ಬೆಳಗಾವಿ/ಮುಂಬೈ: ಮಹಾರಾಷ್ಟ್ರದ ಪುಣೆಯ (Pune Rape Case) ಹಳ್ಳಿಯೊಂದರಲ್ಲಿ 65 ವರ್ಷದ ವೃದ್ಧನೊಬ್ಬ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಭೀಮರಾವ್ ಕಾಂಬಳೆ ಎಂಬಾತ ಈ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಎರಡು ಕಂದಮ್ಮಗಳು ಬಲಿ: ಮಕ್ಕಳಿಗೆ ವಿಷವಿಕ್ಕಿ ತಾಯಿಯೂ ಆತ್ಮಹತ್ಯೆಗೆ ಯತ್ನ
ಆರೋಪಿಯು ಮಗುವಿಗೆ ತಿಂಡಿ ಕೊಡಿಸುವ ಆಮಿಷ ಒಡ್ಡಿ ದನಗಳ ಗೂಡಿನಲ್ಲಿರುವ ಕೊಟ್ಟಿಗೆಗೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದಿದ್ದಾನೆ ಎಂದು ಪುಣೆ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.
ಶಾಲಾ ರಜಾದಿನಗಳಲ್ಲಿ ತನ್ನ ಅಜ್ಜಿಯನ್ನು ಭೇಟಿ ಮಾಡಲು ಹೋಗಿದ್ದ ಬಾಲಕಿ ಮಧ್ಯಾಹ್ನ ನಾಪತ್ತೆಯಾಗಿದ್ದಳು. ಆಕೆಯ ಕುಟುಂಬದವರು ಹುಡುಕಾಟ ನಡೆಸಿದ್ದರು. ಶೋಧದ ಸಮಯದಲ್ಲಿ, ಹತ್ತಿರದ ನಿವಾಸದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಯು ಮಗುವನ್ನು ಶೆಡ್ ಕಡೆಗೆ ಕರೆದೊಯ್ಯುತ್ತಿರುವುದು ಕಂಡುಬಂದಿದೆ. ಇದನ್ನು ಆಧರಿಸಿ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ. ಇದನ್ನೂ ಓದಿ: ಹಳಿ ಮೇಲೆ ಕೆಲಸ ಮಾಡುತ್ತಿದ್ದ ನೌಕರನಿಗೆ ರೈಲು ಡಿಕ್ಕಿ – ಗಂಭೀರ ಗಾಯ
ಮಗುವಿನ ಶವವನ್ನು ಶೆಡ್ ಒಳಗೆ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಪುಣೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಊರಿನ ಗ್ರಾಮಸ್ಥರು ಸುಮಾರು 2 ಗಂಟೆಗಳ ಕಾಲ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಆರೋಪಿಗೆ ಗಲ್ಲುಶಿಕ್ಷೆ ನೀಡುವಂತೆ ಒತ್ತಾಯಿಸಿದರು. ನಂತರ ಪೊಲೀಸರು ಮನವೊಲಿಸಿದ ಬಳಿಕ ಊರಿನವರು ಪ್ರತಿಭಟನೆ ಹಿಂಪಡೆದರು.

