ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ

2 Min Read

ಕೆಜಿಎಫ್ ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ, ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಬಿಡುಗಡೆ ದಿನಾಂಕ (Release Date) ಮತ್ತೆ ಮುಂದೂಡಿಕೆಯಾಗಿದೆ.

ಈ ಹಿಂದೆ ಟಾಕ್ಸಿಕ್‌(Toxic) ಚಿತ್ರವನ್ನು ಜೂನ್ 4 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಇತ್ತೀಚೆಗೆ ಅಮೆರಿಕದ(USA) ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ ‘ಸಿನೆಮಾಕಾನ್’ (CinemaCon) ಈವೆಂಟ್‌ನಲ್ಲಿ ಟಾಕ್ಸಿಕ್ ಚಿತ್ರದ ಪ್ರೆಸೆಂಟೇಶನ್‌ಗೆ ಜಾಗತಿಕ ವಿತರಕರು ಮತ್ತು ಚಿತ್ರೋದ್ಯಮದ ಪ್ರಮುಖರಿಂದ ಭರ್ಜರಿ ಮತ್ತು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಜಾಗತಿಕ ಮಾರುಕಟ್ಟೆಯ ಬೇಡಿಕೆ ಮತ್ತು ಚಿತ್ರದ ವಿಸ್ತಾರವನ್ನು ಪರಿಗಣಿಸಿ, ಚಿತ್ರವನ್ನು ವಿಶ್ವದಾದ್ಯಂತ ಏಕಕಾಲದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಉದ್ದೇಶದಿಂದ ದಿನಾಂಕವನ್ನು ಮರುಹೊಂದಿಸಲು ನಿರ್ಧರಿಸಲಾಗಿದೆ ಎಂದು ಯಶ್‌ ಅಧಿಕೃತವಾಗಿ ತಿಳಿಸಿದ್ದಾರೆ.

ಯಶ್ ಹೇಳಿದ್ದೇನು?
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಮಾಹಿತಿ ಹಂಚಿಕೊಂಡಿರುವ ಯಶ್, “ನಾವು ಕೆಲವು ಸಿನಿಮಾಗಳನ್ನು ಮಾಡುತ್ತೇವೆ, ಆದರೆ ಮತ್ತೆ ಕೆಲವು ಸಿನಿಮಾಗಳು ನಾವು ಚಿತ್ರರಂಗವನ್ನು ಏಕೆ ಇಷ್ಟಪಟ್ಟೆವು ಎಂಬುದನ್ನು ನೆನಪಿಸುತ್ತವೆ. ಟಾಕ್ಸಿಕ್ ಅಂತಹ ಒಂದು ಪಯಣ” ಎಂದು ಬಣ್ಣಿಸಿದ್ದಾರೆ.

ಸಿನೆಮಾಕಾನ್‌ನಲ್ಲಿನ ಪ್ರತಿಕ್ರಿಯೆಯ ಬಗ್ಗೆ ಮಾತನಾಡಿದ ಅವರು, “ಸಿನೆಮಾಕಾನ್‌ನಲ್ಲಿ ನಮ್ಮ ಚಿತ್ರವನ್ನು ಪ್ರದರ್ಶಿಸಿದಾಗ ಸಿಕ್ಕ ಅಭೂತಪೂರ್ವ ಜಾಗತಿಕ ಪ್ರತಿಕ್ರಿಯೆಯು, ಈ ಚಿತ್ರವು ವಿಶ್ವದಾದ್ಯಂತ ತನ್ನ ಪೂರ್ಣ ಸಾಮರ್ಥ್ಯದೊಂದಿಗೆ ತಲುಪಬೇಕು ಎಂಬ ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಆದ್ದರಿಂದ ನಾವು ಚಿತ್ರದ ಬಿಡುಗಡೆಯ ಸಮಯವನ್ನು ಮರುಹೊಂದಿಸಲು ನಿರ್ಧರಿಸಿದ್ದೇವೆ. ಈ ಮೊದಲು ಘೋಷಿಸಿದಂತೆ ಜೂನ್ ೪ ರಂದು ಸಿನಿಮಾ ಬಿಡುಗಡೆಯಾಗುವುದಿಲ್ಲ. ಬದಲಾಗಿ, ಜಾಗತಿಕ ಮಾರುಕಟ್ಟೆಗೆ ಪೂರಕವಾದ ಮತ್ತು ಅನುಕೂಲಕರವಾದ ಹೊಸ ದಿನಾಂಕದಂದು ವಿಶ್ವದಾದ್ಯಂತ ತೆರೆಕಾಣಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

 

View this post on Instagram

 

A post shared by Yash (@thenameisyash)


“ಭಾರತೀಯ ಚಿತ್ರರಂಗವು ತನ್ನದೇ ಆದ ಹೊಸ ಛಾಪು ಮೂಡಿಸುತ್ತಾ, ಭರವಸೆಯೊಂದಿಗೆ ಜಾಗತಿಕ ವೇದಿಕೆಗೆ ಹೆಜ್ಜೆ ಇಡುತ್ತಿರುವ ಈ ಸಮಯದಲ್ಲಿ, ಚಿತ್ರರಂಗದ ಮಟ್ಟವನ್ನು ಎತ್ತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಒಬ್ಬ ನಟ ಮತ್ತು ನಿರ್ಮಾಪಕನಾಗಿ, ಈ ಕ್ಷಣವನ್ನು ನಾನು ಭಾರತೀಯ ಚಿತ್ರೋದ್ಯಮಕ್ಕೆ ಮತ್ತು ನಮ್ಮೆಲ್ಲರಿಗೂ ನನ್ನ ಕೈಲಾದ ಕೊಡುಗೆ ನೀಡುವ ಅವಕಾಶವಾಗಿ ನೋಡುತ್ತಿದ್ದೇನೆ. ನಮ್ಮ ಸಿನಿಮಾ ಜಾಗತಿಕ ಮಟ್ಟದಲ್ಲಿ ತಲುಪಬೇಕಾದ ಪ್ರಭಾವವನ್ನು ಖಚಿತಪಡಿಸಿಕೊಳ್ಳಲು ನಾವು ಈ ಸಮಯವನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದಿದ್ದಾರೆ.

ಅಭಿಮಾನಿಗಳಿಗೆ ಭರವಸೆ:
ತಮ್ಮ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ತಾಳ್ಮೆಯಿಂದ ಇರಲು ಯಶ್ ಮನವಿ ಮಾಡಿದ್ದಾರೆ. “ಪ್ರತಿಯೊಂದು ಹಂತದಲ್ಲೂ ನಿಮ್ಮ ಬೆಂಬಲ ನನ್ನೊಂದಿಗಿದೆ, ಅದಕ್ಕಾಗಿ ನಾನು ಚಿರಋಣಿ. ಕೆಲವು ಕಥೆಗಳು ತಾಳ್ಮೆಯನ್ನು ಬಯಸುತ್ತವೆ, ಕೆಲವು ಪಯಣಗಳು ಅದನ್ನು ಕೇಳುತ್ತವೆ. ನಿಮ್ಮ ಸಂಭ್ರಮಕ್ಕೆ ಉತ್ತಮ ಸಿನಿಮಾ ನೀಡುವುದಾಗಿ ನಾವು ಭರವಸೆ ನೀಡುತ್ತೇವೆ. ಇದು ಭಾರತೀಯ ಚಿತ್ರರಂಗ ಹೆಮ್ಮೆಪಡುವಂತಹ ಕ್ಷಣವಾಗಲಿದೆ” ಎಂದು ಯಶ್ ಭರವಸೆ ನೀಡಿದ್ದಾರೆ.

ಚಿತ್ರದ ಹೊಸ ಮತ್ತು ಅಂತಿಮ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ಗೀತು ಮೋಹನ್ ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುವ ನಿರೀಕ್ಷೆಯಿದೆ.

Share This Article