ಬೆಂಗಳೂರಿನಲ್ಲಿ ಸುರಿದ ಭೀಕರ ಮಳೆಗೆ 7 ಬಲಿ – ಗೋಡೆ ಕುಸಿತಕ್ಕೆ ಕಾರಣ ಏನು?

2 Min Read

ಬೆಂಗಳೂರು: ದೀರ್ಘಕಾಲದ ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಸಿಲಿಕಾನ್ ಸಿಟಿ (Bengaluru) ಜನತೆಗೆ ನಿನ್ನೆ ಸಂಜೆ ಸುರಿದ ಮಳೆ ತಂಪು ನೀಡಿತಾದರೂ, ಅದರ ಬೆನ್ನಲ್ಲೇ ಮಳೆರಾಯ ಭೀಕರ ದುರಂತವನ್ನೂ ಹೊತ್ತು ತಂದಿದ್ದಾನೆ. ನಗರದ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ(Bowring Hospital) ಬಳಿ ಸಂಭವಿಸಿದ ಗೋಡೆ ಕುಸಿತದ ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 7 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ನಿನ್ನೆ ಸಂಜೆ ನಗರದಾದ್ಯಂತ ದಿಢೀರ್ ಆಲಿಕಲ್ಲು ಸಹಿತ ಭಾರೀ ಮಳೆ (Heavy Rain) ಸುರಿದಿದೆ. ಮಳೆಯ ಆರ್ಭಟಕ್ಕೆ ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಗೋಡೆಯ ಪಕ್ಕದಲ್ಲೇ ಆಶ್ರಯ ಪಡೆದಿದ್ದ ಮತ್ತು ವ್ಯಾಪಾರ ಮಾಡುತ್ತಿದ್ದ ಸಾರ್ವಜನಿಕರ ಮೇಲೆ ಅವಶೇಷಗಳು ಬಿದ್ದಿದ್ದರಿಂದ ಈ ಸಾವು-ನೋವು ಸಂಭವಿಸಿದೆ.

ದುರಂತಕ್ಕೆ ಕಾರಣಗಳೇನು?
ಈ ಭೀಕರ ಅವಘಡಕ್ಕೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ನೇರ ಕಾರಣ ಎನ್ನಲಾಗುತ್ತಿದೆ. ಕುಸಿದು ಬಿದ್ದ ಕಾಂಪೌಂಡ್ ಗೋಡೆ ಸುಮಾರು 30 ವರ್ಷಗಳಷ್ಟು ಹಳೆಯದಾಗಿದ್ದು, ತೀವ್ರವಾಗಿ ಶಿಥಿಲಗೊಂಡಿತ್ತು.

ಹಳೆಯ ಕಟ್ಟಡಗಳು ಮತ್ತು ಕುಸಿಯುವ ಹಂತದಲ್ಲಿರುವ ಗೋಡೆಗಳ ಬಗ್ಗೆ ಜಿಬಿಎ ಅಧಿಕಾರಿಗಳು ಗಮನಹರಿಸಬೇಕಿತ್ತು. ಆದರೆ, ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರಲಿಲ್ಲ. ಇದನ್ನೂ ಓದಿ: 25 ವರ್ಷಗಳ ಬಳಿಕ ಬೆಂಗಳೂರಲ್ಲಿ ದಾಖಲೆಯ ಮಳೆ – 170 ಮರಗಳು ಧರಾಶಾಹಿ, 68 ಕಡೆ ಜಲಾವೃತ

 

 

ಆಸ್ಪತ್ರೆಯ ಪಕ್ಕದಲ್ಲಿ ನಡೆಯುತ್ತಿದ್ದ ಕಾಮಗಾರಿಗಾಗಿ ಮಣ್ಣನ್ನು ತಂದು ಗೋಡೆಯ ಪಕ್ಕದಲ್ಲೇ ಹಾಕಲಾಗಿತ್ತು. ಮಳೆಯಿಂದಾಗಿ ಮಣ್ಣು ತೇವಾಂಶ ಭರಿತವಾಗಿ ಭಾರ ಹೆಚ್ಚಾದ ಕಾರಣ ಗೋಡೆ ಕುಸಿದಿರುವ ಸಾಧ್ಯತೆಯಿದೆ.

ಬೀದಿ ವ್ಯಾಪಾರಿಗಳಿಗೆ ಸ್ಥಳವಾಕಾಶ ಕೂಡ ಜಿಬಿಎನಿಂದಲೇ (GBA) ಆಗುತ್ತದೆ. ಈ ವೇಳೆಯೂ ಗಮನಕ್ಕೆ ಬರಲಿಲ್ಲವೇ ಎನ್ನುವುದು ಅಚ್ಚರಿ ಮೂಡಿಸಿದೆ. ಬಹಳ ಮುಖ್ಯವಾಗಿ ಗೋಡಿ ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಸ್ಥಳೀಯರು ಈಗಾಗಲೇ ದೂರು ನೀಡಿದ್ದರೂ ಸಹ ಅಧಿಕಾರಿಗಳು, ಶಾಸಕರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ಧಾಳಿ:
ಈ ಘಟನೆ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್. ಅಶೋಕ್, ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. “ಐವರು ಕಮಿಷನರ್‌ಗಳಿದ್ದರೂ ನಗರದ ರಕ್ಷಣೆ ಸಾಧ್ಯವಾಗುತ್ತಿಲ್ಲ. ಸಿಎಂ ಮತ್ತು ಡಿಸಿಎಂ ದೆಹಲಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದು, ಬೆಂಗಳೂರಿನ ಜನರ ಸಂಕಷ್ಟ ಕೇಳುವವರಿಲ್ಲ. ಈ ಘಟನೆಗೆ ಸರ್ಕಾರವೇ ನೇರ ಹೊಣೆ” ಎಂದು ಅವರು ಆರೋಪಿಸಿದ್ದಾರೆ.

ಮುಂಗಾರು ಮಳೆ ಅಧಿಕೃತವಾಗಿ ಆರಂಭವಾಗುವ ಮೊದಲೇ ಬೆಂಗಳೂರಿನಲ್ಲಿ ಇಂತಹ ದೊಡ್ಡ ಮಟ್ಟದ ದುರಂತ ಸಂಭವಿಸಿರುವುದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ. ನಗರದ ಮೂಲಸೌಕರ್ಯಗಳ ಬಗ್ಗೆ ಪಾಲಿಕೆ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಇನ್ನಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ.

Share This Article