ಮಕ್ಕಳ ಜೊತೆ ಫುಟ್‌ಬಾಲ್ – ಗೋಲ್‌ ಹೊಡೆದು ಸಂಭ್ರಮಿಸಿದ ಮೋದಿ

1 Min Read

ಗ್ಯಾಂಗ್ಟಾಕ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ಮಕ್ಕಳ ಜೊತೆ ಫುಟ್‌ಬಾಲ್ (Football) ಆಡಿ ಸಂಭ್ರಮಿಸಿದ್ದಾರೆ.

ಸಿಕ್ಕಿಂ (Sikkim) ಭಾರತದೊಂದಿಗೆ ವಿಲೀನಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ರಾಜ್ಯದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಗ್ಯಾಂಗ್ಟಾಕ್‌(Gangtok) ಆಗಮಿಸಿದ್ದರು.

ಈ ಸಂದರ್ಭದಲ್ಲಿ ಅವರು ಇಂದು ಬೆಳಗ್ಗೆ ಪಾಲ್ಜೋರ್ ಕ್ರೀಡಾಂಗಣಕ್ಕೆ (Paljor Stadium) ಭೇಟಿ ನೀಡಿ ಸ್ಥಳೀಯ ಮಕ್ಕಳೊಂದಿಗೆ ಫುಟ್‌ಬಾಲ್ ಆಡಿದರು.

ನೀಲಿ ಬಣ್ಣದ ಸ್ಪೋರ್ಟ್ಸ್ ಜಾಕೆಟ್ ಧರಿಸಿದ್ದ ಪ್ರಧಾನಿಯವರು, ಮೈದಾನದಲ್ಲಿ ಉತ್ಸಾಹದಿಂದ ಓಡಾಡುತ್ತಾ ಮಕ್ಕಳೊಂದಿಗೆ ಚೆಂಡನ್ನು ಡ್ರಿಬಲ್ ಮಾಡಿದರು. ಆಟದ ವೇಳೆ ಅವರು ಯಶಸ್ವಿಯಾಗಿ ಗೋಲು ಬಾರಿಸಿದರು ಮತ್ತು ಅಲ್ಲಿದ್ದ ಯುವ ಕ್ರೀಡಾಪಟುಗಳೊಂದಿಗೆ ‘ಹೈ-ಫೈವ್’ (High-five) ಮಾಡುವ ಮೂಲಕ ಸಂಭ್ರಮ ಹಂಚಿಕೊಂಡರು.

ಈ ಆಟದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮೋದಿ, “ಪರ್ವತಗಳ ನಡುವೆ ಈ ಯುವ ಸ್ನೇಹಿತರೊಂದಿಗೆ ಕಳೆದ ಬೆಳಗು ಅತ್ಯಂತ ಶಕ್ತಿಯುತವಾಗಿತ್ತು. ಒಂದು ಅತ್ಯಂತ ಸುಂದರ ಮತ್ತು ಚೈತನ್ಯದಾಯಕ ಕ್ಷಣ” ಎಂದು ಬಣ್ಣಿಸಿದ್ದಾರೆ.

ಈ ಭೇಟಿಯು ಕೇವಲ ಆಟಕ್ಕೆ ಸೀಮಿತವಾಗಿರದೆ, ಈಶಾನ್ಯ ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶ ಹೊಂದಿತ್ತು. ಈ ವಿಶೇಷ ಸಂದರ್ಭದಲ್ಲಿ ಅವರು ಸಿಕ್ಕಿಂನ ಅಭಿವೃದ್ಧಿಗಾಗಿ ಸುಮಾರು 4,000 ಕೋಟಿ ರೂ.ಗಳ ಯೋಜನೆಗಳನ್ನು ಉದ್ಘಾಟಿಸಿದರು.

ಈಶಾನ್ಯ ರಾಜ್ಯಗಳನ್ನು ಭಾರತದ ‘ಫುಟ್‌ಬಾಲ್ ಪವರ್‌ಹೌಸ್’ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕೆ ಅಲ್ಲಿನ ಮಕ್ಕಳ ಜೊತೆ ಫುಟ್‌ಬಾಲ್‌ ಆಡಿ ಮೋದಿ ಸಂಭ್ರಮಿಸಿದ್ದಾರೆ.

Share This Article