ಮೋದಿ ಆಗಮನ- ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಹಾವು, ನಾಯಿ ಹಿಡಿಯಲು ಟೀಂ ನೇಮಕ

Public TV
2 Min Read

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ನಗರಕ್ಕೆ ಬರುವ ಹಿನ್ನಲೆಯಲ್ಲಿ ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಇಂದಿನಿಂದಲೇ ಬಿಗಿ ಭದ್ರತೆಯನ್ನು ಆಯೋಜಿಸಲಾಗಿದೆ. ನಿಲ್ದಾಣದಲ್ಲಿ ಹಾವು, ನಾಯಿಗಳನ್ನ ಹಿಡಿಯಲು ಸಿಬ್ಬಂದಿಯನ್ನ ನೇಮಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ನಾಳೆ ಆಗಮಿಸುತ್ತಿದ್ದು, ಮಂಜುನಾಥ ದೇವರಿಗೆ ಪೂಜೆಯನ್ನು ಸಲ್ಲಿಸಿ ನಂತರ ಮಧ್ಯಾಹ್ನ ಸುಮಾರು 3.30 ಕ್ಕೆ ಬೆಂಗಳೂರಿಗೆ ಬಜ್ಪೆಯಿಂದ ವಿಮಾನದ ಮೂಲಕ ಆಗಮಿಸುತ್ತಿದ್ದಾರೆ. ಬೆಂಗಳೂರಿಗೆ ಬಂದು ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ಸೌಂದರ್ಯ ಲಹರಿ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೋದಿ ಬರುವ ಹಿನ್ನಲೆಯಲ್ಲಿ ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಹಾವು ಮತ್ತು ನಾಯಿಗಳನ್ನು ಹಿಡಿದು ಹಾಕಿ ಎಂದು ಪೊಲೀಸರು ಬಿಬಿಎಂಪಿಗೆ ಮನವಿ ಮಾಡಿಕೊಂಡಿದ್ದಾರೆ. ಪೊಲೀಸರ ಮನವಿಯ ಮೇರೆಗೆ ಬಿಬಿಎಂಪಿ ವಿಮಾನ ನಿಲ್ದಾಣದಲ್ಲಿ ಹಾವು, ನಾಯಿಗಳನ್ನು ಹಿಡಿಯಲು ಅರಣ್ಯ ಘಟಕದ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ.

ಲಹರಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಸಂಜೆ ಸುಮಾರು 4.45 ಕ್ಕೆ ಬೆಂಗಳೂರಿನಿಂದ ಬೀದರ್‍ಗೆ ಪ್ರಧಾನಿ ಮೋದಿ ಅವರು ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಸಂಜೆ 5.10 ಕ್ಕೆ ಬೀದರ್-ಕಲಬುರಗಿ ರೈಲು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ಸಂಜೆ 6.20 ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ನಾಳೆ ಬೆಳಗ್ಗೆ 10.45ಕ್ಕೆ ಶ್ರೀಕ್ಷೇತ್ರಕ್ಕೆ ಆಗಮಿಸಲಿರುವ ಪ್ರಧಾನಿ, ಮಂಜುನಾಥ ಸ್ವಾಮಿಯ ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಲಿದ್ದಾರೆ. ಸಾಮಾನ್ಯವಾಗಿ ಕುರ್ತಾ, ಫೈಜಾಮಾ ಧರಿಸಲಿರೋ ಪ್ರಧಾನಿ, ನಾಳೆ ಪಂಜೆ- ಶಲ್ಯ ತೊಟ್ಟು ಪೂಜೆಯಲ್ಲಿ ತೊಡಗಲಿದಾರೆ. ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ 2 ಗಂಟೆವರೆಗೆ ಭಕ್ತಾದಿಗಳಿಗೆ ದರ್ಶನ ಭಾಗ್ಯ ನಿರ್ಬಂಧಿಸಲಾಗಿದೆ. ದೇವರ ದರ್ಶನ ವೇಳೆ ಅಧಿಕಾರಿಗಳು ಹಾಗೂ ಸಚಿವರಿಗಳಿಗೂ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಾಳೆ ಬೆಳಗ್ಗೆ 9ರಿಂದ ಧರ್ಮಸ್ಥಳ-ಉಜಿರೆ-ಕೊಕ್ಕಡ ನಡುವೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಆದ್ರೆ ಚಾರ್ಮಾಡಿ, ಮಂಗಳೂರು ರಸ್ತೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಮುನ್ನೆಚ್ಚರಿಕೆಯಾಗಿ ಬಿಗಿ ಭದ್ರತೆ ಮಾಡಲಾಗಿದೆ. ಪ್ರಧಾನಿ ಸ್ವಾಗತಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ನವವಧುವಿನಂತೆ ಶೃಂಗಾರಗೊಂಡಿದೆ.

ಸಚಿವರಾದ ಅನಂತ ಕುಮಾರ್, ಡಿ. ವಿ. ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ, ಬಿ. ರಮಾನಾಥ ರೈ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್, ಡಿ. ವೀರೇಂದ್ರ ಹೆಗ್ಗಡೆ, ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *