– ಮತಯಂತ್ರಗಳನ್ನ ಬದಲಾಯಿಸಲು ಬಿಜೆಪಿ ಸಂಚು; ಸಿಎಂ ಆರೋಪ
ಕೋಲ್ಕತ್ತಾ: ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಈ ಬಾರಿ 226 ಕ್ಕ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಭವಿಷ್ಯ ನುಡಿದಿದ್ದಾರೆ.
192 ± 11 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎನ್ನುವ ಟುಡೇಸ್ ಚಾಣಕ್ಯ (Today’s Chanakya) ಸಮೀಕ್ಷೆಯನ್ನ ತಳ್ಳಿಹಾಕಿದ ದೀದಿ, ತಮ್ಮ ತೃಣಮೂಲ ಕಾಂಗ್ರೆಸ್ ಪಕ್ಷ 226 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಎಂದಿದ್ದಾರೆ. ಮುಂದುವರಿದು.. ಮೇ 4 ರಂದು ಎಲ್ಲಾ ಮತ ಎಣಿಕೆ ಕೇಂದ್ರಗಳ ಸುತ್ತ ಕಾವಲು ಕಾಯುವಂತೆ ಕಾರ್ಯಕರ್ತರನ್ನು ಒತ್ತಾಯಿಸಿದ್ದಾರೆ.

ಪಕ್ಷದ ಕಾರ್ಯಕರ್ತರು (Party Workers) ಮತ್ತು ಬೆಂಬಲಿಗರನ್ನು ಉದ್ದೇಶಿಸಿ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ನಮ್ಮ ಕಾರ್ಯಕರ್ತರು ಮೇ 4 ರಂದು ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಕಾವಲಿರಬೇಕು. ನಿರಂತರ ಜಾಗರೂಕತೆ ವಹಿಸಬೇಕು. ಅಭ್ಯರ್ಥಿಗಳು ಹಾಗೂ ಪಕ್ಷದ ಹಿರಿಯ ನಾಯಕರು ಎಲ್ಲಾ 294 ಕ್ಷೇತ್ರಗಳಾದ್ಯಂತ ಎಣಿಕೆ ಕೇಂದ್ರಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಬೇಕೆಂದು ಕರೆ ನೀಡಿದ್ದಾರೆ.
ಇವಿಎಂ ಬದಲಾಯಿಸಲು ಬಿಜೆಪಿ ಸಂಚು
ಪಕ್ಷದ ವಿವಿಧ ಘಟಕದ ಮುಖ್ಯಸ್ಥರು ಇವಿಎಂಗಳ (EVM) ನಿರ್ವಹಣೆಯನ್ನ ಸೂಕ್ಷ್ಮವಾಗಿ ಗಮನಿಸಬೇಕು. ವಿಶೇಷವಾಗಿ ಸ್ಟ್ರಾಂಗ್ ರೂಮ್‌ಗಳಿಂದ ಎಣಿಕೆ ಕೇಂದ್ರಗಳಿಗೆ ಸಾಗಿಸುವಾಗ ಅದರ ಮೇಲೆ ನಿಗಾ ಇಡಬೇಕು. ಏಕೆಂದರೆ ಮತಯಂತ್ರಗಳನ್ನು ಎಣಿಕೆ ಕೇಂದ್ರಗಳಿಗೆ ಸಾಗಿಸುವಾಗ ಬಿಜೆಪಿ ಅವುಗಳನ್ನು ಬದಲಾಯಿಸುವ ಸಂಚು ರೂಪಿಸಿದೆ. ಆದ್ದರಿಂದ ಎಣಿಕೆ ಕೇಂದ್ರಗಳ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ.

ನಾನೇ ಕಾವಲಿಗೆ ಹೋಗ್ತೀನಿ
ನಮ್ಮ ಕಾರ್ಯಕರ್ತರೊಂದಿಗೆ ಸಾರ್ವಜನಿಕರು ಒಗ್ಗಟ್ಟಿನಿಂದ ಇರಬೇಕು. ಇಂದಿನಿಂದಲೇ ಮತ ಎಣಿಕೆ ಪ್ರಕ್ರಿಯೆ, ಮತ ಎಣಿಕೆ ಸೌಲಭ್ಯಗಳ ಮೇಲೆ 24 ಗಂಟೆ ನಿಗಾ ಇಡಬೇಕು. ಅಗತ್ಯಬಿದ್ದರೆ ನನ್ನ ಸ್ವಂತ ಕ್ಷೇತ್ರದಲ್ಲಿ (ಭಬನಿಪುರ) ಕಾವಲು ಕಾಯಲು ನಾನೂ ಹೋಗ್ತೀನಿ. ಪಕ್ಷದ ಹಿರಿಯ ನಾಯಕರು ಕಾರ್ಯಕರ್ತರನ್ನ ಹಗಲಿನಲ್ಲಿ ಕರ್ತವ್ಯಕ್ಕೆ ನಿಯೋಜಿಸಿ ರಾತ್ರಿ ವೇಳೆ ನೀವೇ ಕಾವಲು ಕಾಯಬೇಕು. ನನ್ನಿಂದಲೇ ಕಾವಲು ಕಾಯೋದಕ್ಕೆ ಸಾಧ್ಯವಾಗುತ್ತೆ ಅನ್ನೋದಾದ್ರೆ, ನಿಮ್ಮಿಂದಲೂ ಅದು ಆಗುತ್ತದೆ. ರಾತ್ರಿ ಕಾವಲು ಕಾದು ಬೆಳಗ್ಗೆ ಮಲಗಿ, ಮತ ಎಣಿಕೆ ಮುಗಿಯುವವರೆಗೆ ಈ ಪ್ರಕ್ರಿಯೆ ನಿರಂತರವಾಗಿರಬೇಕು ಎಂದು ಎಚ್ಚರಿಸಿದ್ದಾರೆ.
2016, 2021ರ ಚುನಾವಣೋತ್ತರ ಸಮೀಕ್ಷೆಗಳು ಇದೇ ರೀತಿಯ ಫಲಿತಾಂಶಗಳನ್ನ ತೋರಿಸಿದ್ದವು. ಆಗಲೂ ಬಿಜೆಪಿ ವಿಫಲವಾಯಿತು. ಈ ಬಾರಿಯೂ ಅದೇ ಪುನರಾವರ್ತನೆಯಾಗಲಿದೆ.

