ಪಶ್ಚಿಮ ಬಂಗಾಳ ಕಲ್ಲಿದ್ದಲು ಹಗರಣ| I-PAC ನಿರ್ದೇಶಕನಿಗೆ ಜಾಮೀನು ಮಂಜೂರು

2 Min Read

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ ಎನ್ನಲಾದ ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ(Coal Scam) ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ (Money Laundering) ಪ್ರಕರಣದಲ್ಲಿ ಐ-ಪಿಎಸಿ (I-PAC) ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ವಿನೇಶ್ ಚಾಂಡೆಲ್ ಅವರಿಗೆ ನವದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ವಿಚಾರಣೆಯ ಸಮಯದಲ್ಲಿ ವಿನೇಶ್ ಚಾಂಡೆಲ್ ಸಲ್ಲಿಸಿದ್ದ ಜಾಮೀನು(Bail) ಅರ್ಜಿಯನ್ನು ಜಾರಿ ನಿರ್ದೇಶನಾಲಯ(ED) ವಿರೋಧಿಸಲಿಲ್ಲ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಜಾಮೀನು ಮಂಜೂರು ಮಾಡಿತು. ಚಾಂಡೆಲ್ ಅವರು ಇದುವರೆಗೆ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ ಮತ್ತು ಅಗತ್ಯವಿದ್ದಾಗಲೆಲ್ಲಾ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಗಮನಿಸಿದೆ. ಹೀಗಾಗಿ ಜಾಮೀನು ನಿರಾಕರಿಸಲು ಯಾವುದೇ ಬಲವಾದ ಕಾರಣಗಳಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ಜಾಮೀನು ಅರ್ಜಿಯಲ್ಲಿ ತಾಯಿ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಅವರ ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆ ಮಾನವೀಯ ಆಧಾರದ ಮೇಲೆ ಮಧ್ಯಂತರ ಪರಿಹಾರವನ್ನು ನೀಡುವಂತೆ ಚಾಂಡೆಲ್ ಮನವಿ ಮಾಡಿದ್ದರು. ಇದನ್ನೂ ಓದಿ: ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌

ಜಾಮೀನು ನೀಡುವಾಗ ನ್ಯಾಯಾಲಯವು ಚಾಂಡೆಲ್ ಅವರಿಗೆ ಹಲವು ಷರತ್ತುಗಳನ್ನು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ತಿರುಚಲು ಪ್ರಯತ್ನಿಸಬಾರದು, ಯಾವುದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ತನಿಖೆಗೆ ಸಂಪೂರ್ಣ ಸಹಕಾರ ಮುಂದುವರಿಸಬೇಕು, ಅಗತ್ಯವಿದ್ದಾಗ ತನಿಖೆಗೆ ಹಾಜರಾಗಲು ಲಭ್ಯವಿರಬೇಕು ಎಂದು ಸೂಚಿಸಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಎಪ್ರಿಲ್ 13ರಂದು ಚಾಂಡೆಲ್ ಅವರನ್ನು ಬಂಧಿಸಲಾಗಿತ್ತು.

ಏನಿದು ಕೇಸ್‌?
ಪಶ್ಚಿಮ ಬಂಗಾಳದ ಅಸನ್ಸೋಲ್ ಸುತ್ತಮುತ್ತಲಿನ ಕುನುಸ್ಟೋರಿಯಾ ಮತ್ತು ಕಜೋರಾ ಪ್ರದೇಶಗಳಲ್ಲಿನ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (ECL) ಗಣಿಗಳಿಗೆ ಸಂಬಂಧಿಸಿದ ಬಹುಕೋಟಿ ಕಲ್ಲಿದ್ದಲು ಕಳ್ಳತನ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ನವೆಂಬರ್ 2020 ರಲ್ಲಿ ಎಫ್‌ಐಆರ್‌ ದಾಖಲಿಸಿತ್ತು. ಈ ಎಫ್‌ಐಆರ್‌ ಆಧಾರದ ಮೇಲೆ ಇಡಿ ತನ್ನ ತನಿಖೆಯನ್ನು ಆರಂಭಿಸಿತ್ತು.

ಕಲ್ಲಿದ್ದಲು ಕಳ್ಳಸಾಗಣೆ ಜಾಲದೊಂದಿಗೆ ಸಂಬಂಧ ಹೊಂದಿರುವ ಹವಾಲಾ ನಿರ್ವಾಹಕನೊಬ್ಬ, I-PAC ನೋಂದಾಯಿತ ಘಟಕವಾದ ‘ಇಂಡಿಯನ್ PAC ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌’ಗೆ ಹತ್ತಾರು ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದಾನೆ. ಈ ಅಕ್ರಮ ಹವಾಲಾ ಹಣವನ್ನು ಪಡೆದ ಘಟಕಗಳಲ್ಲಿ I-PAC ಕೂಡ ಸೇರಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿತ್ತು.

Share This Article