ಡಿಕೆಶಿಗೆ ಭಾರೀ ಮುಖಭಂಗ – ಶಾಸಕರನ್ನು ರಕ್ಷಿಸಲು ಸುಳ್ಳು ಹೇಳಿ ಭಾರೀ ಟೀಕೆಗೆ ಗುರಿಯಾದ್ರು ಡಿಕೆ ಬ್ರದರ್ಸ್!

Public TV
2 Min Read

ಬೆಂಗಳೂರು: ಜನಾರ್ದನ ರೆಡ್ಡಿ, ಶ್ರೀರಾಮುಲು ಅವರ ಭದ್ರಕೋಟೆಯನ್ನು ಕೆಡವಿ ಬಳ್ಳಾರಿಯ ರಾಜ ನಾನೇ ಎಂದು ಪೋಸ್ ಕೊಟ್ಟಿದ್ದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಭಾರೀ ಮುಖಭಂಗವಾಗಿದೆ. ಶಾಸಕರನ್ನು ರಕ್ಷಿಸಲು ಈಗ ಡಿಕೆ ಸಹೋದರರು ಸುಳ್ಳಿನ ಮೇಲೆ ಸುಳ್ಳನ್ನು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಈಗ ಗುರಿಯಾಗುತ್ತಿದ್ದಾರೆ.

ಹೌದು, ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ಇಬ್ಬರು ಒಳ್ಳೇಯ ಸ್ನೇಹಿತರು ಇಲ್ಲೇ ರೆಸಾರ್ಟ್ ನಲ್ಲೇ ಇದ್ದಾರೆ. ಮಧ್ಯಾಹ್ನ ಇಬ್ಬರು ಒಟ್ಟಿಗೆ ಬಂದು ಪ್ರತಿಕ್ರಿಯೆ ಕೊಡುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರೆ ಮತ್ತೊಂದು ಕಡೆ ಆನಂದ್ ಸಿಂಗ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗೆ ತೆರಳಿ ಸಹೋದರ ಡಿ.ಕೆ ಸುರೇಶ್ ಆರೋಗ್ಯ ವಿಚಾರಿಸಿದ್ದಾರೆ. ಶಾಸಕರ ಮರ್ಯಾದೆ ಉಳಿಸಲು ಡಿಕೆ ಸಹೋದರರು ಸುಳ್ಳು ಮೇಲೆ ಸುಳ್ಳು ಹೇಳಿಕೆ ನೀಡಿ ಈಗ ಪೇಚೆಗೆ ಸಿಲುಕಿದ್ದಾರೆ.

ಜಿಲ್ಲಾ ಉಸ್ತುವಾರಿ ಮಂತ್ರಿ ಸ್ಥಾನವನ್ನು ಪಡೆದು, ಲೋಕಸಭಾ ಉಪಚುನಾವಣೆಯಲ್ಲಿ ಉಗ್ರಪ್ಪನವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ ಬಳಿಕ ಡಿಕೆ ಶಿವಕುಮಾರ್ ಕನಕಪುರದ ಬಳಿಕ ಬಳ್ಳಾರಿ ರಾಜಕೀಯದಲ್ಲೂ ತಮ್ಮ ಪ್ರಭಾವ ವಿಸ್ತರಿಸತೊಡಗಿದ್ದರು. ಆದರೆ ಈಗ ಆನಂದ್ ಸಿಂಗ್ ಪ್ರಕರಣದಿಂದಾಗಿ ಡಿಕೆಶಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ:ಮೊದ್ಲು ಮದುವೆ ಬಳಿಕ ಎದೆನೋವು ಈಗ ಆಕ್ಸಿಡೆಂಟ್ – ಕಡೆಗೂ ಆನಂದ್ ಸಿಂಗ್ ತಲೆಗೆ 12 ಹೊಲಿಗೆ!

ಶಾಸಕರನ್ನು ತಮ್ಮ ಜಿಲ್ಲಾ ವ್ಯಾಪ್ತಿಯ ರೆಸಾರ್ಟ್ ಗೆ ಕರೆತಂದು ಸರ್ಕಾರದ ರಕ್ಷಣೆ, ಶಾಸಕರ ರಕ್ಷಣೆ ಮಾಡುವುದು ನಾವೇ ಎಂದು ಡಿಕೆ ಸಹೋದರು ಪೋಸ್ ಕೊಟ್ಟಿದ್ದರು. ಉಗ್ರಪ್ಪನವರನ್ನು ಗೆಲ್ಲಿಸಿದ ಬಳಿಕ ಬಳ್ಳಾರಿಯ ಶಾಸಕರು ಹಾಗೂ ಸಚಿವರು ನಾನು ಹೇಳಿದಂತೆ ಕೇಳಬಹುದು ಎನ್ನುವ ನಂಬಿಕೆಯಲ್ಲಿದ್ದ ಡಿಕೆ ಶಿವಕುಮಾರ್ ಈಗ ಆನಂದ್ ಸಿಂಗ್ ಪ್ರಕರಣವನ್ನು ನಿಭಾಯಿಸುವುದು ಹೇಗೆ ಎನ್ನುವ ಚಿಂತೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ಆನಂದ್ ಸಿಂಗ್ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲು: ಸಂಸದ ಡಿಕೆ ಸುರೇಶ್

ವಿಶೇಷ ಏನೆಂದರೆ ಶನಿವಾರ ಸಂಜೆ ವಿಧಾನಸೌಧದಲ್ಲಿ ನಡೆದ ಬಳ್ಳಾರಿ ಜಿಲ್ಲೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಲು ಬಳ್ಳಾರಿ ಶಾಸಕರನ್ನು ರೆಸಾರ್ಟಿನಿಂದ ತಮ್ಮ ಕಾರಿನಲ್ಲೇ ಡಿಕೆಶಿ ಕರೆದುಕೊಂಡು ಹೋಗಿದ್ದರು. ಅಷ್ಟೇ ಅಲ್ಲದೇ ಬಳ್ಳಾರಿ ಶಾಸಕರು ಯಾರು ಕಾಂಗ್ರೆಸ್ ಬಿಡಲ್ಲ ಎನ್ನುವುದನ್ನು ತೋರಿಸಲು ಸಂಜೆ ಮಾಧ್ಯಮಗಳ ಮುಂದೆ ನಿಲ್ಲಿಸಿ ಡಿಕೆಶಿ ಪೋಸ್ ಕೊಟ್ಟಿದ್ದರು. ರಾತ್ರಿ ರೆಸಾರ್ಟಿನಿಂದ ಮನೆಗೆ ತೆರಳಿದ್ದ ಡಿಕೆಶಿಗೆ ಬೆಳಗಿನ ಜಾವ ಆನಂದ್ ಸಿಂಗ್, ಗಣೇಶ್ ಹೊಡೆದಾಟದ ಸುದ್ದಿ ಕೇಳಿ ಶಾಕ್ ಆಗಿ ತಕ್ಷಣವೇ ಬಿಡದಿಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಯಾವ ಹೊಡೆದಾಟವೂ ಇಲ್ಲ, ಬಾಟಲಿಯೂ ಇಲ್ಲ: ಡಿಕೆಶಿ

ಒಂದು ಕಡೆ ಶಾಸಕರನ್ನ ಹಿಡಿದಿಟ್ಟುಕೊಳ್ಳಬೇಕು ಮತ್ತೊಂದು ಕಡೆ ಪಕ್ಷದ ಮಾನವನ್ನು ಕಾಪಾಡಬೇಕು. ಶಾಸಕರನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದ ತಪ್ಪಿಗೆ ಈಗ ಎಲ್ಲದಕ್ಕೂ ತಾವೇ ಉತ್ತರ ಕೊಡಬೇಕು ಎನ್ನುವ ಚಿಂತೆಗೆ ಈಗ ಡಿಕೆ ಸಹೋದರರು ಬಿದ್ದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *