– ಪುರುಷರಿಗಿಂತ ಮಹಿಳೆಯರೇ ವೋಟಿನಲ್ಲಿ ಮುಂದು
ಕೋಲ್ಕತ್ತಾ: ಪಶ್ಚಿಮಬಂಗಾಳ (West Bengal) ವಿಧಾನಸಭಾ ಚುನಾವಣೆಯಲ್ಲಿ ಮತದಾರ ಹೊಸ ದಾಖಲೆ ಬರೆದಿದ್ದಾನೆ. ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಶೇ.91.78ರಷ್ಟು ಮತದಾನ ನಡೆಯುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಪಶ್ಚಿಮ ಬಂಗಾಳದಲ್ಲಿ ದಾಖಲಾದ ಅತ್ಯಧಿಕ ಮತದಾನ ಇದಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ಮತಪಟ್ಟಿಯ ಸಮಗ್ರ ಪರಿಷ್ಕರಣೆಯಿಂದಾಗಿ ಪಶ್ಚಿಮಬಂಗಾಳದಲ್ಲಿ ಅಲ್ಲೋಲ-ಕಲ್ಲೋಲವಾಗಿತ್ತು. ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಚುನಾವಣಾ ಆಯೋಗದ(Election Commission) ವಿರುದ್ಧ ಟಿಎಂಸಿಯ ಮಮತಾ ಬ್ಯಾನರ್ಜಿ (Mamata Banerjee) ಕೆಂಡಕಾರಿದ್ದರು. ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಬಂಗಾಳ ಸರ್ಕಾರಕ್ಕೆ ಕೋರ್ಟ್ ಚಾಟಿ ಕೂಡ ಬೀಸಿತ್ತು. ಇದೀಗ ಬಂಗಾಳದಲ್ಲಿ ಇಂದು 16 ಜಿಲ್ಲೆಗಳ 152 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ.92.03ರಷ್ಟು ಮತ ಚಲಾವಣೆಯಾಗಿದೆ.




ದಕ್ಷಿಣ ದಿನಾಜ್‌ಪುರ ಜಿಲ್ಲೆಯಲ್ಲಿ ಗರಿಷ್ಠ 96ರಷ್ಟು ಮತದಾನವಾಗಿದ್ದರೆ, ಕಲಿಂಪೋಂಗ್ ಜಿಲ್ಲೆಯಲ್ಲಿ ಶೇ.82.8ರಷ್ಟು ಕನಿಷ್ಠ ಮತದಾನವಾಗಿದೆ. ಇವತ್ತು ನಡೆದ ಚುನಾವಣೆಯ ವಿಶೇಷತೆಯೆಂದರೆ, 2021ರ ಚುನಾವಣೆಯಲ್ಲಿ 152 ಕ್ಷೇತ್ರಗಳ ಪೈಕಿ 59 ಸೀಟ್‌ಗಳನ್ನು ಬಿಜೆಪಿ ಗೆದ್ದಿತ್ತು. ಹೀಗಾಗಿ ಮೊದಲ ಹಂತದ ಚುನಾವಣೆಯಲ್ಲಿ ಅಮಿತ್‌ಶಾ 20, ಮೋದಿ 10, ಆದಿತ್ಯನಾಥ್ 4 ಕಡೆ ಪ್ರಚಾರ ಮಾಡಿದ್ದರು. ಬಿಜೆಪಿಯ ಸಿಎಂಗಳೆಲ್ಲಾ ಒಂದು ರೌಂಡ್ ಓಡಾಡಿದ್ದರು. ಇದನ್ನೂ ಓದಿ: West Bengal Election | ಮತದಾನ ಆರಂಭವಾಗುವ ಮೊದಲೇ ಮತಗಟ್ಟೆಗೆ ಆಗಮಿಸಿದ ಆನೆ!
ಬಂಗಾಳದಲ್ಲಿ ಈಗ ಅಂದಾಜು 10.6 ಕೋಟಿ ಜನಸಂಖ್ಯೆ ಇದೆ ಇದ್ದು 2021ರ ಚುನಾವಣೆ ವೇಳೆಗೆ 7.34 ಕೋಟಿ ಮತದಾರರಿದ್ದರು. ಮತಪಟ್ಟಿ ಬಹಿಷ್ಕರಣೆಗೂ ಮುನ್ನ ಬಂಗಾಳದಲ್ಲಿ 7.66 ಕೋಟಿ ಮತದಾರರಿದ್ದರು.
ಎಸ್‌ಐಆರ್ ಬಳಿಕ ಅಂದಾಜು 6.75 ಕೋಟಿ ಮತದಾರರು ಮತದಾನ ಮಾಡಲು ಅರ್ಹತೆ ಪಡೆದಿದ್ದರು. ಎಸ್‌ಐಆರ್ ಬಳಿಕ ಹಿಂದೂಗಳು ಶೇ.63 (57.47 ಲಕ್ಷ), ಮುಸ್ಲಿಮರು ಶೇ.33ರಷ್ಟು (31.1 ಲಕ್ಷ) ಸೇರಿ ಒಟ್ಟು 90 ಲಕ್ಷ ಮತದಾರರನ್ನು ಹೊರಕ್ಕಿಡಲಾಗಿತ್ತು.

ದಾಖಲೆ ಮತದಾನ
ಅತಿ ಹೆಚ್ಚು ಮತದಾರರು ಡಿಲೀಟ್ ಆಗಿದ್ದ ಕ್ಷೇತ್ರದಲ್ಲೇ ಹೆಚ್ಚು ಮತದಾನ ನಡೆದಿರುವುದು ವಿಶೇಷ. ಮುಸ್ಲಿಂ ಬಾಹುಳ್ಯ ಇರುವ ಸಂಸೇರ್ ಗಂಜ್‌ನಲ್ಲಿ ಶೇ. 95.34ರಷ್ಟು ಮತದಾನ ನಡೆದರೆ ಹಿಂದೂಗಳ ಬಾಹುಳ್ಯ ಇರುವ ರಘುನಾಥ್ ಗಂಜ್‌ನಲ್ಲೂ ಶೇ.97 ರಷ್ಟು ಮತದಾನ ನಡೆದಿದೆ. ಹಿಂಸಾಚಾರಕ್ಕೀಡಾದ ಮುರ್ಷಿದಾಬಾದ್‌ನಲ್ಲಿ ಶೇ.95ರಷ್ಟು ಮತದಾನವಾಗಿದೆ. ವಲಸಿಗರು ಅತ್ಯಧಿಕ ಪ್ರಮಾಣದಲ್ಲಿ ಮತ ಚಲಾವಣೆ ಮಾಡಿದ್ದಾರೆ.
ಈ ಹಿಂದೆ 2011 ರಲ್ಲಿ ಶೇ. 84.72 ರಷ್ಟು ಮತದಾನ ನಡೆದಿತ್ತು. ಈಗ ಶೇ.92.03 ದಾಖಲಾಗಿದೆ. ಇದು ಅಂತಿಮ ಲೆಕ್ಕವಲ್ಲ. ನಾಳೆ ಅಥವಾ ನಾಡಿದ್ದು ಅಂತಿಮ ಲೆಕ್ಕ ಸಿಗುವ ಸಾಧ್ಯತೆಯಿದೆ. ಇದನ್ನೂ ಓದಿ: West Bengal elections 2026 | ಮತದಾನದ ಹೊತ್ತಲ್ಲೇ ಬಂಗಾಳದಲ್ಲಿ ಕಚ್ಚಾ ಬಾಂಬ್ ದಾಳಿ; ಹಲವರು ಗಂಭೀರ
ಈ ಪೈಕಿ ಪುರುಷರು ಶೇ.90.92 ರಷ್ಟು ಮತದಾನ ಮಾಡಿದರೆ ಮಹಿಳೆಯರು ಶೇ.92.69 ರಷ್ಟು, ತೃತೀಯ ಲಿಂಗಿಗಳು ಶೇ. 56.79 ರಷ್ಟು ಮತದಾನ ಮಾಡಿದ್ದಾರೆ.

ಭಾರೀ ಹಿಂಸಾಚಾರ:
ಮೊದಲ ಹಂತದ ಚುನಾವಣೆ ವೇಳೆ ಭಾರೀ ಹಿಂಸಾಚಾರ ನಡೆದಿದೆ. ದಕ್ಷಿಣ ದಿನಾಜ್‌ಪುರದ ಕುಮಾರ್‌ಗಂಜ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಸರ್ಕಾರ್ ಮೇಲೆ ಪೊಲೀಸರ ಎದುರೇ ಟಿಎಂಸಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಇದೇ ಕ್ಷೇತ್ರದಲ್ಲಿ ದಾಖಲೆಯ ಶೇ.96ರಷ್ಟು ಮತದಾನವಾಗಿದೆ.
ಮುರ್ಷಿದಾಬಾದ್‌ನಲ್ಲಿ ಎಜೆಯುಪಿ-ಟಿಎಂಸಿ ಕಾರ್ಯಕರ್ತರ ಮಧ್ಯೆ ಗಲಾಟೆಯಾಗಿದೆ. ಇದೇ ಮತಗಟ್ಟೆಯಲ್ಲೇ ಇವಿಎಂ ದೋಷದ ಆರೋಪ ಕೇಳಿ ಬಂದಿದೆ. ಕೂಚ್‌ಬೆಹಾರ್‌ನಲ್ಲಿ ಟಿಎಂಸಿ ಕಾರ್ಯಕರ್ತರು ರೋಡ್ ತಡೆ ಮಾಡಿದ್ದರು.

