್ನು ಮುನ್ನಡೆಸುವರು ಬೇಕು. 2019-24 ಗಟ್ಟಿಯಾದ ಅಭಿವೃದ್ಧಿ ಅಡಿಪಾಯ ಹಾಕಲಿದ್ದೇವೆ. ಸಕಾರಾತ್ಮಕ ದೃಷ್ಟಿಯಿಂದ ದೇಶವನ್ನು ಮುಂದೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಿದ್ದೇವೆ. 2047ಕ್ಕೆ ದೇಶದ ಕನಸು ಸಹಕಾರ ಆಗಬೇಕಿದೆ. ಅದಕ್ಕೆ ಅಡಿಪಾಯ ಹಾಕುವ ರೀತಿಯ ಕೆಲಸ 2019-24ರಲ್ಲಿ ಕೆಲಸವಾಗಬೇಕಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *