Tuesday, 23rd July 2019

ಯಾವ ಹೊಡೆದಾಟವೂ ಇಲ್ಲ, ಬಾಟಲಿಯೂ ಇಲ್ಲ: ಡಿಕೆಶಿ

ಬೆಂಗಳೂರು: ರೆಸಾರ್ಟ್‍ಗೆ ಹೋಗಿದ್ದ ಕಾಂಗ್ರೆಸ್ ಶಾಸಕರ ನಡುವೆ ಮಾರಾಮಾರಿ ನಡೆದಿದೆ ಎಂಬ ವಿಚಾರವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವ ಶಾಸಕರು ಮಾರಾಮಾರಿ ಮಾಡಿಕೊಂಡಿಲ್ಲ. ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ನಾವೆಲ್ಲರು ನಿನ್ನೆ ಬಳ್ಳಾರಿಯಲ್ಲಿ ನಡೆದ ಸಭೆ ಮುಗಿಸಿಕೊಂಡು, ಅಮಿತ್ ಪಾಳ್ಯ ಅವರ ಮದುವೆ ಆರತಕ್ಷತೆಗೆ ಹೋಗಿ ವಾಪಾಸ್ಸಾಗಿದ್ದೇವೆ. ಬಳಿಕ ಎಲ್ಲಾ ಊಟ ಮಾಡಿ ಮಲಗಿದ್ದಾರೆ. ಆನಂದ್ ಸಿಂಗ್ ಅವರು ಮದುವೆಗೆ ಹೋಗಿದ್ದಾರೆ. ಸುಮ್ಮನೆ ಗಲಾಟೆಯಾಯ್ತು, ಮಾರಮಾರಿಯಾಯ್ತು ಅಂತ ಮಾಧ್ಯಮದವರೇ ಸುದ್ದಿ ಮಾಡಿಕೊಂಡಿದ್ದೀರಿ. ನಿಮಗೆ ಯಾರೋ ಮಿಸ್‍ಲೀಡ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

 

ಶಾಸಕರ ನಡುವೆ ಯಾವ ಹೊಡೆದಾಟನು ಇಲ್ಲ, ಮಾರಾಮಾರಿನು ಆಗಿಲ್ಲ. ಯಾವ ಬಾಟಲಿಯು ಇಲ್ಲ. ಸ್ವಲ್ಪ ಹೊತ್ತಿನಲ್ಲೇ ಅವರಿಬ್ಬರು ಬಂದು ನಿಮ್ಮೊಂದಿಗೆ ಮಾತಾಡ್ತಾರೆ. ಆನಂದ್ ಸಿಂಗ್ ಕುಟುಂಬದ ಮದುವೆ ಇದೆ ಎಂದು ಹೋಗಿದ್ದಾರೆ. ಗಲಾಟೆ ನಿಜವಾಗಿಯೂ ನಡೆದಿದ್ದರೆ ಬನ್ನಿ ಯಾವ ಆಸ್ಪತ್ರೆಯಲ್ಲಿ ಇದ್ದಾರೆ ಶಾಸಕರು ಅಂತ ನೋಡೋಣ ನಾನು ಬರ್ತಿನಿ ಎಂದು ಡಿಕೆಶಿವಕುಮಾರ್ ಅಂದ್ರು.

ಹೊಸಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ನಡುವೆ ಮಾರಾಮಾರಿ ನಡೆದಿದ್ದು, ಬೆಳಗಿನ ಜಾವ ಸುಮಾರು ಮೂರು ಗಂಟೆ ಈ ಗಲಾಟೆ ನಡೆದಿದೆಯಂತೆ. ಕಾಂಗ್ರೆಸ್ ಶಾಸಕರು ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಉಳಿದಿದ್ದರು. ಶನಿವಾರ ರಾತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್‍ಪಿ ಸಭೆ ಮುಗಿದ ನಂತರ ಕೈ ಶಾಸಕರು ಪಾರ್ಟಿ ಮಾಡಿದ್ದಾರೆ.

ಇಂದು ಬೆಳಗಿನ ಜಾವದವರೆಗೂ ಪಾರ್ಟಿ ನಡೆದಿದೆ. ಅಷ್ಟೇ ಅಲ್ಲದೇ ಇಂದು ವೇಣುಗೋಪಾಲ್ ಜೊತೆ ಪ್ರತ್ಯೇಕ ಸಭೆ ಹಿನ್ನೆಲೆಯಲ್ಲಿ ರೆಸಾರ್ಟ್ ನಲ್ಲಿ ತಂಗಿದ್ದರು. ಆದರೆ ಪಾರ್ಟಿ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದ್ದು, ಗಲಾಟೆಯಲ್ಲಿ ಶಾಸಕ ಗಣೇಶ್ ಕೋಪಗೊಂಡು ಬಾಟಲ್ ನಿಂದ ಆನಂದ್ ಸಿಂಗ್ ತಲೆಗೆ ಹೊಡೆದಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *