ಬೆಂಗಳೂರು: ಡಾ.ರಾಜ್ಕುಮಾರ್ (Dr.Rajkumar) ಎಂದರೆ ಆರು ಕೋಟಿ ಕನ್ನಡಿಗರ ಭಾವನೆ. ಅಣ್ಣಾವ್ರ ಬಗ್ಗೆ ಹಗುರವಾಗಿ ಮಾತನಾಡುವುದು ಅಹಂಕಾರದ ಪರಮಾವಧಿ. ಹೆಸರಿನಲ್ಲಿ ಅಹಿಂಸೆ ಇರಬಹುದು. ಆದರೆ, ನಿಮ್ಮ ಪ್ರತಿಯೊಂದು ಮಾತೂ ಕನ್ನಡಿಗರ ಭಾವನೆಗಳಿಗೆ ಮಾಡುವ ಹಿಂಸೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ನಟ ಚೇತನ್ ಅಹಿಂಸಾ (Chetan Ahimsa) ಅವರಿಗೆ ತಿರುಗೇಟು ನೀಡಿದ್ದಾರೆ.
ಡಾ. ರಾಜ್ಕುಮಾರ್ ಕುರಿತು ಚೇತನ್ ಮಾಡಿದ್ದ ಪೋಸ್ಟ್ಗೆ Xನಲ್ಲಿ ತಿರುಗೇಟು ನೀಡಿದ ಅವರು, ಗೋಕಾಕ್ ಚಳವಳಿಯ ಮೂಲಕ ಕನ್ನಡಕ್ಕೆ ಅಸ್ಮಿತೆ ತಂದುಕೊಟ್ಟ ಧೀಮಂತ ವ್ಯಕ್ತಿತ್ವದ ಬಗ್ಗೆ ಟೀಕಿಸುವ ಮೊದಲು ಇತಿಹಾಸ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ರಾಜ್ಕುಮಾರ್ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್
ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜವಾದರೂ ಅವುಗಳಿಗೆ ಒಂದು ಘನತೆ ಇರಬೇಕು. ನಮ್ಮ ಕುಟುಂಬದ ಮೇಲಿನ ವೈಯಕ್ತಿಕ ದಾಳಿ ಅಥವಾ ಸೋಲು-ಗೆಲುವಿನ ಮಾತುಗಳನ್ನು ನಾವು ಸದಾ ವಿನಮ್ರತೆಯಿಂದಲೇ ಸ್ವೀಕರಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪುಗಾರರು ಜನರೇ ಹೊರತು, ಸಮಾಜದಲ್ಲಿ ದ್ವೇಷ ಬಿತ್ತುವ ವ್ಯಕ್ತಿಗಳಲ್ಲ. ಸಂಸ್ಕಾರ ಮನೆಯಿಂದ ಬರಬೇಕು. ಟೀಕೆಗಳು ಜನರ ಪ್ರೀತಿಯ ಅಡಿಪಾಯದ ಮೇಲಿರಬೇಕು. ಕೇವಲ ಪ್ರಚಾರದ ಹಪಾಹಪಿಯಿಂದಲ್ಲ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

