West Bengal Election| ಹಲವು ಮತಗಟ್ಟೆಗಳಲ್ಲಿ ಕಮಲದ ಬಟನ್‌ ಮೇಲೆ ಟೇಪ್‌ – ಮರುಮತದಾನಕ್ಕೆ ಬಿಜೆಪಿ ಆಗ್ರಹ

2 Min Read

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಡೈಮಂಡ್ ಹಾರ್ಬರ್ (Diamond Harbour) ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಫಾಲ್ಟಾ (Falta) ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಮತದಾನದ (Election) ವೇಳೆ ಗಂಭೀರ ಆರೋಪವೊಂದು ಕೇಳಿಬಂದಿದೆ.

ಫಾಲ್ಟಾದ ಹಲವಾರು ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ (EVM) ಮೇಲಿರುವ ಬಿಜೆಪಿಯ ‘ಕಮಲ’ ಚಿಹ್ನೆಯ ಬಟನ್ ಅನ್ನು ಟೇಪ್‌ನಿಂದ ಮುಚ್ಚಲಾಗಿದೆ ಎಂದು ಬಿಜೆಪಿ (BJP) ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ(Amit Malviya) ಅವರು ವಿಡಿಯೋ ಸಹಿತ ಆರೋಪಿಸಿದ್ದಾರೆ.

ಈ ಕುತಂತ್ರವನ್ನು ಅಮಿತ್ ಮಾಳವೀಯ “ಡೈಮಂಡ್ ಹಾರ್ಬರ್ ಮಾಡೆಲ್” ಎಂದು ಕರೆದಿದ್ದು, ಟಿಎಂಸಿ ಕಾರ್ಯಕರ್ತರು ಮತದಾರರಿಗೆ ಬಿಜೆಪಿಗೆ ಮತ ಹಾಕದಂತೆ ತಡೆಯಲು ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದು ದೂರಿದ್ದಾರೆ.

ಯಾವ ಮತಗಟ್ಟೆಗಳಲ್ಲಿ ಟೇಪ್‌ನಿಂದ ಮುಚ್ಚಲಾಗಿದೆಯೋ ಆ ಎಲ್ಲಾ ಮತಗಟ್ಟೆಗಳಲ್ಲಿ ತಕ್ಷಣವೇ ಮರುಮತದಾನ (Repoll) ನಡೆಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಈ ಕುರಿತು ವರದಿ ಕೇಳಲಾಗಿದ್ದು, ಒಂದು ವೇಳೆ ಆರೋಪಗಳು ನಿಜವೆಂದು ಕಂಡುಬಂದಲ್ಲಿ ಆ ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ನಡುವೆ ಚುನಾವಣಾ ಪ್ರಕ್ರಿಯೆಯಲ್ಲಿ ಪಕ್ಷಪಾತ ಮಾಡಿದ ಆರೋಪದ ಮೇಲೆ ಫಾಲ್ಟಾದ ಇನ್ಸ್‌ಪೆಕ್ಟರ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ. ಇದನ್ನೂ ಓದಿ: ಬಂಗಾಳ ಚುನಾವಣೆಯಲ್ಲಿ ಹಿಂಸಾಚಾರ – ಬಿಜೆಪಿ ಕಾರ್ಯಕರ್ತನ ಮೇಲೆ ದಾಳಿ, ಟಿಎಂಸಿಯಿಂದ ಬೂತ್ ಧ್ವಂಸ

ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ 2026ರ ವಿಧಾನಸಭಾ ಚುನಾವಣೆಯ ಮತದಾನದ ವೇಳೆ, ಕೇಂದ್ರ ಚುನಾವಣಾ ಆಯೋಗದಿಂದ ನೇಮಕಗೊಂಡ ಪೊಲೀಸ್ ವೀಕ್ಷಕ ಉತ್ತರ ಪ್ರದೇಶ ಕೆಡರ್‌ನ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಮತ್ತು ಮತ್ತು ತೃಣಮೂಲ ಕಾಂಗ್ರೆಸ್ (TMC) ಅಭ್ಯರ್ಥಿ ಜಹಾಂಗೀರ್ ಖಾನ್ ನಡುವೆ ತೀವ್ರ ಗಲಾಟೆ ನಡೆದಿತ್ತು.

ಜಹಾಂಗೀರ್ ಖಾನ್ ಅವರ ನಿವಾಸ ಮತ್ತು ಚುನಾವಣಾ ಕಚೇರಿಗೆ ಭೇಟಿ ನೀಡಿದ್ದ ಅಜಯ್ ಪಾಲ್ ಶರ್ಮಾ “ಮತದಾರರಿಗೆ ಬೆದರಿಕೆ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಆಮೇಲೆ ಅಳಬೇಡಿ” ಎಂದು ನೇರವಾಗಿಯೇ ಎಚ್ಚರಿಕೆ ನೀಡಿದ್ದರು

ಅಜಯ್ ಪಾಲ್ ಶರ್ಮಾ ಅವರನ್ನು ‘ಸಿಂಗಮ್’ ಎಂದು ಕರೆಯಲಾಗುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಜಹಾಂಗೀರ್ ಖಾನ್, “ಅವರು ಸಿಂಗಮ್ ಆದರೆ, ನಾನು ಪುಷ್ಪ; ನಾನು ಯಾವುದಕ್ಕೂ ಬಗ್ಗುವುದಿಲ್ಲ” ಎಂದು ಸವಾಲು ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿಯ ಮಗ (ಅಳಿಯ) ಅಭಿಷೇಕ್ ಬ್ಯಾನರ್ಜಿ ಅವರು ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

2014 ರಿಂದ ಅಭಿಷೇಕ್‌ ಬ್ಯಾನರ್ಜಿ ಸತತ ಮೂರು ಬಾರಿ ಇಲ್ಲಿ ಗೆದ್ದಿದ್ದಾರೆ. 2019 ರಲ್ಲಿ ಒಟ್ಟು 7,91,127 ಮತ ಪಡೆದು 3.20 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರೆ 2024 ರಲ್ಲಿ ಒಟ್ಟು 10,48,230 ಮತಗಳನ್ನು ಪಡೆದು 7,10,930 ಮತಗಳ ಅಂತರದಿಂದ ಗೆದ್ದಿದ್ದರು.

Share This Article