ಬೆಂಗಳೂರಿನ ಹಲವೆಡೆ ಸುರಿದ ಮಳೆ – ರಸ್ತೆಗಳು ಜಲಾವೃತ, ಜಯನಗರದಲ್ಲಿ ಆಟೋ ಮೇಲೆ ಉರುಳಿದ ಮರ

1 Min Read

ಬೆಂಗಳೂರು: ಸಿಲಿಕಾನ್‌ ಸಿಟಿಯ ಹಲವೆಡೆ ಇಂದು ಕೂಡ ಮಳೆ ಸುರಿದಿದೆ. ಕಾರ್ಪೋರೇಷನ್, ಶಾಂತಿನಗರ, ಕೆ.ಆರ್. ಮಾರ್ಕೆಟ್ ಸೇರಿ ಹಲವೆಡೆ ಮಳೆಯಾಗಿದೆ.

ಟೌನ್ ಹಾಲ್ ಭಾಗದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಮಳೆಗೆ ವಾಹನ ಸವಾರರು ಪರದಾಡಿದ್ದಾರೆ. ಇಂದು ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು. ಇದನ್ನೂ ಓದಿ: ಪೀಣ್ಯ ಫ್ಲೈಓವರ್‌ನಲ್ಲಿ 4 ದಿನ ವಾಹನ ಸಂಚಾರಕ್ಕೆ ನಿರ್ಬಂಧ

ಎಡಬಿಡದೆ ಸುರಿದ ಮಳೆಗೆ ರಸ್ತೆ ಕೆರೆಯಂತಾಗಿದೆ. ಜಯನಗರದ ಅಶೋಕ್ ಫಿಲ್ಲರ್ ಬಳಿ ಮಳೆ ನೀರು ತುಂಬಿ ಹರಿದಿದೆ. ಅರವಿಂದ ಜಂಕ್ಷನ್‌ನಲ್ಲಿ ಧರೆಗೆ ಮರ ಉರುಳಿದೆ. ಸುತ್ತಮುತ್ತ ಟ್ರಾಫಿಕ್ ಜಾಮ್‌ ಆಗಿ ವಾಹನ ಸಂಚಾರ ನಿಧಾನಗತಿಯಾಯಿತು.

ಮೆಜೆಸ್ಟಿಕ್‌ ಭಾಗದಲ್ಲೂ ಭಾರೀ ಮಳೆಯಾಗಿದೆ. ಮಳೆಗೆ ವಾಹನ ಸವಾರರು ಪರದಾಡಿದರು. ಸೆಂಟ್ ಮಾರ್ಕ್ಸ್ ರಸ್ತೆ ಮಳೆ ನೀರಿನಿಂದ ಆವೃತವಾಗಿದೆ. 24ನೇ ಮುಖ್ಯ ರಸ್ತೆ ಜೆಪಿ ನಗರದಲ್ಲಿ ಮಳೆ ನೀರು ನಿಂತಿರುವುದರಿಂದ 33ನೇ ಮುಖ್ಯ ರಸ್ತೆ ಮತ್ತು 14ನೇ ಮುಖ್ಯ ರಸ್ತೆ ಜೆಪಿ ನಗರದ ಕಡೆಗೆ ನಿಧಾನಗತಿಯ ಸಂಚಾರವಿದೆ.

ಜಯನಗರದ ಸಿದ್ಧಾರೂಢ ಆಶ್ರಮಕ್ಕೆ ಮಳೆ ನೀರು ನುಗ್ಗಿದೆ. ಅರ್ಧ ಗಂಟೆ ಮಳೆಯಿಂದ ಮಠದ ಆವರಣದೊಳಗೆ ನೀರು ತುಂಬಿತ್ತು. ಹಳೆಯ ಕಟ್ಟಡ ಆಗಿದ್ದರಿಂದ ಮಳೆಯ ತೇವಾಂಶಕ್ಕೆ ಗೋಡೆಯ ಸಿಮೆಂಟ್ ಕುಸಿದಿದೆ. ಮೊನ್ನೆಯ ಮಳೆಗೂ ಆಶ್ರಮದ ಗೋಡೆ ಕುಸಿದಿತ್ತು. ಬನ್ನೇರುಘಟ್ಟ ರಸ್ತೆ, ಹುಳಿಮಾವು ಬಳಿ ರಸ್ತೆ ಜಲಾವೃತಗೊಂಡಿದೆ. ಇದನ್ನೂ ಓದಿ: ಗ್ಯಾಸ್ ಬೆಲೆ ಏರಿಕೆ ಮಾಡಿ, ಸೌದೆ ಭಾಗ್ಯ ಕೊಡುತ್ತಿದ್ದಾರೆ: ಡಿಕೆಶಿ

ಜಯನಗರ ಈಸ್ಟ್ ಆ್ಯಂಡ್ ಸಮೀಪ ಬೃಹತ್ ಮರ ಚಲಿಸುತ್ತಿದ್ದ ಆಟೋ ಮೇಲೆ ಬಿದ್ದಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆಟೋ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.

Share This Article